ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕೃಷಿ ಉಡಾನ್‌’ಗೆ ಹುಬ್ಬಳ್ಳಿ ವಿಮಾನ ನಿಲ್ದಾಣ ಆಯ್ಕೆ

ಕಾರ್ಗೊಕ್ಕೆ ಚಾಲನೆ,
Last Updated 3 ನವೆಂಬರ್ 2021, 16:14 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಉತ್ತರ ಕರ್ನಾಟಕದ ಕೈಗಾರಿಕೆ ಹಾಗೂ ವಾಣಿಜ್ಯೋದ್ಯಮದ ಬೆಳವಣಿಗೆಗೆ ಅನುಕೂಲ ಕಲ್ಪಿಸುವ ಕಾರ್ಗೊ ಸೌಲಭ್ಯ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಅಧಿಕೃತವಾಗಿ ಆರಂಭವಾಗಿದ್ದು, ಉದ್ಯಮಿಗಳಲ್ಲಿ ವಾಣಿಜ್ಯಿಕ ಚಟುವಟಿಕೆ ಗರಿಗೆದರುವ ನಿರೀಕ್ಷೆ ಮೂಡಿದೆ.

ಇಷ್ಟು ದಿನ ಕಾರ್ಗೊ ಸೌಲಭ್ಯ ಸಾಂಕೇತಿಕವಾಗಿ ನಡೆಯುತ್ತಿತ್ತು. ಬುಧವಾರ ಈ ಕಾರ್ಯಾಚರಣೆಗೆ ಅಧಿಕೃತವಾಗಿ ಚಾಲನೆ ಲಭಿಸಿತು. ಇದರಿಂದಾಗಿ ತ್ವರಿತವಾಗಿ ಕೊರಿಯರ್, ತುರ್ತು ಅಗತ್ಯದ ಸಾಮಗ್ರಿಗಳು ಮತ್ತು ಇ ಕಾಮರ್ಸ್‌ ಕಂಪನಿಗಳು ಸೇರಿದಂತೆ ಹಲವಾರು ಉದ್ಯಮಿಗಳಿಗೆ ಅನುಕೂಲವಾಗಲಿದೆ.

ಸದ್ಯಕ್ಕೆ ಇಂಡಿಗೊ, ಸ್ಟಾರ್‌ ಏರ್‌ ಮತ್ತು ಅಲಯನ್ಸ್‌ ಏರ್ ಸಂಸ್ಥೆಗಳು ಇಲ್ಲಿನ ವಿಮಾನ ನಿಲ್ದಾಣದಿಂದ ಪ್ರಯಾಣಿಕ ಸೌಲಭ್ಯಗಳನ್ನು ಒದಗಿಸುತ್ತಿವೆ. ಚೆನ್ನೈ, ಬೆಂಗಳೂರು, ಮುಂಬೈ, ಕೊಚ್ಚಿ ಮತ್ತು ಹೈದರಾಬಾದ್‌ ಸೇರಿದಂತೆ ಇತರ ಪ್ರಮುಖ ನಗರಗಳಿಗೆ ವಿಮಾನ ಸೌಲಭ್ಯವಿದೆ. ಸ್ಥಳೀಯರ ಬೇಡಿಕೆಗೆ ಅನುಗುಣವಾಗಿ ಮತ್ತಷ್ಟು ವಿಮಾನ ಸೌಲಭ್ಯಗಳನ್ನು ಆರಂಭಿಸಲು ವಿಮಾನಯಾನ ಸಂಸ್ಥೆಗಳು ಮುಂದೆ ಬಂದಿವೆ.

ಕಾರ್ಗೊಕ್ಕೆ ಬೇಡಿಕೆ ಹೆಚ್ಚಾದರೆ ವಿಮಾನಯಾನ ಸಂಸ್ಥೆಗಳು ಎ 320, ಎಟಿಆರ್‌ ಮತ್ತು ಎಂಬ್ರೇರ್‌ ವಿಮಾನಗಳ ಮೂಲಕ ಸೌಲಭ್ಯವನ್ನು ಮೇಲ್ದರ್ಜೆಗೆ ಏರಿಸಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಹುಬ್ಬಳ್ಳಿ ಸೇರ್ಪಡೆ: ರೈತರ ಉತ್ಪನ್ನಗಳನ್ನು ವೇಗವಾಗಿ ದೇಶ ಹಾಗೂ ವಿದೇಶಕ್ಕೆ ರವಾನೆ ಮಾಡಲು ಕೇಂದ್ರ ವಿಮಾನಯಾನ ಸಚಿವಾಲಯ 2021–22ರ ಬಜೆಟ್‌ನಲ್ಲಿ ದೇಶದ 53 ವಿಮಾನ ನಿಲ್ದಾಣಗಳಿಂದ ಕೃಷಿ ಉಡಾನ್‌ ಸೌಲಭ್ಯ ಆರಂಭಿಸುವುದಾಗಿ ತಿಳಿಸಿತ್ತು. ಇದರಲ್ಲಿ ಹುಬ್ಬಳ್ಳಿ ನಿಲ್ದಾಣ ಕೂಡ ಅವಕಾಶ ಪಡೆದಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಇಲ್ಲಿನ ವಿಮಾನ ನಿಲ್ದಾಣ ನಿರ್ದೇಶಕ ಪ್ರಮೋದ ಠಾಕ್ರೆ ‘ಕೃಷಿ ಉಡಾನ್‌ಗೆ ಹುಬ್ಬಳ್ಳಿ ಆಯ್ಕೆಯಾಗಿರುವುದು ಇಲ್ಲಿನ ತೋಟಗಾರಿಕೆ ಹಾಗೂ ಪುಷ್ಪೋದ್ಯಮ ಕ್ಷೇತ್ರದಲ್ಲಿ ಬಹುದೊಡ್ಡ ಬದಲಾವಣೆಗೆ ಕಾರಣವಾಗಬಹುದು ಎನ್ನುವ ನಿರೀಕ್ಷೆಯಿದೆ. ರೈತರಿಗೆ ತಮ್ಮ ಉತ್ಪನ್ನಗಳನ್ನು ವೇಗವಾಗಿ ವಿದೇಶಗಳಿಗೆ ಕಳುಹಿಸಲು ಅನುಕೂಲವಾಗುತ್ತದೆ’ ಎಂದರು.

***

ಕಾರ್ಗೊ ಅಧಿಕೃತವಾಗಿ ಆರಂಭವಾಗಿದೆ. ಹುಬ್ಬಳ್ಳಿ–ಅಂಕೋಲಾ ರೈಲುಮಾರ್ಗ ಕೂಡ ಆರಂಭವಾದರೆ ಕಾರ್ಗೊ ಮಹತ್ವ ಇನ್ನಷ್ಟು ಹೆಚ್ಚಾಗುತ್ತದೆ.

ಮಹೇಂದ್ರ ಲದ್ದಡ, ಮಾಜಿ ಅಧ್ಯಕ್ಷ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ

***

ತ್ವರಿತವಾಗಿ ಸಾಮಗ್ರಿಗಳನ್ನು ತರಿಸಿಕೊಳ್ಳಲು ಅನುಕೂಲವಾಗುತ್ತದೆ. ಕಾರ್ಗೊದಿಂದ ಈ ಭಾಗದಲ್ಲಿ ಕೈಗಾರಿಕೆಗಳ ಬೆಳವಣಿಗೆ ವೇಗ ಹೆಚ್ಚಾಗುವ ವಿಶ್ವಾಸ ಮೂಡಿದೆ.

-ವಿನಯ್‌ ಜವಳಿ, ಅಧ್ಯಕ್ಷ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT