ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಎಂ ಸ್ಥಾನ ಉಳಿಸಿಕೊಳ್ಳಲು ಬೊಮ್ಮಾಯಿ ಆರ್‌ಎಸ್‌ಎಸ್‌ ಹೊಗಳಿಕೆ: ಸಿದ್ದರಾಮಯ್ಯ

Last Updated 16 ಅಕ್ಟೋಬರ್ 2021, 5:30 IST
ಅಕ್ಷರ ಗಾತ್ರ

ಹುಬ್ಬಳ್ಳಿ: 'ಬಸವರಾಜ ಬೊಮ್ಮಾಯಿ ಮುಖ್ಯಮಂತ್ರಿ ಸ್ಥಾನ ಉಳಿಸಿಕೊಳ್ಳಲು ಆರ್‌ಎಸ್‌ಎಸ್‌ ಹೊಗಳುತ್ತಿದ್ದಾರೆ' ಎಂದು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದರು.

ಶನಿವಾರ ನಗರ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಬಸವರಾಜ ಬೊಮ್ಮಾಯಿ‌ ಮೂಲತಃ ಆರ್‌ಎಸ್‌ಎಸ್‌ ಅಲ್ಲ. ಅಲ್ಲಿ ಹೋಗಿ ಸೇರಿಕೊಂಡಿದ್ದಾರೆ. ಸಿಎಂ ಸ್ಥಾನ ಉಳಿಸಿಕೊಳ್ಳಬೇಕೆಂದರೆ ಆರ್‌ಎಸ್‌ಎಸ್‌ ಹೊಗಳಲೇಬೇಕಾದ ಅನಿವಾರ್ಯತೆಯಿದೆ' ಎಂದರು.

'ಬಿ.ಎಸ್. ಯಡಿಯೂರಪ್ಪ ಅವರನ್ನು ಸಿದ್ದರಾಮಯ್ಯ ಗೋಪ್ಯವಾಗಿ ಭೇಟಿಯಾಗಿದ್ದಾರೆ' ಎನ್ನುವ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, 'ಇದು ಅಪ್ಪಟ ಸುಳ್ಳು. ಅದನ್ನು ಸಾಬೀತು‌ಪಡಿಸಿದರೆ ನಾನು ರಾಜಕೀಯ ನಿವೃತ್ತಿ ಘೋಷಿಸುತ್ತೇನೆ. ಯಡಿಯೂರಪ್ಪ‌ ಆರೆಸ್ಸೆಸ್'ನಿಂದ ಬಂದವರು. ನಾನು ಅವರು ಸೇರಲು ಸಾಧ್ಯವೇ ಇಲ್ಲ. ಅಲ್ಲದೆ, ರಾಜಕೀಯವಾಗಿ‌ ಆರೆಸ್ಸೆಸ್ ವಿರುದ್ಧ ಬೆಳೆದವನು ನಾನು. ಅಧಿಕಾರದಲ್ಲಿದ್ದವರ ಮನೆ ಬಾಗಿಲಿಗೆ ನಾ ಎಂದೂ ಹೋಗಿಲ್ಲ. ಕಾಂಗ್ರೆಸ್ ಜಾತ್ಯತೀತ, ಪ್ರಜಾಪ್ರಭುತ್ವಕ್ಕೆ ಬದ್ಧವಾಗಿರುವ ಪಕ್ಷ. ಬಿಜೆಪಿ ಇದಕ್ಕೆ ವಿರುದ್ಧವಾದ ಪಕ್ಷ' ಎಂದರು.

'ಸಿದ್ದರಾಮಯ್ಯ ಹೇಳಿದ್ದಕ್ಕೆ ಅವರ ಶಿಷ್ಯ ಉಗ್ರಪ್ಪ ಅವರು ಡಿ.ಕೆ. ಶಿವಕುಮಾರ ವಿರುದ್ಧ ಮಾತನಾಡಿದ್ದಾರೆ' ಎನ್ನುವ ಜಗದೀಶ ಶೆಟ್ಟರ್ ಹೇಳಿಕೆಗೆ, 'ಹಿಂದೆ‌ ಸಿ.ಎಂ. ಆಗಿದ್ದವರ ಮಾತಿಗೆ ತರ್ಕ‌ ಇರಬೇಕು. ಉಗ್ರಪ್ಪ ಯಾರ ಶಿಷ್ಯರೂ ಅಲ್ಲ. ಅವರೊಬ್ಬ ನಾಯಕ.‌ ನನಗಿಂತಲೂ ಹಿರಿಯರು. ಯಡಿಯೂರಪ್ಪರ ಮನೆಯಲ್ಲಿ ದುಡ್ಡು ಸಂಗ್ರಹವಾಗುತ್ತದೆ ಎಂದು ಯತ್ನಾಳ, ವಿಶ್ವನಾಥ ಹೇಳಿಕೆ ನೀಡಿದ್ದರು. ಅದನ್ನೂ ನಾನೇ ಹೇಳಿಸಿದ್ದೇನಾ? ಎಲ್ಲದಕ್ಕೂ ನನ್ನನ್ನೇ ಟಾರ್ಗೆಟ್ ಮಾಡಿದರೆ ಹೇಗೆ?' ಎಂದು‌ ಪ್ರಶ್ನಿಸಿದರು.

'ಸಿ.ಎಂ. ಇಬ್ರಾಹಿಂ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿದ್ದು ಕಾಂಗ್ರೆಸ್. ಅಲ್ಲದೆ, ಇನ್ನೂ ಅನೇಕ ಮುಸ್ಲಿಂ ನಾಯಕರು ನಮ್ಮ ಪಕ್ಷದಲ್ಲಿ ಇದ್ದಾರೆ. ಹೀಗಿದ್ದಾಗ ಅವರು ಕಾಂಗ್ರೆಸ್'ಲ್ಲಿ ಅಲ್ಪಸಂಖ್ಯಾತರಿಗೆ ಅಧಿಕಾರ ಸಿಗುತ್ತಿಲ್ಲ ಎನ್ನುವುದರಲ್ಲಿ ಅರ್ಥವಿಲ್ಲ. ರಾಜಕೀಯ‌ ಲಾಭಕ್ಕಾಗಿ‌ ಟಿಪ್ಪು ಜಯಂತಿ ಆಚರಿಸುತ್ತಿದ್ದಾರೆ ಎಂದಿರುವ ಅವರ ಜೊತೆ ಮಾತನಾಡುತ್ತೇನೆ. ಅವರು ಟಿಪ್ಪುಬಗ್ಗೆ ಸರಿಯಾಗಿ ಓದಿಕೊಂಡಿಲ್ಲ' ಎಂದು ಹೇಳಿದರು.

'ಆರೆಸ್ಸೆಸ್'ನವರೆಲ್ಲ‌ ಸೇರಿಕೊಂಡು ಬೆಂಗಳೂರಿನ ವಿಮಾನ ನಿಲ್ದಾಣದ ಪಕ್ಕ 116 ಎಕರೆ ಜಾಗದಲ್ಲಿ ಚಾಣಕ್ಯ ವಿಶ್ವವಿದ್ಯಾಲಯ ಸ್ಥಾಪಿಸಲು ಮುಂದಾಗಿದ್ದಾರೆ. ಒಂದೊಂದು ಎಕರೆಗೆ ಕೆಐಎಡಿಬಿ ₹1.50 ಕೋಟಿ ನೀಡಿ ಆ ಜಾಗ ಖರೀದಿಸಿತ್ತು. ಇದೀಗ ಅದರ ಬೆಲೆ ಅಂದಾಜು ₹1,000 ಕೋಟಿಯಿದೆ. ಆದರೆ, ಸರ್ಕಾರ ₹50 ಕೋಟಿಗೆ‌ ಅದನ್ನು ನೀಡಿದೆ' ಎಂದರು.

'ದೇಶ ಉದ್ಧಾರ ಮಾಡುತ್ತೇವೆ ಎನ್ನುತ್ತಿದ್ದವರು ಬಡತನ ಕೊಡುಗೆಯಾಗಿ ನೀಡಿದ್ದಾರೆ. ಹಸಿವಿನ ಸೂಚ್ಯಂಕದಲ್ಲಿ 2020 ರಲ್ಲಿ ಭಾರತ 94ನೇ ಸ್ಥಾನದಲ್ಲಿತ್ತು. ಇದೀಗ 101ನೇ ಸ್ಥಾನಕ್ಕೆ ಬಂದಿದೆ. ಇದು ಪ್ರಧಾನಿ ನರೇಂದ್ರ ಮೋದಿ ಅವರ ಕೊಡುಗೆ' ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT