ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ತಿಂಗಳಲ್ಲಿ ಬೈಪಾಸ್‌ ಕಾರ್ಯ ಪೂರ್ಣ

ರೈಲ್ವೆ ಕೆಳ ಸೇತುವೆಯಿಂದ ಉಣಕಲ್‌ ತನಕ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾರ್ಯಕ್ಕೆ ಭೂಮಿಪೂಜೆ: ಜೋಶಿ ಹೇಳಿಕೆ
Last Updated 15 ಜನವರಿ 2020, 12:20 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಗಬ್ಬೂರು ಕ್ರಾಸ್‌ನಿಂದ ಗದಗ ಮತ್ತು ವಿಜಯಪುರ ರಸ್ತೆಗೆ ಸಂಪರ್ಕ ಕಲ್ಪಿಸುವ ಬೈಪಾಸ್‌ ರಸ್ತೆ ನಿರ್ಮಾಣ ಕಾಮಗಾರಿ ಮೂರು ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಲೋಕೋಪಯೋಗಿ ಬಂದರು ಹಾಗೂ ಒಳನಾಡು ಜಲಸಾರಿಗೆ ಇಲಾಖೆ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಿಆರ್‌ಎಫ್‌ ಅನುದಾನದಲ್ಲಿ ನಗರ ರೈಲ್ವೆ ನಿಲ್ದಾಣದ ಕೆಳ ಸೇತುವೆಯಿಂದ ಉಣಕಲ್‌ ಸೇರುವ ತನಕದ ಕಾಂಕ್ರೀಟ್‌ ರಸ್ತೆ ಕಾಮಗಾರಿಗೆ ಚಾಲನೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು.

‘₹500 ಕೋಟಿ ವೆಚ್ಚದಲ್ಲಿ ಜಿಲ್ಲೆಯ ವಿವಿಧೆಡೆ 2016ರಲ್ಲಿಯೇ ಕಾಂಕ್ರೀಟ್‌ ರಸ್ತೆಗಳನ್ನು ನಿರ್ಮಿಸಲು ಪ್ರಯತ್ನ ನಡೆದಿತ್ತು. ರಾಜ್ಯ ಸರ್ಕಾರದ ಅಸಹಕಾರದಿಂದ ಅದು ಸಾಧ್ಯವಾಗಲಿಲ್ಲ. ₹389 ಕೋಟಿ ವೆಚ್ಚದಲ್ಲಿ ಫ್ಲೈ ಓವರ್‌ ನಿರ್ಮಾಣವಾಗಲಿವೆ. ₹95.86 ಕೋಟಿ ವೆಚ್ಚದ ಬೈಪಾಸ್‌ ನಿರ್ಮಾಣ ಕಾರ್ಯ ನಡೆಯುತ್ತಿದೆ’ ಎಂದರು.

‘ನಿರ್ಮಾಣವಾಗಲಿರುವ ರಸ್ತೆ ರೈಲ್ವೆ ಕೆಳ ಸೇತುವೆಯಿಂದ ಆರಂಭವಾಗಿ ಕೇಶ್ವಾಪುರ, ನಾಗಶೆಟ್ಟಿಕೊಪ್ಪ, ಖಾದಿ ಗ್ರಾಮೋದ್ಯೋಗ, ಗೋಪನಕೊಪ್ಪ, ಗಂಗೂಬಾಯಿ ಹಾನಗಲ್‌ ಗುರುಕುಲ ಮಾರ್ಗವಾಗಿ ಸಾಯಿನಗರ ಉಣಕಲ್‌ಗೆ ಸೇರುವ ರಸ್ತೆಗೆ ಸಂಪರ್ಕ ಕಲ್ಪಿಸಲಾಗುತ್ತದೆ. ₹43.48 ಕೋಟಿ ವೆಚ್ಚದಲ್ಲಿ ನಡೆಯುವ ಕಾಮಗಾರಿಯನ್ನು ಹನ್ನೊಂದು ತಿಂಗಳಲ್ಲಿ ಪೂರ್ಣಗೊಳ್ಳಲಿದೆ’ ಎಂದು ಹೇಳಿದರು.

‘ರಸ್ತೆ ಕಾಮಗಾರಿ ವೇಗವಾಗಿ ನಡೆಯಲು ಪಾಲಿಕೆ ಅಧಿಕಾರಿಗಳು ಸಹಕಾರ ಕೊಡಬೇಕು. ಪದೇ ಪದೇ ರಸ್ತೆ ಅಗೆಯಬಾರದು. ಅಮೃತ ಯೋಜನೆಯಲ್ಲಿ ಧಾರವಾಡದಲ್ಲಿ ನಡೆದ ಕಾಮಗಾರಿ ಕಳಪೆಯಾಗಿದ್ದು, ಅಧಿಕಾರಿಗಳು ಗುಣಮಟ್ಟದ ಮೇಲೆ ಕಣ್ಣಿಡಬೇಕು. ಕಳಪೆಯಾಗಿರುವ ರಸ್ತೆಗಳನ್ನು ಸರಿಪಡಿಸಬೇಕು’ ಎಂದು ಸೂಚಿಸಿದರು.

ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ ಮಾತನಾಡಿ ‘ಅಭಿವೃದ್ಧಿ ಕೆಲಸಗಳಿಗಾಗಿ ಹಳೇ ಮೈಸೂರು ಭಾಗದಲ್ಲಿ ಎಲ್ಲ ಪಕ್ಷಗಳ ಜನಪ್ರತಿನಿಧಿಗಳು ಒಂದಾಗುವಂತೆ ನಮ್ಮಲ್ಲಿಯೂ ಆಗಬೇಕು. ಜನ ಕೂಡ ಗುಣಮಟ್ಟದ ಕಾಮಗಾರಿಯ ಬಗ್ಗೆ ಗಮನ ಹರಿಸಬೇಕು’ ಎಂದರು.

‘ಪಕ್ಷಾತೀತವಾಗಿ ಕೆಲಸ ಮಾಡಿದರೆ ಮೂರ್ನಾಲ್ಕು ವರ್ಷಗಳಲ್ಲಿ ಜಿಲ್ಲೆ ಅಭಿವೃದ್ಧಿಯಾಗುತ್ತದೆ. ಈಗಿನ ಶೇ 90ರಷ್ಟು ಅಧಿಕಾರಿಗಳು ಕಮಿಷನ್‌ ಆಸೆಗೆ ಕಟ್ಟುಬಿದ್ದು ಗುಣಮಟ್ಟದ ಕೆಲಸ ಮಾಡುತ್ತಿಲ್ಲ. ಕೆಳ ಹಂತದ ಅಧಿಕಾರಿಗಳು ಹಣ ವಸೂಲಿ ಮಾಡಿ ಮೇಲಿನವರಿಗೆ ಕೊಡಬೇಕು ಎಂದು ಹೇಳುತ್ತಾರೆ; ಆ ಮೇಲಿನವರು ಯಾರು ಎಂಬುದೇ ಗೊತ್ತಿಲ್ಲ’ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್‌ ಮಾತನಾಡಿ ‘ಆನಂದ ನಗರ, ಮುರ್ಡೇಶ್ವರ ನಗರ, ರವಿನಗರದಲ್ಲಿ ಕಾಂಕ್ರೀಟ್‌ ರಸ್ತೆ ನಿರ್ಮಾಣಕ್ಕೆ 15 ದಿನಗಳಲ್ಲಿ ಭೂಮಿಪೂಜೆ ಮಾಡಲಾಗುವುದು. ಎಲ್ಲಿಯೇ ಕಾಮಗಾರಿ ನಡೆದರೂ, ಅದರ ವಿವರಗಳ ನಾಮಫಲಕ ಕಡ್ಡಾಯವಾಗಿ ಹಾಕಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಕಾಲೊನಿಗಳ ಒಳ ರಸ್ತೆಗಳ ಅಭಿವೃದ್ಧಿಗೆ ಲೋಕೊಪಯೋಗಿ ಇಲಾಖೆಯಿಂದ ₹100 ಕೋಟಿ ಅನುದಾನ ಬಂದಿದ್ದು, ಎಲ್ಲ ರಸ್ತೆಗಳು ಸುಧಾರಣೆಯಾಗುತ್ತವೆ. ಅವಳಿ ನಗರ ಒಂದು ವರ್ಷದಲ್ಲಿ ದೂಳು ಮುಕ್ತವಾಗುತ್ತದೆ’ ಎಂದು ಭರವಸೆ ವ್ಯಕ್ತಪಡಿಸಿದರು.

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್‌. ಪಾಟೀಲ, ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್, ರಾಷ್ಟ್ರೀಯ ಹೆದ್ದಾರಿ ಉಪವಿಭಾಗ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಆರ್‌.ಕೆ. ಮಠದ, ಪಾಲಿಕೆ ಆಯುಕ್ತ ಸುರೇಶ ಇಟ್ನಾಳ, ಬಿಜೆಪಿ ಮುಖಂಡರಾದ ನಾಗೇಶ ಕಲಬುರ್ಗಿ, ಸುಧೀರ ಸರಾಫ್‌, ಡಿ.ಕೆ. ಚವ್ಹಾಣ, ಮೇನಕಾ ಹುರಳಿ, ಶಿವಾನಂದ ಮುತ್ತಣ್ಣನವರ, ಮಾಧ್ಯಮ ವಕ್ತಾರ ರವಿ ನಾಯ್ಕ ಇದ್ದರು.

‘ರಾಜ್ಯದಲ್ಲಿ ಈಗಲೂ ಸಮ್ಮಿಶ್ರ ಸರ್ಕಾರ’

ಬೇರೆ ಪಕ್ಷದವರನ್ನು ಸೇರಿಸಿಕೊಂಡು ಬಿಜೆಪಿ ಅಧಿಕಾರಕ್ಕೆ ಬಂದಿದ್ದರೂ, ಅದು ಸಮ್ಮಿಶ್ರ ಸರ್ಕಾರವೇ ಎಂದು ಹೊರಟ್ಟಿ ಕುಟುಕಿದರು. ಹೊರಗಡೆಯಿಂದ ಬಂದವರಿಗೆ ಸಚಿವ ಸ್ಥಾನ ಕೊಡಬೇಕಾಗಿರುವ ಕಾರಣ ಶೆಟ್ಟರ್‌ ಅವರ ಪರಿಸ್ಥಿತಿಯೂ ಸರಿಯಿಲ್ಲ ಎಂದು ಕಾಲೆಳೆದರು.

ಇದಕ್ಕೆ ತಮ್ಮ ಭಾಷಣದಲ್ಲಿ ಶೆಟ್ಟರ್‌ ‘ಬೇರೆ ಬೇರೆ ಪಕ್ಷಗಳಿಂದ ಬಂದಾಗ ಮಾತ್ರ ನಮ್ಮ ಪಕ್ಷ ದೊಡ್ಡದಾಗುತ್ತದೆ. ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ, ಸಿ.ಎಸ್. ಅಶ್ವತ್ಥನಾರಾಯಣ ಮತ್ತು ಲಕ್ಷ್ಮಣ ಸವದಿ ಅವರೆಲ್ಲರೂ ಜನತಾದಳದಲ್ಲಿ ಇದ್ದವರು. ನೀವೊಬ್ಬರು ಮಾತ್ರ ಅಲ್ಲೇ ಉಳಿದಿದ್ದೀರಿ’ ಎಂದು ಟಾಂಗ್‌ ನೀಡಿದರು.

15 ದಿನಗಳಲ್ಲಿ ಮೂರು ದಿನಕ್ಕೊಮ್ಮೆ ನೀರು

ಅವಳಿ ನಗರಗಳ ಜನರಿಗೆ ಕುಡಿಯುವ ನೀರು ಒದಗಿಸಲು ನಡೆಯುತ್ತಿರುವ ಕಾಮಗಾರಿ ಪೂರ್ಣಗೊಳ್ಳುವ ಹಂತ ತಲುಪಿದ್ದು, ಫೆಬ್ರುವರಿ ಮೊದಲ ವಾರದಲ್ಲಿ ಮೂರು ದಿನಗಳಿಗೊಮ್ಮೆ ನೀರು ಪೂರೈಕೆಯಾಗಲಿದೆ ಎಂದು ಶೆಟ್ಟರ್ ಹೇಳಿದರು.

‘₹26 ಕೋಟಿ ವೆಚ್ಚದ ಕಾಮಗಾರಿ ಪೂರ್ಣಗೊಂಡ ಬಳಿಕ ಮಲಪ್ರಭಾದಿಂದ ದಿನಕ್ಕೆ 40 ಎಂಎಲ್‌ಡಿ ನೀರು ಹೆಚ್ಚುವರಿಯಾಗಿ ಸಿಗುತ್ತದೆ. ಈ ನೀರು ಸರಬರಾಜು ಮಾಡಿ ನೀರಿನ ಭವಣೆ ನೀಗಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT