ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿ.ಇಡಿ ಕಾಲೇಜು ವಿದ್ಯಾರ್ಥಿಗಳ ಧರಣಿ, ಪರೀಕ್ಷೆ ಕೈಬಿಟ್ಟ ಕರ್ನಾಟಕ ವಿ.ವಿ

Last Updated 6 ಸೆಪ್ಟೆಂಬರ್ 2020, 2:25 IST
ಅಕ್ಷರ ಗಾತ್ರ

ಧಾರವಾಡ: ಕೊರೊನಾ ಸೋಂಕಿನಿಂದ ಉಂಟಾದ ಬಿಕ್ಕಟ್ಟಿನಿಂದ ಬಿ.ಇಡಿ ತರಬೇತಿ ಕಾಲೇಜುಗಳಲ್ಲಿ ಎಲ್ಲ ಪಾಠಗಳನ್ನು ಮುಗಿಸದೇ ತರಾತುರಿಯಲ್ಲಿ, ಪರೀಕ್ಷೆ ದಿನಾಂಕ ನಿಗದಿಪಡಿಸಲಾಗಿದೆ ಎಂದು ಆರೋಪಿಸಿ ವಿವಿಧ ಕಾಲೇಜುಗಳ ಬಿ.ಇಡಿ ವಿದ್ಯಾರ್ಥಿಗಳು ಶನಿವಾರ ಕರ್ನಾಟಕ ವಿಶ್ವವಿದ್ಯಾಲಯದ ಆಡಳಿತ ಕಚೇರಿ ಎದುರು ಧರಣಿ ನಡೆಸಿದರು.

ಕೋವಿಡ್‌ನಿಂದಾಗಿ ಅಂತಿಮ ವರ್ಷದ ಪರೀಕ್ಷೆ ಹೊರತುಪಡಿಸಿ ಎಲ್ಲ ಪರೀಕ್ಷೆಗಳನ್ನು ರದ್ದುಪಡಿಸಲಾಗುವುದು. ಹಿಂದಿನ ವರ್ಗದಲ್ಲಿ ವಿದ್ಯಾರ್ಥಿ ಪಡೆದ ಅಂಕ, ಆಂತರಿಕ ಪರೀಕ್ಷೆಯಲ್ಲಿ ಪಡೆದ ಅಂಕಗಳನ್ನು ಪರಿಗಣಿಸಿ ವಿದ್ಯಾರ್ಥಿಗಳನ್ನು ಮುಂದಿನ ಸೆಮಿಸ್ಟರ್‌ಗೆ ತೇರ್ಗಡೆಗೊಳಿಸಲಾಗುವುದು ಎಂದು ಯುಜಿಸಿ ಘೋಷಿಸಿತ್ತು. ಆದರೆ, ಇದೀಗ ಕರ್ನಾಟಕ ವಿಶ್ವವಿದ್ಯಾಲಯ ವ್ಯಾಪ್ತಿಗೆ ಒಳಪಡುವ ಬಿ.ಇಡಿ ಕಾಲೇಜುಗಳಲ್ಲಿ ಪರೀಕ್ಷಾ ದಿನಾಂಕ ನಿಗದಿ ಮಾಡಿರುವುದು ವಿದ್ಯಾರ್ಥಿಗಳನ್ನು ಆತಂಕಕ್ಕೆ ದೂಡಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಒಂದು ಸೆಮಿಸ್ಟರ್‌ ಪರೀಕ್ಷೆ ನಡೆಸಲು ಸುಮಾರು ನಾಲ್ಕು ತಿಂಗಳು ಶೈಕ್ಷಣಿಕ ಚಟುವಟಿಕೆಗಳು ನಡೆಯುತ್ತವೆ. ಕೋವಿಡ್ ಹಿನ್ನೆಲೆಯಲ್ಲಿ ರಜೆ ಘೋಷಣೆಯಾದ ಮಾರ್ಚ್ 14ರಿಂದ ಪರೀಕ್ಷಾ ವೇಳಾಪಟ್ಟಿ ಪ್ರಕಟವಾದ ಸೆ.1ರ ವರೆಗೆ, ಸುಮಾರು ಐದು ತಿಂಗಳು ಅನಿಶ್ಚಿತ ರಜೆಯ ಅವಧಿಯಲ್ಲಿ ಬಿ.ಇಡಿ ಕೋರ್ಸ್‌ಗೆ ಸಂಬಂಧಿಸಿದಂತೆ, ವಿಶ್ವವಿದ್ಯಾಲಯದ ವ್ಯಾಪ್ತಿಯ ಬಹುತೇಕ ಕಾಲೇಜುಗಳಲ್ಲಿ ಆನ್‌ಲೈನ್‌ ಬೋಧನೆಯೂ ನಡೆದಿಲ್ಲ. ಈಗ ದಿಢೀರನೆ ಪರೀಕ್ಷಾ ವೇಳಾಪಟ್ಟಿ ಪ್ರಕಟಿಸಿರುವುದು ವಿದ್ಯಾರ್ಥಿಗಳಲ್ಲಿ ಒತ್ತಡ ಸೃಷ್ಟಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಕುಲಪತಿ ಮರಳಿ ಧರಣಿ ಸ್ಥಳಕ್ಕೆ ಬಂದು, ‘ಮುಂದಿನ ಸೆಮಿಸ್ಟರ್‌ಗೆ ಬಡ್ತಿ ನೀಡಲಾಗಿದೆ’ ಎಂದು ಘೋಷಿಸಿದರು. ವಿದ್ಯಾರ್ಥಿಗಳು ಧರಣಿ ಹಿಂಪಡೆದರು.

ಒಲ್ಲದ ಮನಸ್ಸಿನಿಂದ ಬಡ್ತಿ ನೀಡಿರುವೆ: ‘ಬಿ.ಇಡಿ ಒಂದು ವೃತ್ತಿಪರ ಕೋರ್ಸ್‌ ಆಗಿರುವ ಕಾರಣ ವಿದ್ಯಾರ್ಥಿಗಳು ಧರಣಿ ನಡೆಸಿದ್ದರೂ, ಪರೀಕ್ಷೆಗಳನ್ನು ಎದುರಿಸುವಂತೆ ಅವರಿಗೆ ಸೂಚಿಸಿದ್ದೆವು. ಭವಿಷ್ಯದ ಪರಿಕಲ್ಪನೆ ಇಲ್ಲದೇ ವಿದ್ಯಾರ್ಥಿಗಳು ಶನಿವಾರ ಆಡಳಿತ ಕಚೇರಿ ಎದುರು ಧರಣಿ ನಡೆಸಿದರು. ಸರ್ಕಾರ ಪರೀಕ್ಷೆಗಳನ್ನು ನಡೆಸುವ ಹಾಗೂ ಬಡ್ತಿ ನೀಡುವ ನಿರ್ಧಾರ ತೆಗೆದುಕೊಳ್ಳಲು ಅವಕಾಶ ವಿಶ್ವವಿದ್ಯಾಲಯಕ್ಕೇ ಬಿಟ್ಟಿತ್ತು. ಹೀಗಾಗಿ ಒಲ್ಲದ ಮನಸ್ಸಿನಿಂದ ಬಡ್ತಿ ನೀಡಿದ್ದೇನೆ’ ಎಂದು ಕ.ವಿ.ವಿ ಪ್ರಭಾರ ಕುಲಪತಿ ಪ್ರೊ.ಎಂ.ವಿಶ್ವನಾಥ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT