ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

LS Polls 2024: ಚುನಾವಣೆ ಬಂದಾಗಷ್ಟೇ ನೆನಪಾಗುವ ಗಡಿ ಸಮಸ್ಯೆ

Published 3 ಏಪ್ರಿಲ್ 2024, 20:12 IST
Last Updated 3 ಏಪ್ರಿಲ್ 2024, 20:12 IST
ಅಕ್ಷರ ಗಾತ್ರ

ಬೇಸಿಗೆಯ ಸುಡು ಬಿಸಿಲಿನಂತೆ ತಾರಕಕ್ಕೇರಿ ತಣ್ಣಗಾಗುವ ಗಡಿ ವಿವಾದ ಈಗ ಮತ್ತೆ ಮುಂಚೂಣಿಗೆ ಬಂದಿದೆ. ‘ಬೇರೆ ಎಂಥದ್ದೇ ತುರ್ತು ಇರಲಿ, ಎಲ್ಲದಕ್ಕೂ ಮೊದಲು ಗಡಿ ಸಮಸ್ಯೆ ಬಗೆಹರಿಯಬೇಕು’ ಎಂಬ ಬೇಡಿಕೆ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಆದ್ಯತೆ ಪಡೆಯುತ್ತದೆ. ಈಗಲೂ ಗಡಿ ವಿಷಯ ಮುಂದಿರಿಸಿಕೊಂಡು ‘ಪ್ರಭಾವ’ ಬೀರುವ ಮತ್ತು ‘ಐಡೆಂಟಿಟಿ’ ಸ್ಥಾಪಿಸಿಕೊಳ್ಳುವ ಪ್ರಯತ್ನ ನಡೆದಿದೆ.

ಗಡಿ ವಿಷಯವನ್ನು ‘ಸುದ್ದಿ’ಯಲ್ಲಿ ಇಡಲು ಏನೆಲ್ಲ ಮಾಡಬೇಕೋ, ಅದರದ್ದೆಲ್ಲ ‘ತಯಾರಿ’ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್‌) ನಡೆಸಿದೆ. ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವುದು ಸೇರಿಸಿ ‘ಗಡಿ ಸಮಸ್ಯೆ ಬಗೆಹರಿಸಿ’ ಎಂಬ ವಿಷಯಕ್ಕೆ ಅಭಿಯಾನದ ಸ್ವರೂಪ ನೀಡಲು ಯೋಜನೆ ರೂಪಿಸಿದೆ.

ಮರಾಠಿ ಭಾಷಿಕರ ಒಲವು ಗಳಿಸುವ ಮತ್ತು ಗಡಿಯಲ್ಲಿನ 865 ಗ್ರಾಮಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಏಕಮೇವ ಗುರಿ ಹೊತ್ತ ಎಂಇಎಸ್; ಈ ಸಲದ ಚುನಾವಣೆಯಲ್ಲಿ ತನ್ನ ಅಭ್ಯರ್ಥಿಗಳ ಪರ ಪ್ರಚಾರ ಮಾಡುವ ನೆಪದಲ್ಲಿ ಗಡಿ ವಿಷಯಕ್ಕೆ ಭಾವನಾತ್ಮಕ ಸ್ಪರ್ಶ ನೀಡುವ ಉದ್ದೇಶವೂ ಹೊಂದಿದೆ. ಈ ಎಲ್ಲಾ ಬೆಳವಣಿಗೆಗಳು ಇತ್ತೀಚಿನದ್ದಲ್ಲ. ಇದಕ್ಕೆ ದಶಕಗಳ ಹಿನ್ನೆಲೆಯಿದೆ.

‘ಬೆಳಗಾವಿ, ಬೀದರ್, ಭಾಲ್ಕಿ, ಖಾನಾಪುರ, ನಿಪ್ಪಾಣಿ, ಕಾರವಾರ ಸೇರಿಸಿ ಸಂಯುಕ್ತ ಮಹಾರಾಷ್ಟ್ರ ಆಗಲೇಬೇಕು’ ಎಂಬ ಘೋಷಣೆಯೊಂದಿಗೆ ಗಡಿ ವಿಷಯ ಕೇಂದ್ರೀಕರಿಸಿ ಒಂದಿಲ್ಲೊಂದು ಸ್ವರೂಪದಲ್ಲಿ ‘ಪ್ರಭಾವ’ ಬೀರಲು ಯತ್ನಿಸುವ ಎಂಇಎಎಸ್‌. ವಿಧಾನಸಭೆ ಚುನಾವಣೆಗಳಲ್ಲಿ ಮಾತ್ರ ಇಂತಿಷ್ಟು ಸ್ಥಾನ ಗಳಿಸಿದೆ ಹೊರತು ಲೋಕಸಭಾ ಚುನಾವಣೆಯಲ್ಲಿ ಖಾತೆ ತೆರೆಯಲು ಸಾಧ್ಯವಾಗಿಲ್ಲ. ಇತ್ತೀಚೆಗೆ 2013ರ ವಿಧಾನಸಭೆ ಚುನಾವಣೆಯಲ್ಲಿ 2 ಸ್ಥಾನ ಗೆದ್ದಿದ್ದು ಬಿಟ್ಟರೆ,2018 ಮತ್ತು 2023ರ ಚುನಾವಣೆಯಲ್ಲಿ ಒಂದು ಸ್ಥಾನವೂ ಗೆಲ್ಲಲಿಲ್ಲ.

‘ಗಡಿ ವಿವಾದ ಎಂಬುದಿಲ್ಲ. ಬೆಳಗಾವಿ ಕರ್ನಾಟಕದ್ದು. ಇಲ್ಲಿನ ಸುವರ್ಣ ಸೌಧದಲ್ಲಿ ನಿಯಮಿತವಾಗಿ ವಿಧಾನಮಂಡಲ ಅಧಿವೇಶನ ನಡೆಯುತ್ತವೆ’ ಎಂದು ರಾಜ್ಯ ಸರ್ಕಾರ ಹಲವು ಸಲ ಹೇಳಿದೆ. ಆದರೆ, ಇದನ್ನು ಸುತಾರಾಂ ಒಪ್ಪದ ಎಂಇಎಸ್‌ನ ಬೇಡಿಕೆಗೆ ಪೂರಕವಾಗಿ ಮಹಾರಾಷ್ಟ್ರ ಸರ್ಕಾರ, ‘ಬೆಳಗಾವಿ ಸೇರಿ ಗಡಿಪ್ರದೇಶದ 865 ಗ್ರಾಮಗಳು ಮಹಾರಾಷ್ಟ್ರಕ್ಕೆ ಸೇರಬೇಕು. ಅಲ್ಲಿ ಮರಾಠಿ ಭಾಷಿಕರ ಸಂಖ್ಯೆ ಹೆಚ್ಚಿದೆ. ಅವರನ್ನು ಕೈಬಿಡಲ್ಲ’ ಎಂದು ಹೇಳುತ್ತದೆ.

ಇದರ ಇತ್ಯರ್ಥಕ್ಕೆಂದೇ 2022ರ ಡಿಸೆಂಬರ್ 14ರಂದು ಕೇಂದ್ರದ ಗೃಹ ಸಚಿವ ಅಮಿತ್ ಶಾ, ಕರ್ನಾಟಕ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ನೇತೃತ್ವದಲ್ಲಿ ‘ಸಮನ್ವಯ ಸಮಿತಿ’ ರಚನೆಯಾಯಿತು. ಗಡಿ ವಿವಾದ ಸುಪ್ರೀಂಕೋರ್ಟ್‌ನಲ್ಲಿ ಬಗೆಹರಿಯುವವರೆಗೆ ‘ಹಕ್ಕು ಸಾಧಿಸುವ ಹೇಳಿಕೆ’ ನೀಡದಂತೆ ತಾಕೀತು ಮಾಡಲಾಯಿತು. ಆದರೆ, ನಂತರದ ದಿನಗಳಲ್ಲಿ ಸಮಿತಿಗೆ ಸಂಬಂಧಿಸಿದಂತೆ ಪ್ರಗತಿ ಕಾಣಲಿಲ್ಲ. ಕರ್ನಾಟಕ ಮತ್ತು ಮಹಾರಾಷ್ಟ್ರದಿಂದ ಸಮಿತಿಗೆ ಸಚಿವರ ನೇಮಕಾತಿ ಆಗಲಿಲ್ಲ. ಸಮಿತಿ ನಿಯಮಗಳ ಪಾಲನೆಗೆ ಕೇಂದ್ರ ಸರ್ಕಾರ ನೋಟಿಸ್‌ ನೀಡಿದರೂ ಪರಿಣಾಮ ಬೀರಲಿಲ್ಲ.

ಬೆಳಗಾವಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಕರ್ನಾಟಕ ಗಡಿ ಮತ್ತು ನದಿಗಳ ಸಂರಕ್ಷಣಾ ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಶಿವರಾಜ ಪಾಟೀಲ,‘ಬೆಳಗಾವಿಯ ಸುವರ್ಣ ಸೌಧದಲ್ಲಿ ಆಯೋಗದ ಪ್ರಾದೇಶಿಕ ಕಚೇರಿಯನ್ನು ತೆರೆಯಲು ಶಿಫಾರಸು ಮಾಡುವೆ. ಜನರಿಗೆ ಅಹವಾಲು ಸಲ್ಲಿಸಲು ಮತ್ತು ಪರಿಹಾರ ಕಂಡುಕೊಳ್ಳಲು ಅನುಕೂಲವಾಗಲಿದೆ’ ಎಂದಿದ್ದರು. ಆದರೆ, ಅದು ಕಾರ್ಯರೂಪಕ್ಕೆ ಬರಲಿಲ್ಲ.‌

‘ಗಡಿ ಸಮಸ್ಯೆ ಎಂಬುದು ರಾಜಕೀಯ ಪಕ್ಷಗಳು ಮತ್ತು ಸಂಘಸಂಸ್ಥೆಗಳ ಸೃಷ್ಟಿಯೇ ಹೊರತು ಕನ್ನಡ ಮತ್ತು ಮರಾಠಿ ಭಾಷಿಕರ ನಡುವೆ ವೈಮನಸ್ಸು, ತಾರತಮ್ಯ ಇಲ್ಲ. ಕರ್ನಾಟಕ ಮತ್ತು ಮಹಾರಾಷ್ಟ್ರದ ಜನರ ವೈವಾಹಿಕ ಸಂಬಂಧಗಳು ಮತ್ತು ಸಾಂಸ್ಕೃತಿಕ ಅನುಬಂಧಗಳಿವೆ. ಬೆಳಗಾವಿ ಜಿಲ್ಲೆಯ ಬಹುತೇಕ ಮಂದಿ ಕನ್ನಡದ ಜೊತೆ ಮರಾಠಿಯನ್ನೂ ಸ್ಪಷ್ಟವಾಗಿ ಮಾತನಾಡುತ್ತಾರೆ. ಎರಡೂ ಭಾಷೆಗಳ ಮೇಲೆ ದಟ್ಟ ಪ್ರಭಾವವಿದೆ. ‘ಗಡಿ ಸಮಸ್ಯೆ’ ಜೀವಂತವಾಗಿಡಲು ಕೆಲ ಸಂಘಟನೆಯವರು ಪ್ರಯತ್ನಿಸುತ್ತಾರೆ’ ಎನ್ನುತ್ತಾರೆ ಬೆಳಗಾವಿಯ ನಿವಾಸಿಗಳು.

ಆದರೆ, ಅಲ್ಲಿನ ಕನ್ನಡಪರ ಹೋರಾಟಗಾರರಲ್ಲಿ ಕರ್ನಾಟಕ ಸರ್ಕಾರದ ಬಗ್ಗೆ ಕೊಂಚ ಬೇಸರವಿದೆ. ‘ಬೆಳಗಾವಿಯನ್ನು ಹೇಗಾದರೂ ಮಾಡಿ ತನ್ನದಾಗಿಸಿಕೊಳ್ಳಲು ಮಹಾರಾಷ್ಟ್ರ ಸರ್ಕಾರದ ನಿರಂತರ ಪ್ರಯತ್ನಕ್ಕೆ ಕರ್ನಾಟಕ ಸರ್ಕಾರವು ಪ್ರತಿರೋಧ ಒಡ್ಡುವುದಿಲ್ಲ. ಗಡಿಪ್ರದೇಶವನ್ನು ಸುಭದ್ರವಾಗಿ ಉಳಿಸಿಕೊಳ್ಳಲು ಮತ್ತು ಕನ್ನಡಿಗರಲ್ಲಿ ಆತ್ಮವಿಶ್ವಾಸ ತುಂಬಲು ಪ್ರಯತ್ನಿಸುವುದಿಲ್ಲ. ಎಂಇಎಸ್‌ಗೆ ತಕ್ಕ ಉತ್ತರ ನೀಡುವುದಿಲ್ಲ. ಮಹಾರಾಷ್ಟ್ರ ಸರ್ಕಾರವು ಗಡಿ ಸಚಿವರನ್ನು ನೇಮಿಸಿ, ಗಡಿ ವಿಷಯಕ್ಕೆ ಆದ್ಯತೆ ನೀಡುತ್ತದೆ. ಆದರೆ, ಕರ್ನಾಟಕ ಸರ್ಕಾರವು ಗಡಿ ಸಚಿವರ ನೇಮಕಾತಿ ಇರಲಿ, ಗಡಿ ಪ್ರದೇಶದ ಜನರ ಬದುಕಿನ ಸ್ಥಿತಿ ಬಗ್ಗೆಯೂ ಕಾಳಜಿ ವಹಿಸಲ್ಲ’ ಎಂದು ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ನೋವಿನಿಂದ ಹೇಳುತ್ತಾರೆ.

‘ಎಂಇಎಸ್‌ನ ಚುನಾವಣೆ ಪ್ರಣಾಳಿಕೆಯಲ್ಲಿ ಗಡಿ ವಿಚಾರವೇ ಪ್ರಧಾನವಾಗಿರುತ್ತದೆ. ಆದರೆ, ಬಿಜೆಪಿ ಮತ್ತು ಕಾಂಗ್ರೆಸ್‌ನವರು ಗಡಿ ವಿಷಯವನ್ನು ಗಂಭೀರವಾಗಿ ಪರಿಗಣಿಸುವುದೇ ಇಲ್ಲ. ಎಂಇಎಸ್‌ ಹೊರತುಪಡಿಸಿದರೆ, ಬೇರೆ ಯಾವ ಪಕ್ಷದವರು ಚುನಾವಣೆಯಲ್ಲಿ ಗಡಿ ವಿಷಯ ಪ್ರಸ್ತಾಪಿಸಲ್ಲ’ ಎನ್ನುತ್ತಾರೆ ಅವರು.

ಗಡಿಯಲ್ಲಿ ವಿಮೆ ಪ್ರಭಾವ...

ಬೆಳಗಾವಿಯಲ್ಲಿನ ಮರಾಠಿಗರನ್ನು ಸೆಳೆಯುವುದು ಅಲ್ಲದೇ ಗಡಿಯಲ್ಲಿ ತನ್ನ ಪ್ರಭಾವ ಬೇರೂರುವಂತೆ ಮಾಡಲು ಮಹಾರಾಷ್ಟ್ರ ಸರ್ಕಾರವು ಮಹಾರಾಷ್ಟ್ರದ ಶಿನೋಳಿ ಗ್ರಾಮದಲ್ಲಿ (ಬೆಳಗಾವಿಯಿಂದ 15 ಕಿ.ಮೀ. ದೂರ) ವಿಶೇಷ ಕಚೇರಿ ತೆರೆದು, ಅಧಿಕಾರಿಗಳನ್ನೂ ನಿಯೋಜಿಸಿದೆ.

‘ಮಹಾತ್ಮ ಜ್ಯೋತಿರಾವ್‌ ಫುಲೆ ಜನಾರೋಗ್ಯ ವಿಮೆ’ ಯೋಜನೆ ಮೂಲಕ ಗಡಿ ಗ್ರಾಮ, ಪಟ್ಟಣದ ನಿವಾಸಿಗಳನ್ನು ಸೆಳೆಯಲು ಬೆಳಗಾವಿ ನಗರದಲ್ಲೇ 5 ಕೇಂದ್ರ ತೆರೆದಿತ್ತು. ಆದರೆ ಕನ್ನಡಪರ ಹೋರಾಟಗಾರರು, ಸಂಘಸಂಸ್ಥೆಗಳ ಹೋರಾಟದ ಪರಿಣಾಮ ಮತ್ತು ಜಿಲ್ಲಾಡಳಿತದ ಆದೇಶದ ಮೇರೆಗೆ 5 ಕೇಂದ್ರಗಳು ಮುಚ್ಚಲ್ಪಟ್ಟವು. ಆದರೆ, ಶಿನೋಳಿ ಗ್ರಾಮದಲ್ಲಿ ಆರೋಗ್ಯ ವಿಮೆಗೆ ನೋಂದಣಿ ಪ್ರಕ್ರಿಯೆ ನಡೆದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT