ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀಡಿ ಕಾರ್ಮಿಕರಿಗೆ ಲೌಕ್‌ಡೌನ್‌ ‘ಬೇಡಿ’

ಕೋವಿಡ್‌ ಪರಿಣಾಮ: ಕಡಿಮೆಯಾದ ಬೇಡಿಕೆ, ಕೈತುಂಬಾ ಸಿಗದ ಕೆಲಸ
Last Updated 16 ಜೂನ್ 2021, 15:26 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಲಾಕ್‌ಡೌನ್‌ನಿಂದಾಗಿ ಅನೇಕ ಉದ್ಯಮಗಳು ನೆಲಕಚ್ಚಿವೆ. ವ್ಯಾಪಾರ ಕಡಿಮೆಯಾಗಿರುವುದರಿಂದ ಬೀಡಿ ಮಾರಾಟದ ಉದ್ಯಮವೂ ಸಂಕಷ್ಟಕ್ಕೆ ಸಿಲುಕಿದ್ದು, ಇದೇ ಕೆಲಸ ನಂಬಿಕೊಂಡಿದ್ದ ಸಾಕಷ್ಟು ಕಾರ್ಮಿಕರು ಸಿಕ್ಕ ಅಲ್ಪ ಆದಾಯದಲ್ಲಿ ಬದುಕು ಸಾಗಿಸುತ್ತಿದ್ದಾರೆ.

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅಲ್ಲಲ್ಲಿ ಬೀಡಿ ಕಟ್ಟುವ ಕುಟುಂಬಗಳಿವೆ. ದಿನವೊಂದಕ್ಕೆ ಮೂರ್ನಾಲ್ಕು ಸಾವಿರ ಬೀಡಿಗಳನ್ನು ಕಟ್ಟುವ ಸಾಮರ್ಥ್ಯ ಹೊಂದಿರುವ ವೃತ್ತಿ ಪರಿಣಿತರೂ ಇದ್ದಾರೆ. ಈಗ ಅವರೆಲ್ಲ ಚದುರಿ ಹೋಗಿದ್ದಾರೆ. ಆದರೆ, ಸೋನಿಯಾ ಗಾಂಧಿ ನಗರದ ಸಮೀಪದಲ್ಲಿರುವ ಬೀಡಿ ಕಾರ್ಮಿಕರ ಕಾಲೊನಿಯಲ್ಲಿ ಮಾತ್ರ ಹೆಚ್ಚು ಸಂಖ್ಯೆಯಲ್ಲಿ ಇದೇ ವೃತ್ತಿಯಲ್ಲಿ ತೊಡಗಿರುವವರು ಸಿಗುತ್ತಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಬೇಡಿಕೆ ಉಳಿಸಿಕೊಂಡಿರುವ ಬೀಡಿ ಮಾರಾಟ ಉದ್ಯಮ ಲಾಕ್‌ಡೌನ್‌ ಅವಧಿಯಲ್ಲಿ ಕೊಳ್ಳುವವರು ಕಡಿಮೆಯಾಗಿರುವುದರಿಂದ ಸಂಕಷ್ಟಕ್ಕೆ ಸಿಲುಕಿಕೊಂಡಿದೆ. ಕಾರ್ಮಿಕರಿಗೆ ಮೊದಲಿನಷ್ಟು ಕೆಲಸವೂ ಇಲ್ಲ; ಆದಾಯವೂ ಸಿಗುತ್ತಿಲ್ಲ.

ಕಾಲೊನಿಯ ಹಲವಾರು ಕುಟುಂಬಗಳ ಹೆಣ್ಣುಮಕ್ಕಳಿಗೆ ನಿತ್ಯ ಬೀಡಿ ಕಟ್ಟುವುದೇ ಕಾಯಕ. ಬೆಳಿಗ್ಗೆ ಆರು ಗಂಟೆಗೆ ಬೀಡಿ ಕಟ್ಟಲು ಬೇಕಾಗುವ ಸಾಮಗ್ರಿಗಳನ್ನು ತಂದು ಸಂಜೆ ವೇಳೆಗೆ ವಾಪಸ್ ಕೊಡುವುದು. ವಾರಕ್ಕೊಂದು ಸಲ ವೇತನ ಪಡೆಯುವುದು ಕಾಯಕವಾಗಿದೆ. ಕುಟುಂಬದ ಪುರುಷರು ಆಟೊ ಚಾಲನೆ, ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಲಾಕ್‌ಡೌನ್‌ ಅವಧಿಯಲ್ಲಿ ಪುರುಷರಿಗೆ ಕೆಲಸವಿಲ್ಲವಾದ್ದರಿಂದ ಮಹಿಳೆಯರು ಬೀಡಿ ಕಟ್ಟಿ ಪಡೆಯುತ್ತಿದ್ದ ವೇತನವೇ ಕುಟುಂಬಕ್ಕೆ ಆಸರೆಯಾಗಿತ್ತು.

ಮೊದಲಾದರೆ ವಾರಪೂರ್ತಿ ಕೆಲಸ ಮಾಡುತ್ತಿದ್ದೆವು. ಒಂದು ದಿನಕ್ಕೆ ಎರಡು ಸಾವಿರ ಬೀಡಿಗಳನ್ನು ಕಟ್ಟುತ್ತಿದ್ದೆವು. ಈಗ ದಿನಕ್ಕೆ ಸಾವಿರ ಕಟ್ಟಲು ಅವಕಾಶ ಸಿಕ್ಕರೆ ಅದೇ ಹೆಚ್ಚು ಎನ್ನುತ್ತಾರೆ ಅಲ್ಲಿನ ಕಾರ್ಮಿಕರು.

20 ವರ್ಷಗಳಿಂದ ಬೀಡಿಕಟ್ಟುವ ಕಾಯಕದಲ್ಲಿ ತೊಡಗಿರುವ ಬೀಡಿ ಕಾರ್ಮಿಕರ ಕಾಲೊನಿಯ ನೂರ್‌ಜಹಾನ್‌ ಚೌಕದಾರ್‌ ಅವರನ್ನು ‘ಪ್ರಜಾವಾಣಿ’ ಮಾತನಾಡಿಸಿದಾಗ ‘ದಿನಕ್ಕೆ ಎರಡು ಸಾವಿರ ಬೀಡಿಗಳನ್ನು ಕಟ್ಟುವ ಸಾಮರ್ಥ್ಯವಿದ್ದರೂ ಕೈಯಲ್ಲಿ ಕೆಲಸವಿಲ್ಲದಂತಾಗಿದೆ. ಉದ್ಯೋಗದ ಯಾವ ಖಾತ್ರಿಯೂ ಇಲ್ಲ. ಸರ್ಕಾರ ಪರಿಹಾರ ಕೊಡಬೇಕು. ಸಮಸ್ಯೆಗಳ ಬಗ್ಗೆ ಗಮನ ಹರಿಸಬೇಕು’ ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT