ಮಂಗಳವಾರ, 5 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯತ್ನಾಳ ಆರೋಪ ಸಾಬೀತು ಪಡಿಸಿದರೆ ದೇಶ ತೊರೆಯಲು ಸಿದ್ಧ: ತನ್ವೀರ್‌ ಹಾಶ್ಮಿ

Published 6 ಡಿಸೆಂಬರ್ 2023, 14:28 IST
Last Updated 6 ಡಿಸೆಂಬರ್ 2023, 14:28 IST
ಅಕ್ಷರ ಗಾತ್ರ

ವಿಜಯಪುರ: 'ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ನನ್ನ ವಿರುದ್ಧ ಮಾಡಿರುವ ಆರೋಪ ಸಾಬೀತು ಪಡಿಸಿದರೆ ನಾನು ಈ ದೇಶವನ್ನೇ ತೊರೆದು ಹೋಗುತ್ತೇನೆ, ಸಾಬೀತು ಮಾಡಲು ಯತ್ನಾಳ ವಿಫಲವಾದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಾಕಿಸ್ತಾನಕ್ಕೆ ಪಲಾಯನ ಮಾಡಬೇಕು' ಎಂದು ಜಮಾತ್‌ ಎ ಅಹಲೆ ಸುನ್ನತ್‌ ಕರ್ನಾಟಕ ರಾಜ್ಯ ಘಟಕದ ಅಧ್ಯಕ್ಷ ಹಾಗೂ ವಿಜಯಪುರದ ಹಜರತ್‌ ಹಾಶಿಂಪೀರ ದರ್ಗಾದ ಧರ್ಮಾಧಿಕಾರಿ ಸೈಯದ್‌ ಮೊಹಮ್ಮದ್‌ ತನ್ವೀರ್‌ ಹಾಶ್ಮಿ ಸವಾಲು ಹಾಕಿದ್ದಾರೆ.

'ಐಸಿಸ್‌ ಜೊತೆ ನಂಟಿದೆ ಎಂದು ಯತ್ನಾಳ ಅವರು ಬಿಡುಗಡೆ ಮಾಡಿರುವ ಚಿತ್ರಗಳು ನನ್ನ ಅಧಿಕೃತ ಫೇಸ್‌ಬುಕ್‌ ಪುಟದಲ್ಲಿ ನಾನೇ ಅಪ್‌ಲೋಡ್‌ ಮಾಡಿರುವ ಚಿತ್ರಗಳಾಗಿವೆ. ಸುಮಾರು 12 ವರ್ಷಗಳ ಹಿಂದೆ ನಾನು ಇರಾಖ್‌ ದೇಶದ ಬಾಗ್ದಾದ್‌ ನಗರದ ಅಂತರರಾಷ್ಟ್ರೀಯ ಪ್ರಸಿದ್ಧ ಸೂಫಿ ಮಹೆಬೂಬ್‌ ಎಸುಭಾನಿ ಗೌಸ್‌ ಎ ಆಜಂ ಅವರ ದರ್ಶನಕ್ಕೆ ಹೋದಾಗ ಅಲ್ಲಿನ ದರ್ಗಾದ ಪೀಠಾಧಿಪತಿ ಖಲೀದ್‌ ಜಿಲಾನಿ ಅವರ ಆಶೀರ್ವಾದ ಪಡೆಯುವ ಸಂದರ್ಭದಲ್ಲಿ ತೆಗೆದಂತಹ ಚಿತ್ರಗಳಾಗಿವೆ.  ಮತ್ತೊಂದು ಚಿತ್ರ, ಅವರ ಅಂಗ ರಕ್ಷಕ ನನ್ನನ್ನು ಪೀಠಕ್ಕೆ ಕರೆದುಕೊಂಡು ಹೋಗುವ ಸಮಯದಲ್ಲಿ ತೆಗೆದ ಚಿತ್ರವಾಗಿದೆ’ ಎಂದು ಸ್ಪಷ್ಟನೆ ನೀಡಿದ್ದಾರೆ.

'ಯತ್ನಾಳ ಆರೋಪದಲ್ಲಿ ಯಾವುದೇ ಸತ್ಯಾಂಶ ಇಲ್ಲ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜನಪ್ರಿಯತೆ ಸಹಿಸಲಾಗದೇ ಹತಾಶರಾಗಿ ಅವರನ್ನು ಗುರಿಯಾಗಿಸಿಕೊಂಡು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ' ಎಂದು ಆರೋಪಿಸಿದ್ದಾರೆ.

'ಐಸಿಸ್‌ ನಂತಹ ಭಯೋತ್ಪಾದಕ ಸಂಘಟನೆ ಜೊತೆ ನನಗೆ ನಂಟಿದೆ ಎಂಬುದರ ಬಗ್ಗೆ ಶಾಸಕರು ಒಂದು ವಾರದೊಳಗೆ ದಾಖಲೆ ಬಿಡುಗಡೆ ಮಾಡಬೇಕು. ಇಲ್ಲವಾದರೆ ಅವರ ವಿರುದ್ಧ ಕಾನೂನಾತ್ಮಕ ಕ್ರಮಕೈಗೊಳ್ಳಲಾಗುವುದು' ಎಂದು ಹೇಳಿದ್ದಾರೆ.

'ಅಂತರರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದನೆ ಖಂಡಿಸುವ ಅನೇಕ ಸಮ್ಮೇಳನ, ಕಾರ್ಯಕ್ರಮಗಳಲ್ಲಿ ನಾನು ಹಲವು ಬಾರಿ ಭಾರತವನ್ನು ಪ್ರತಿನಿಧಿಸುತ್ತಾ ಬಂದಿದ್ದೇನೆ. ರಾಷ್ಟ್ರ, ರಾಜ್ಯದ ಹಲವು ಕೋಮು ಸೌಹಾರ್ದ ಸಮ್ಮೇಳನಗಳಲ್ಲಿ ಪಾಲ್ಗೊಂಡಿದ್ದೇನೆ. ವಿವಿಧ ಧರ್ಮಗುರುಗಳು, ಪೀಠಾಧಿಪತಿಗಳು, ಮಠಾಧೀಶರ ಜೊತೆಯಲ್ಲಿ ಪಾಲ್ಗೊಂಡಿದ್ದೇನೆ' ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT