ಭಾನುವಾರ, ಜನವರಿ 19, 2020
29 °C

‘ಸಕಾರಾತ್ಮಕ ಮನೋಭಾವದಿಂದ ಬದುಕು ಸುಂದರ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ‘ಸಕಾರಾತ್ಮಕ ಮನೋಭಾವವು ಮನುಷ್ಯನ ಬದುಕನ್ನು ಸರಳ ಹಾಗೂ ಸುಂದರಗೊಳಿಸುತ್ತದೆ’ ಎಂದು ಅಂತರರಾಷ್ಟ್ರೀಯ ನಿರ್ವಹಣಾ ಸಲಹೆಗಾರ್ತಿ ಹಾಗೂ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಸ್ಥಾನದ ಮೌಂಟ್ ಅಬುವಿನ ರಾಜಯೋಗಿನಿ ಡಾ. ಬಿ.ಕೆ. ಸುನೀತಾ ಹೇಳಿದರು.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಮತ್ತು ಭಾರತೀಯ ಕೈಗಾರಿಕಾ ಮಹಾಮಂಡಳ ಹುಬ್ಬಳ್ಳಿಯಲ್ಲಿ ಶನಿವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಸಕಾರಾತ್ಮಕವಾಗಿರುವುದಷ್ಟೇ ಮುಖ್ಯ ಅಲ್ಲ’ ವಿಷಯ ಕುರಿತು ಅವರು ಮಾತನಾಡಿದರು.

‘ಜಗತ್ತನ್ನು ಮತ್ತು ಅದರ ಸಕಲ ಚರಾಚರ ವಸ್ತುಗಳನ್ನು ಮನುಷ್ಯ ಯಾವ ದೃಷ್ಟಿಕೋನದಿಂದ ನೋಡುತ್ತಾನೆ ಎಂಬುದು ಆತನ ಮನೋಭಾವವನ್ನು ಆಧರಿಸಿರುತ್ತದೆ. ಮನಸ್ಸು ಮತ್ತು ಆತ್ಮದಲ್ಲಿ ಶಾಂತಿ, ನಂಬಿಕೆ ಹಾಗೂ ಸಕಾರಾತ್ಮಕ ಮನೋಭಾವ ಇದ್ದಾಗ, ಯಾವುದೇ ಸಮಸ್ಯೆಗಳನ್ನು ಕೂಡ ಬಗೆಹರಿಸಬಹುದು. ಆಗುವುದೆಲ್ಲಾ ಒಳ್ಳೆಯದಕ್ಕೆ ಎನ್ನುತ್ತಾ ಮುನ್ನುಗ್ಗಬಹುದು’ ಎಂದರು.

‘ಬೇರೆಯವರಿಗಾಗಿ ನಾವು ಸಕಾರಾತ್ಮಕವಾಗಿರದೆ, ನಮಗೇ ನಾವು ಸಕಾರಾತ್ಮಕವಾಗಿರಬೇಕು. ಆಗ ಮಾತ್ರ ಎಲ್ಲವನ್ನೂ ಸಕಾರಾತ್ಮಕವಾಗಿ ಎದುರಿಸಲು ಸಾಧ್ಯ. ಇಲ್ಲದಿದ್ದರೆ, ನಕರಾತ್ಮಕ ಮನೋಭಾವ ನಮ್ಮೊಳಗಿನ ಉತ್ಸಾಹವನ್ನು ಅಳಿಸುತ್ತದೆ’ ಎಂದು ನುಡಿದರು.

‘ಜಗತ್ತಿನ ಅನೇಕ ಆವಿಷ್ಕಾರಗಳಿಗೆ ಸಕಾರಾತ್ಮಕ ಆಲೋಚನೆಯೇ ಮೂಲ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು. ಬೆಳಿಗ್ಗೆ 5 ಗಂಟೆಗೆ ರೈಲಿಗೆ ಹೋಗಬೇಕು ಎಂದು ರಾತ್ರಿ ಮಲಗುವುದಕ್ಕೆ ಮುಂಚೆಯೇ ನಾವು ಮನಸ್ಸಿನಲ್ಲಿ ನಿಶ್ಚಯ ಮಾಡಿಕೊಂಡಾಗ, ಮೊಬೈಲ್‌ನಲ್ಲಿ ಅಲರಾಂ ಇಟ್ಟುಕೊಳ್ಳದಿದ್ದರೂ ಎಚ್ಚರವಾಗುವ ಸ್ಥಿತಿಗೆ ಮನಸ್ಸನ್ನು ಅಣಿಗೊಳಿಸಬೇಕು’ ಎಂದು ಸಲಹೆ ನೀಡಿದರು.

ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಅಧ್ಯಕ್ಷ ಮಹೇಂದ್ರ ಎಚ್‌. ಲದ್ದಡ, ಉಪಾಧ್ಯಕ್ಷರಾದ ವಿನಯ ಜೆ. ಜವಳಿ, ಸಿದ್ದೇಶ್ವರ ಜಿ. ಕಮ್ಮಾರ, ಜಿ.ಜಿ. ಹೊಟ್ಟಿಗೌಡರ, ಗೌರವ ಕಾರ್ಯದರ್ಶಿಗಳಾದ ಅಶೋಕ ಎಸ್. ಗಡಾದ, ಉಮೇಶ ಎಂ. ಗಡ್ಡದ ಹಾಗೂ ಇತರ ಪದಾಧಿಕಾರಿಗಳು ಇದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು