ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಮಾಜಘಾತುಕ ವ್ಯಕ್ತಿ ಪರ ಬಿಜೆಪಿ ಪ್ರತಿಭಟನೆ ಸರಿಯಲ್ಲ: ಶಾಸಕ ಪ್ರಸಾದ ಅಬ್ಬಯ್ಯ

Published 3 ಜನವರಿ 2024, 6:13 IST
Last Updated 3 ಜನವರಿ 2024, 6:13 IST
ಅಕ್ಷರ ಗಾತ್ರ

ಹುಬ್ಬಳ್ಳಿ: 'ಗಲಭೆ ಪ್ರಕರಣದ ಆರೋಪಿ ಶ್ರೀಕಾಂತ ಪೂಜಾರಿ ಅವರ ಮೇಲೆ ವಿವಿಧ ಪೊಲೀಸ್‌ ಠಾಣೆಗಳಲ್ಲಿ 14 ಪ್ರಕರಣಗಳು ದಾಖಲಾಗಿವೆ. ಸಮಾಜಘಾತುಕ ವ್ಯಕ್ತಿ ಪರವಾಗಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್. ಅಶೋಕ ಅವರು ಪ್ರತಿಭಟನೆ ಹಮ್ಮಿಕೊಂಡಿರುವುದು ಸರಿಯಲ್ಲ' ಎಂದು ಶಾಸಕ ಪ್ರಸಾದ ಅಬ್ಬಯ್ಯ ಆಕ್ರೋಶ ವ್ಯಕ್ತಪಡಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ದೇಶದಲ್ಲಿ ಕಾನೂನು ಎಲ್ಲ ಧರ್ಮ, ಜಾತಿಯವರಿಗೂ ಒಂದೇ. ಅದನ್ನು ಎಲ್ಲರೂ ಗೌರವಿಸಬೇಕು. ರಾಜ್ಯದ ಗೃಹ ಇಲಾಖೆ ಆದೇಶದ ಮೇರೆಗೆ ಎಲ್.ಪಿ.ಸಿ. ಪ್ರಕರಣದ ಆರೋಪಿಗಳನ್ನು ಬಂಧನ ಮಾಡಲಾಗುತ್ತಿದೆ. ಬಿಜೆಪಿ ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದೆ' ಎಂದು ಆರೋಪಿಸಿದರು.

'ಶಹರ ಠಾಣೆಯಲ್ಲಿ 61 ಎಲ್.ಪಿ‌.ಸಿ. ಪ್ರಕರಣಗಳಿದ್ದು, ಐದು ಪ್ರಕರಣದ ಆರೋಪಿಗಳನ್ನು ಪತ್ತೆ ಹಚ್ಚಲಾಗಿದೆ. ಅದರಲ್ಲಿ ಶ್ರೀಕಾಂತ ಪೂಜಾರಿ ಅವರಿದ್ದ ಗಲಭೆ ಪ್ರಕರಣವೂ ಸೇರಿದೆ. ಈ ಪ್ರಕರಣದಲ್ಲಿ 13 ಮಂದಿ ಆರೋಪಿಗಳಿದ್ದು, ಎಂಟು ಮಂದಿ ಕೋರ್ಟ್‌ಗೆ ಹಾಜರಾಗಿ ಪ್ರಕರಣ ಖುಲಾಸೆ ಮಾಡಿಕೊಂಡಿದ್ದಾರೆ. ಉಳಿದ ಐದು ಮಂದಿಯಲ್ಲಿ ಒಬ್ಬರು ಇತ್ತೀಚೆಗೆ ಕೋರ್ಟ್‌ಗೆ ಹಾಜರಾಗಿ ಜಾಮೀನು ಪಡೆದಿದ್ದಾರೆ. ಇಬ್ಬರು ಅನಾರೋಗ್ಯದಿಂದ ಹಾಸಿಗೆಯಲ್ಲಿದ್ದಾರೆ. ಪೊಲೀಸರು ಕಾನೂನು ಪ್ರಕಾರ ಕ್ರಮ ಕೈಗೊಂಡಿದ್ದಾರೆ' ಎಂದರು.

'ರೌಡಿ ಶೀಟರ್ ಆಗಿದ್ದ ವ್ಯಕ್ತಿ ಪರವಾಗಿ ವಿರೋಧ ಪಕ್ಷದ ನಾಯಕರು ಇಲ್ಲಿಗೆ ಬಂದು ಪ್ರತಿಭಟನೆ ಮಾಡುವುದು ತಪ್ಪು. ದೇವರ ಆಚರಣೆ ಮಾಡುತ್ತೇವೆ ಎಂದು ಅಪರಾಧಗಳನ್ನು ಮಾಫಿ ಮಾಡಲು ಸಾಧ್ಯವಿಲ್ಲ. ಸಾರಾಯಿ ಅಕ್ರಮ ಮಾರಾಟ, ದೊಂಬಿ, ಗಲಭೆ, ಮಟ್ಕಾ, ಜೂಜಾಟ ಪ್ರಕರಣಗಳು ಶ್ರೀಕಾಂತ ಅವರ ಮೇಲಿದೆ. ಪೊಲೀಸರು ಮೂರು ಬಾರಿ ಕರೆಸಿ ಅವರಿಂದ ಮುಚ್ಚಳಿಕೆ ಬರೆಸಿಕೊಂಡಿದ್ದಾರೆ. ಇದೀಗ ಬಿಜೆಪಿ ಅವನನ್ನು ಹೀರೋ ಮಾಡಲು ಹೊರಟಿದೆ' ಎಂದು ವ್ಯಂಗ್ಯವಾಡಿದರು.

'ಆರ್. ಅಶೋಕ ಅವರು ಅಭಿವೃದ್ಧಿ ಕುರಿತು ಧ್ವನಿ ಎತ್ತಬೇಕಿತ್ತು.‌ ಅಧಿವೇಶನದಲ್ಲಿ ಅಭಿವೃದ್ಧಿ ಕುರಿತು ಮಾತನಾಡದ ಅವರು, ಅಪರಾಧ ಹಿನ್ನೆಲೆ ಇರುವ ವ್ಯಕ್ತಿ ಬಗ್ಗೆ ಹೋರಾಡಲು ಮುಂದಾಗಿದ್ದಾರೆ. ಜಾತಿ, ಧರ್ಮದ ಹೆಸರಲ್ಲಿ ವಿಷಬೀಜ ಬಿತ್ತುತ್ತಿದ್ದಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.

'ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಆಡಳಿತದಲ್ಲಿತ್ತು. ಕೇಂದ್ರದಲ್ಲೂ ಅವರದ್ದೇ ಸರ್ಕಾರವಿತ್ತು. 1992ರ ಗಲಭೆ ಪ್ರಕರಣದ ಆರೋಪಿಗಳ ಮೇಲಿದ್ದ ಪ್ರಕರಣವನ್ನು ಖುಲಾಸೆ ಮಾಡಬೇಕಿತ್ತು. ಯಾಕಾಗಿ ಮಾಡಿಲ್ಲ? ರಾಮಮಂದಿರ ಉದ್ಘಾಟನೆ ಬಗ್ಗೆ ಕಾಂಗ್ರಸ್‌ಗೆ ಹೊಟ್ಟೆಕಿಚ್ಚು ಎಂದಿರುವ ಕೇಂದ್ರ ಸಚಿವ ಜೋಶಿ ಅವರು, ರಾಜಕೀಯವಾಗಿ ಏನೇನೋ ಮಾತನಾಡುತ್ತಾರೆ. ಅವರೊಬ್ಬರೇ ರಾಮಭಕ್ತರಾ' ಎಂದು ಪ್ರಶ್ನಿಸಿದರು‌.

'ಹಳೇಹುಬ್ಬಳ್ಳಿ ಗಲಭೆ ಪ್ರಕರಣದಲ್ಲಿ ಬಂಧನವಾಗಿರುವ ಅಮಾಯಕರನ್ನು ಬಿಡುಗಡೆ ಮಾಡಬೇಕು ಎಂದು ಪತ್ರ ಬರೆದಿದ್ದೇನೆ. ತಪ್ಪು ಮಾಡಿದವರ ಬಿಡುಗಡೆಗೆ ಹೇಳಿಲ್ಲ. ಈ ಪ್ರಕರಣದಲ್ಲಿ ಶ್ರೀಕಾಂತ ಪೂಜಾರಿ ಅವರು ತಪ್ಪು ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ' ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT