ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೀರೇಶ್ವರ ಸೊಸೈಟಿ ಕಳ್ಳತನ: ₹39 ಲಕ್ಷ ವಶ

Last Updated 31 ಜನವರಿ 2023, 6:18 IST
ಅಕ್ಷರ ಗಾತ್ರ

ಧಾರವಾಡ: ಇಲ್ಲಿನ ಸಂಗಮ ವೃತ್ತದಲ್ಲಿರುವ ಬೀರೇಶ್ವರ ಸಹಕಾರ ಸಂಘದ ಯಕ್ಸಂಬಾ ಶಾಖೆಯಲ್ಲಿ ಜ. 2ರಂದು ನಡೆದ ಕಳ್ಳತನ ಪ್ರಕರಣವನ್ನು ಭೇದಿಸಿರುವ ಶಹರ ಠಾಣೆ ಪೊಲೀಸರು ₹17.90 ಲಕ್ಷ ನಗದು ಹಾಗೂ 615 ಗ್ರಾಂ ಚಿನ್ನಾಭರಣ ಸೇರಿದಂತೆ ₹39.54 ಲಕ್ಷ ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಯು ಬೆಳಗಾವಿಯ ಖಾಸಗಿ ಬ್ಯಾಂಕ್‌ನ ನೌಕರ. ತನ್ನ ಹಣಕಾಸು ತೊಂದರೆ ನಿವಾರಿಸಿಕೊಳ್ಳಲು ಆರು ತಿಂಗಳ ಹಿಂದೆ ಈ ಕೃತ್ಯಕ್ಕೆ ಸಂಚು ರೂಪಿಸಿದ್ದ. ಇದಕ್ಕಾಗಿ ಭೀರೇಶ್ವರ ಸೊಸೈಟಿಯ ಸಿಬ್ಬಂದಿಯ ಸಂಗ ಮಾಡಿದ್ದ. ಆತನಿಂದ ಭದ್ರತಾ ಕೊಠಡಿ ಕೀಲಿಕೈ ಪಡೆದು, ಅದರ ನಕಲಿ ಕೀಲಿಗಳನ್ನು ಮಾಡಿಸಿಕೊಂಡಿದ್ದ.

ಡಿ. 31ರಂದು ಶನಿವಾರ ಸಂಜೆ ಲೆಕ್ಕಪತ್ರ ಪೂರ್ಣಗೊಳಿಸಿದ ನಂತರ ಸೊಸೈಟಿಯಲ್ಲಿ ₹21.64ಲಕ್ಷ ನಗದು ಇತ್ತು. ಜತೆಗೆ ಗ್ರಾಹಕರು ಅಡಿವಿಟ್ಟ ಆಭರಣಗಳನ್ನು ಭದ್ರತಾ ಕೋಠಡಿಯಲ್ಲಿ ಇಟ್ಟಿದ್ದರು. ಜ. 2ರಂದು ಬೆಳಿಗ್ಗೆ ಸೊಸೈಟಿ ಬಾಗಿಲು ತೆರೆಯಲು ಬಂದ ಸಿಬ್ಬಂದಿಗೆ ಅನುಮಾನ ಮೂಡಿತ್ತು. ಶೆಟರ್ಸ್‌ಗೆ ಹಾಕಿದ್ದ ಕೀಲಿ ತೆರೆದ ಸ್ಥಿತಿಯಲ್ಲಿತ್ತು. ಸೊಸೈಟಿಗೆ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾಗೆ ಮಸಿ ಬೆಳಿಯಲಾಗಿತ್ತು. ಜತೆಗೆ ಸಿಸಿಟಿವಿ ಸ್ಮೃತಿಕೋಶ ಹಾಗೂ ಇತರ ಕಾಗದಪತ್ರಗಳನ್ನೂ ಸುಟ್ಟು ನಾಶಪಡಿಸಲಾಗಿತ್ತು. ಸೊಸೈಟಿಯಲ್ಲಿದ್ದ ನಗದು ಹಾಗೂ ಚಿನ್ನಾಭರಣ ಕಳ್ಳತನವಾಗಿತ್ತು.

ಈ ಕುರಿತು ಶಾಖಾ ವ್ಯವಸ್ಥಾಪಕ ರಮೇಶ ಮಾಳಾಯಿ ಅವರು ಶಹರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಎಸಿಪಿ ವಿ.ಟಿ.ವಿಜಯಕುಮಾರ ಅವರ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್ ಪ್ರಭು ಆರ್. ಗಂಗನಹಳ್ಳಿ ಹಾಗೂ ಅಪರಾಧ ವಿಭಾಗದ ಪಿಎಸ್‌ಐ ಚಂದ್ರಶೇಖರ ಮದರಖಂಡಿ ಅವರ ನೇತೃತ್ವದಲ್ಲಿ ತಂಡವನ್ನು ರಚಿಸಲಾಗಿತ್ತು. ಆರೋಪಿಯನ್ನು ಬಂಧಿಸಲಾಗಿದೆ ಎಂದು ಹುಬ್ಬಳ್ಳಿ ಧಾರವಾಡ ಮಹಾನಗರ ಪೊಲೀಸ್ ಆಯುಕ್ತ ರಮಣ ಗುಪ್ತಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT