ಮಂಗಳವಾರ, ಅಕ್ಟೋಬರ್ 26, 2021
23 °C

ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರಕ್ಕೆ ಕಾರು ಹಸ್ತಾಂತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ನಗರದ ಜೈನ್‌ ಇಂಟರ್‌ನ್ಯಾಷನಲ್‌ ಟ್ರೇಡ್‌ ಆರ್ಗನೈಜೇಷನ್‌ (ಜಿತೋ) ದಾನವಾಗಿ ನೀಡಿದ ಮಾರುತಿ ವಿಂಗರ್‌ ಕಾರನ್ನು ಶಾಸಕ ಜಗದೀಶ ಶೆಟ್ಟರ್‌ ರಾಷ್ಟ್ರೋತ್ಥಾನ ರಕ್ತನಿಧಿ ಕೇಂದ್ರಕ್ಕೆ ಹಸ್ತಾಂತರಿಸಿದರು.

ಉಷಾ ಕಿವುಡ ಹಾಗೂ ವಿಶೇಷ ಮಕ್ಕಳ ಕೇಂದ್ರದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ವಾಹನ ಹಸ್ತಾಂತರಿಸಿ ಮಾತನಾಡಿದ ಅವರು ’ರಾಜಕೀಯ ಕಾರಣಕ್ಕಾಗಿ ಆರ್‌ಎಸ್‌ಎಸ್‌ ಅನ್ನು ಟೀಕಿಸುವವರು ಸಂಘದ ಶಾಖೆಗೆ ಹೋಗುವುದು ಬೇಡ. ಇಲ್ಲಿನ ನೀಲಿಜನ್‌ ರಸ್ತೆಯಲ್ಲಿರುವ ಸಂಘದ ರಕ್ತನಿಧಿ ಕೇಂದ್ರಕ್ಕೆ ಭೇಟಿ ನೀಡಬೇಕು. ಅವರ ಸಾಮಾಜಿಕ ಸೇವೆಯನ್ನು ನೋಡಿಯಾದರೂ ಕಲಿಯಬೇಕು’ ಎಂದರು.

’ಕೋವಿಡ್‌ ಪ್ರಕರಣಗಳು ಹೆಚ್ಚಿದ್ದ ಸಮಯದಲ್ಲಿ ರಾಷ್ಟ್ರೋತ್ಥಾನ ರಕ್ತನಿಧಿ ಅನೇಕ ಸಮಾಜಮುಖಿ ಕೆಲಸಗಳನ್ನು ಮಾಡಿದೆ. ದಾನಿಗಳು ಕೂಡ ನಿರೀಕ್ಷೆಗೂ ಮೀರಿ ನೆರವಾಗಿದ್ದಾರೆ. ಅನುಕೂಲವಿದ್ದವರು ದಾನ ಕೊಡುವುದರಿಂದ ಸಮಾಜಕ್ಕೆ ಉತ್ತಮ ಸಂದೇಶ ಕೊಟ್ಟಂತಾಗುತ್ತದೆ’ ಎಂದರು.

ಸಕ್ಕರೆ ಖಾತೆ ಸಚಿವ ಶಂಕರಪಾಟೀಲ ಮುನೇನಕೊಪ್ಪ ಮಾತನಾಡಿ ’ಜೈನ ಸಮುದಾಯ ಸಾಮಾಜಿಕ ಕಾರ್ಯಕ್ಕೆ ಯಾವಾಗಲೂ ಮುಂದು. ಈಗ ಸುಮಾರು ₹7 ಲಕ್ಷ ವೆಚ್ಚದಲ್ಲಿ ಕಾರು ದಾನವಾಗಿ ನೀಡಿದ್ದು ಶ್ಲಾಘನೀಯ’ ಎಂದರು.

ಯುಪಿಎಸ್‌ಸಿ ಪರೀಕ್ಷೆಯಲ್ಲಿ 354ನೇ ರ‍್ಯಾಂಕ್‌ ಪಡೆದಿರುವ ಮೇಘಾ ಜೈನ್‌ ಅವರನ್ನು ಜನಪ್ರತಿನಿಧಿಗಳು ಸನ್ಮಾನಿಸಿದರು.

ವಿಧಾನಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್‌, ರಕ್ತನಿಧಿ ಕೇಂದ್ರದ ಟ್ರಸ್ಟಿ ದತ್ತಮೂರ್ತಿ ಕುಲಕರ್ಣಿ, ಜಿತೋದ ಮಾಜಿ ಚೇರ್ಮನ್‌ ಓಂಪ್ರಕಾಶ ಪಿ. ಜೈನ್, ಹುಬ್ಬಳ್ಳಿ ಚಾಪ್ಟರ್‌ನ ಚೇರ್ಮನ್‌ ಶಾಂತಿಲಾಲ್‌ ಓಸ್ವಾಲ್‌, ಪ್ರಧಾನ ಕಾರ್ಯದರ್ಶಿ ರಾಕೇಶ ಕಟಾರಿಯಾ ಸೇರಿದಂತೆ ಸಮಾಜದ ಪ್ರಮುಖರು ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.