ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐಸಿಸ್ ಬೆಂಬಲಿಗ ವ್ಯಕ್ತಿ ಜೊತೆ ವೇದಿಕೆ ಹಂಚಿಕೊಂಡ ಸಿದ್ದರಾಮಯ್ಯ: ಯತ್ನಾಳ ಆರೋಪ

ಸೋಮವಾರ ಹುಬ್ಬಳ್ಳಿಯಲ್ಲಿ ನಡೆದಿದ್ದ ದಕ್ಷಿಣ ಭಾರತದ ಮುಸ್ಲಿಂ ಧರ್ಮಗುರುಗಳ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದರು.
Published 6 ಡಿಸೆಂಬರ್ 2023, 10:00 IST
Last Updated 6 ಡಿಸೆಂಬರ್ 2023, 10:00 IST
ಅಕ್ಷರ ಗಾತ್ರ

ಬೆಂಗಳೂರು: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಐಸಿಸ್ (ISIS) ಬೆಂಬಲಿಗ ಹಾಗೂ ಉಗ್ರರ ವಿರುದ್ಧ ಸಹಾನುಭೂತಿಯಳ್ಳ ತನ್ವೀರ್ ಫೀರ್ ಎಂಬಾತನ ಜೊತೆ ವೇದಿಕೆ ಹಂಚಿಕೊಂಡಿದ್ದಾರೆ’ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆರೋಪಿಸಿದ್ದಾರೆ.

ಈ ಕುರಿತು ಬುಧವಾರ ತಮ್ಮ X ತಾಣದಲ್ಲಿ ಟ್ವೀಟ್ ಮಾಡಿರುವ ಯತ್ನಾಳ, ಸಿದ್ದರಾಮಯ್ಯ ಅವರ ಜೊತೆ ವೇದಿಕೆಯೊಂದರಲ್ಲಿ ತನ್ವೀರ್ ಫೀರ್ ಇರುವ ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಅಲ್ಲದೇ ತನ್ವೀರ್ ಫೀರ್ ಮಧ್ಯಪ್ರಾಚ್ಯದಲ್ಲಿ ಉಗ್ರರೊಂದಿಗೆ ಸಂಬಂಧ ಇರುವವರ ಜೊತೆ ನಂಟು ಹೊಂದಿದ್ದಾರೆ ಎಂದು ಬಿಂಬಿಸುವ ಫೋಟೊಗಳನ್ನೂ ಯತ್ನಾಳ ಹಂಚಿಕೊಂಡಿದ್ದಾರೆ.

ಸಿದ್ದರಾಮಯ್ಯ ಅವರು ತನ್ವೀರ್ ಜೊತೆ ಈ ಹಿಂದೆಯೂ ಅನೇಕ ಸಭೆ–ಸಮಾರಂಭಗಳಲ್ಲಿ ವೇದಿಕೆ ಹಂಚಿಕೊಂಡಿದ್ದಾರೆ ಎಂದು ಆರೋಪಿಸಿ, ‘ಸಿದ್ದರಾಮಯ್ಯ ಅವರೇ ತನ್ವೀರ್ ಹಿನ್ನಲೆ ನಿಮಗೆ ಗೊತ್ತೇ?’ ಎಂದು ಪ್ರಶ್ನಿಸಿದ್ದಾರೆ.

‘ತನ್ವೀರ್ ಮಧ್ಯಪ್ರಾಚ್ಯದಲ್ಲಿ ಹೊಂದಿರುವ ನಂಟಿನ ಬಗ್ಗೆ ಎನ್‌ಐಎ ತನಿಖೆ ನಡೆಯಬೇಕು’ ಎಂದು ಯತ್ನಾಳ ಆಗ್ರಹಿಸಿದ್ದಾರೆ.

ಹುಬ್ಬಳ್ಳಿ ಸಮೀಪದ ಪಾಳೆ ಗ್ರಾಮದಲ್ಲಿ ಹಜರತ್ ಸೈಯ್ಯದ ಮೊಹಮ್ಮದ್‌ ಭಾಷಾಪೀರ್‌ ದರ್ಗಾದ ಆವರಣದಲ್ಲಿ ಸೋಮವಾರ ದಕ್ಷಿಣ ಭಾರತದ ಮುಸ್ಲಿಂ ಧರ್ಮಗುರುಗಳ ಸಮ್ಮೇಳನದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಗವಹಿಸಿದ್ದರು.

ಅಮಿತ್ ಶಾಗೆ ಪತ್ರ

ಬೆಳಗಾವಿ: ‘ಇಸ್ಲಾಮಿಕ್ ಸ್ಟೇಟ್ (ಐಎಸ್) ಭಯೋತ್ಪಾದಕ ಸಂಘಟನೆ ಜತೆ ಸಂಪರ್ಕ ಹೊಂದಿರುವ ಮೌಲ್ವಿ ತನ್ವೀರ್ ಪೀರಾ ಅವರ ಒಡನಾಟಗಳ ಬಗ್ಗೆ ಕೇಂದ್ರ  ಸಂಸ್ಥೆಗಳಿಂದ ತನಿಖೆ ನಡೆಸಬೇಕು‘’ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿದ್ದಾರೆ.

ತನ್ವೀರಾ ಅವರ ಕೆಲವು ಫೋಟೋಗಳನ್ನು ತಮ್ಮ ‘ಎಕ್ಸ್‌’ ಖಾತೆಯಲ್ಲಿ ಹಂಚಿಕೊಂಡಿರುವ ಯತ್ನಾಳ, ಇದರ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ವಹಿಸುವಂತೆಯೂ ಮನವಿ ಮಾಡಿದ್ದಾರೆ.

ಐಎಸ್ ನಾಯಕರ ಜತೆಗೆ ಅವರು ಯಾಕೆ ಗುರುತಿಸಿಕೊಂಡಿದ್ದಾರೆ. ಪೀರಾ ಅವರಿಗೆ ಎಲ್ಲಿಂದ ಆರ್ಥಿಕ ನೆರವು ಬಂದಿದೆ ಎಂಬುದನ್ನೂ ತನಿಖೆಯಲ್ಲಿ ಪತ್ತೆ ಹಚ್ಚಬೇಕು ಎಂದು ಮನವಿ ಮಾಡಿದ್ದಾರೆ. 

ಹುಬ್ಬಳ್ಳಿಯಲ್ಲಿ ಸೋಮವಾರ ಸಂಜೆ ನಡೆದ ದಕ್ಷಿಣ ಭಾರತದ ಮುಸ್ಲಿಂ ಧರ್ಮಗುರುಗಳ ಸಮಾವೇಶದಲ್ಲಿ ತನ್ವಿರ್ ಪೀರಾ ಅವರ ಜತೆ ಮುಖ್ಯಮಂತ್ರಿ ಸಿದ್ದರಾಮಯ್ಯ ವೇದಿಕೆ ಹಂಚಿಕೊಂಡಿದ್ದಾರೆ. ಮುಖ್ಯಮಂತ್ರಿ ಕಾರ್ಯಕ್ರಮ ಎಂದರೆ, ಅಲ್ಲಿ ಯಾರ್ಯಾರು ಪಾಲ್ಗೊಳ್ಳುತ್ತಾರೆ ಎಂಬ ಮಾಹಿತಿ ಗುಪ್ತಚರ ಇಲಾಖೆಗೆ ಇರುತ್ತದೆ. ಪೀರಾ ಅವರಿಗೆ ಐಎಸ್ ಸಂಪರ್ಕ ಇದ್ದ ಬಗ್ಗೆ ಮಾಹಿತಿ ಇರಲಿಲ್ಲವೇ ಎಂದೂ ಅವರು ಪ್ರಶ್ನಿಸಿರುವ ಅವರು, ಪೀರಾ ಅವರು ಅನೇಕ ಬಾರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿದ್ದಾರೆ. ಇದರ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಅಮಿತ್ ಶಾಗೆ ಬರೆದ ಪತ್ರದಲ್ಲಿ ಕೋರಿದ್ದಾರೆ. 

ತನ್ವಿರ್ ಪೀರಾ ಅವರು ಯೆಮೆನ್, ಸೌದಿ ಹಾಗೂ ಮಧ್ಯ ಪ್ರಾಚ್ಯ ದೇಶಗಳಲ್ಲಿ ಕೈಗೊಂಡ ಪ್ರವಾಸಗಳ ವೇಳೆ ಭಯೋತ್ಪಾದಕ ಸಂಘಟನೆಗಳ ಪ್ರಮುಖರನ್ನು ಭೇಟಿಯಾಗಿರುವ ಚಿತ್ರಗಳು ಇಲ್ಲಿವೆ ಎಂದು ‘ಎಕ್ಸ್’ ಖಾತೆಯಲ್ಲಿ ಹೇಳಿದ್ದಾರೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT