ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಕ್ತ ಮಿಶ್ರಿತ ನೀರು ಕಂಗಾಲಾದ ನಿವಾಸಿಗಳು

Last Updated 13 ಜೂನ್ 2019, 4:16 IST
ಅಕ್ಷರ ಗಾತ್ರ

ಧಾರವಾಡ: ನಲ್ಲಿಯಲ್ಲಿ ರಕ್ತ ಮಿಶ್ರಿತ ನೀರು ಪೂರೈಕೆಯಾಗುತ್ತಿದ್ದು, ಇದ್ದನ್ನು ಕಂಡ ಹೂಗಾರ ಪ್ಲಾಟ್‌ ಹಾಗೂ ಗೊಲ್ಲರ ಓಣಿ ನಿವಾಸಿಗಳು ಕಂಗಾಲಾಗಿದ್ದಾರೆ.

ಈ ಎರಡು ಬಡಾವಣೆಗಳ ಪಕ್ಕದಲ್ಲೇ ಕಸಾಯಿಖಾನೆ ಮತ್ತು ಮೀನು ಮಾರುಕಟ್ಟೆ ಇದೆ. ಕಸಾಯಿಖಾನೆಯ ಮಾಂಸ ಹಾಗೂ ರಕ್ತದ ನೀರು ಹರಿದು ಚರಂಡಿ ಮೂಲಕ ಕುಡಿಯುವ ನೀರಿನ ಪೈಪ್‌ಲೈನ್‌ಗೆ ಸೇರುತ್ತಿದೆ. ಈ ಕುರಿತು ಸೂಕ್ತ ಕ್ರಮಕೈಗೊಳ್ಳದ ಮಹಾನಗರ ಪಾಲಿಕೆಯ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಸ್ಥಳೀಯರ ಬುಧವಾರ ಆರೋಪಿಸಿದರು.

7ನೇ ವಾರ್ಡ್ ವ್ಯಾಪ್ತಿಯ ಹೂಗಾರ ಪ್ಲಾಟ್‌ ಮತ್ತು ಗೊಲ್ಲರ ಓಣಿಯಲ್ಲಿ ಎಂದಿನಂತೆ ವಾಟರಮನ್ ಕುಡಿಯುವ ನೀರು ಬಿಟ್ಟಿದ್ದಾನೆ. ನೀರು ಹಿಡಿಯಲು ಹೋದ ಜನರಿಗೆ ನಲ್ಲಿಯಲ್ಲಿ ಕೆಂಪು ನೀರು ನೋಡಿ ಗಾಬರಿಗೊಂಡಿದ್ದಾರೆ. ತಕ್ಷಣವೇ ಬಡಾವಣೆಯ ಜನರನ್ನು ಸೇರಿಸಿದ ಮಂದಿ, ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದ್ದಾರೆ.

‘ಕಳೆದ ವಾರ ರಮ್ಜಾನ್ ಹಬ್ಬದ ಹಿನ್ನೆಲೆಯಲ್ಲಿ ಕಸಾಯಿಖಾನೆಯಲ್ಲಿ ಪ್ರಾಣಿವಧೆ ನಂತರ ರಕ್ತ ಚರಂಡಿಯಲ್ಲಿ ಹರಿದಿದೆ. ಕುಡಿಯುವ ನೀರಿನ ಪೈಪ್ ಕೂಡಾ ಇದರ ಪಕ್ಕದಲ್ಲೇ ಸಾಗಿರುವುದರಿಂದ, ಅದು ಒಡೆದು ಕುಡಿಯುವ ನೀರಿಗೂ ರಕ್ತ, ಮಾಂಸ ಸೇರಿ ಪೂರೈಕೆಯಾಗುತ್ತಿದೆ. ಈ ಸಮಸ್ಯೆ ಇಂದು, ನಿನ್ನೆಯದಲ್ಲ. ಈ ಹಿಂದೆಯೂ ಹಲವು ಬಾರಿ ದೂರು ನೀಡಿದ್ದರೂ ಪಾಲಿಕೆ ಮತ್ತು ಜಲಮಂಡಳಿ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ’ ಎಂದು ಬಡಾವಣೆಯ ದುರ್ಗಪ್ಪ ಗೊಲ್ಲರ ಆರೋಪಿಸಿದರು.

‘ಈ ಪ್ರದೇಶದಲ್ಲಿ ವಾರಕ್ಕೊಮ್ಮೆ ನೀರು ಬಿಡುತ್ತಾರೆ. ಸರಿಯಾದ ವೇಳೆಗೆ ನೀರು ಬಿಡುವುದಿಲ್ಲ. ವಾಟರ್‌ಮನ್ ಯಾವಾಗ ನೀರು ಬಿಡುತ್ತಾರೆ ಎಂಬ ಮಾಹಿತಿ ಸ್ಥಳೀಯರಿಗೆ ಇರುವುದಿಲ್ಲ. ಹೀಗಾಗಿ ಸರ್ಕಾರಿ, ಖಾಸಗಿ ನೌಕರಸ್ಥರಿಗೆ ಹಾಗೂ ಕೂಲಿ ಕೆಲಸ ಮಾಡುವವರಿಗೆ ತೀರಾ ತೊಂದರೆಯಾಗುತ್ತಿದೆ. ಕೊಳವೆ ದುರಸ್ತಿ ನಂತರ ನೀರು ಬಿಡಲು ಸರಿಯಾದ ಸಮಯ ನಿಗದಿಪಡಿಸಬೇಕು’ ಎಂದೂ ಆಗ್ರಹಿಸಿದರು.

ಪೈಪ್ ಎಲ್ಲಿ ಒಡೆದಿದೆ ಎಂಬುದನ್ನು ಪತ್ತೆ ಹಚ್ಚಿ, ಅದನ್ನು ದುರಸ್ತಿಗೊಳಿಸಬೇಕು. ಇಷ್ಟು ಮಾತ್ರವಲ್ಲ, ಇದಕ್ಕೊಂದು ಶಾಶ್ವತ ಪರಿಹಾರ ನೀಡಬೇಕು ಎಂದು ಧರಣಿ ನಿರತರು ಒ್ತಾಯಿಸಿದರು.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಮಹಾನಗರ ಪಾಲಿಕೆ ಅಧಿಕಾರಿಗಳು ಹಾಗೂ ಜಲಮಂಡಳಿ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ನಿವಾಸಿಗಳಿಗೆ ಭರವಸೆ ನೀಡಿದ ನಂತರ ಪ್ರತಿಭಟನೆ ಕೈಬಿಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT