ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹತಾಶೆಯಿಂದ ಬಸನಗೌಡ ಯತ್ನಾಳ ವಿವಾದ ಸೃಷ್ಟಿ: ಮಹಮ್ಮದ್‌ ಇಸ್ಮಾಯಿಲ್‌ ತಮಟಗಾರ

Published 7 ಡಿಸೆಂಬರ್ 2023, 12:21 IST
Last Updated 7 ಡಿಸೆಂಬರ್ 2023, 12:21 IST
ಅಕ್ಷರ ಗಾತ್ರ

ಧಾರವಾಡ: ‘ಮೌಲ್ವಿ ತನ್ವೀರ್‌ ಪೀರಾ ಅವರ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವೇದಿಕೆ ಹಂಚಿಕೊಂಡಿದ್ದಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ತಕರಾರು ಎತ್ತಿದ್ದಾರೆ. ಹಿಂದೊಮ್ಮೆ ಬಿಜೆಪಿಯ ನಿತಿನ್‌ ಗಡ್ಕರಿ ಅವರು ತನ್ವೀರ್‌ ಪೀರಾ ಜತೆ ಫೋಟೊ ತೆಗೆಸಿಕೊಂಡಿದ್ದಾರೆ, ಅದಕ್ಕೆ ಬಸನಗೌಡ ಏನು ಹೇಳುತ್ತಾರೆ?’ ಎಂದು ನಗರದ ಅಂಜುಮನ್‌ ಸಂಸ್ಥೆಯ ಮಾಜಿ ಅಧ್ಯಕ್ಷ ಮಹಮ್ಮದ್‌ ಇಸ್ಮಾಯಿಲ್‌ ತಮಟಗಾರ ಪ್ರಶ್ನಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಸನಗೌಡ ಯತ್ನಾಳ ಅವರ ವರ್ತನೆ ಖಂಡನೀಯ. ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಅಪಪ್ರಚಾರ ಮಾಡುವುದು, ಧಾರ್ಮಿಕ ವಿವಾದ ಸೃಷ್ಟಿಸುವುದನ್ನು ಬಿಟ್ಟು ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಮಾತನಾಡಬೇಕು. ಬಸನಗೌಡ ಜನತಾ ದಳದಲ್ಲಿ ಇದ್ದಾಗ ಮುಸ್ಲಿಮರ ಜತೆ ಅಡ್ಡಾಡಿಲ್ಲವೇ? ವಿಜಯಪುರದಲ್ಲಿ ನಿಮ್ಮ ಜೊತೆ ಯಾವ ಪೀರಾ ಇದ್ದಾರೆ ಎಲ್ಲವೂ ನಮಗೆ ಗೊತ್ತಿದೆ. ಬಸನಗೌಡ ಅವರಿಗೆ ಹತಾಶೆ ಆವರಿಸಿದೆ, ಅವರು ಧಾರವಾಡದ ಮಾನಸಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವುದು ಒಳ್ಳೆಯದು’ ಎಂದು ಕುಟುಕಿದರು.

‘ಮೌಲ್ವಿ ತನ್ವೀರ್‌ ಪೀರಾ ಅವರ ಇರಾಕ್‌ನ ಬಾಗ್ದಾದ್‌ನಲ್ಲಿರುವ ಎ. ಅಜಂ ಮೆಹಬೂಬ್‌ ಸುಬಾನಿ ದರ್ಗಾಕ್ಕೆ 12 ವರ್ಷಗಳ ಹಿಂದೆ ಭೇಟಿ ನೀಡಿದ್ದ ಚಿತ್ರವನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ‘ಎಕ್ಸ್‌’ ಖಾತೆಯಲ್ಲಿ ಹಾಕಿದ್ದಾರೆ. ವಿರೋಧ ಪಕ್ಷದ ನಾಯಕ ಸ್ಥಾನ, ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನ ಸಿಗದಿದ್ದಕ್ಕೆ ಬಸನಗೌಡ ಹತಾಶರಾಗಿ ವಿವಾದ ಸೃಷ್ಟಿಸಿದ್ದಾರೆ’ ಎಂದು ಛೇಡಿಸಿದರು.

‘ಸುಬಾನಿ ದರ್ಗಾದ ಸಜ್ಜಾದ ನಿಶಾನ್‌ ಖಾಲಿದ್‌ ಗಿಲಾನಿ ಅವರ ಜೊತೆ ತನ್ವೀರ್‌ ಪೀರಾ ತೆಗೆಸಿಕೊಂಡಿದ್ದ ಚಿತ್ರಗಳು al.hasmi.org ವೆಬ್‌ಸೈಟ್‌ನಲ್ಲಿ ಇವೆ. ಚಿತ್ರದಲ್ಲಿರುವ ಬಾವುಟ ಇರಾಕ್‌ನದ್ದು. ಈ ದರ್ಗಾವು ಯಾತ್ರಾ ಸ್ಥಳ. ಭಾರತದ ಬಹಳಷ್ಟು ಮಂದಿ ಈ ಯಾತ್ರಾ ಸ್ಥಳಕ್ಕೆ ಭೇಟಿ ನೀಡುತ್ತಾರೆ’ ಎಂದು ಹೇಳಿದರು.

‘ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಕಣಕ್ಕಿಳಿಯುವ ಯೋಚನೆ ಇಲ್ಲ. ಪ್ರಲ್ಹಾದ ಜೋಶಿ ವಿರುದ್ಧ ಮುಸ್ಲಿಂ ಸಮುದಾಯದವರು ಸ್ಪಧಿಸಿದರೆ ಗೆಲುವು ಸಾಧಿಸುವಂಥ ಚಿತ್ರಣ ಕ್ಷೇತ್ರದಲ್ಲಿ ಇಲ್ಲ’ ಎಂದು ಉತ್ತರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT