ಶನಿವಾರ, ಫೆಬ್ರವರಿ 4, 2023
21 °C

ಹುಬ್ಬಳ್ಳಿ | ಬಣ್ಣದರ್ಪಣೆ ಅಭಿಯಾನಕ್ಕೆ ಚಾಲನೆ ನಾಳೆ: ಕೇಂದ್ರ ಸಚಿವ ಜೋಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ‘ಸ್ವಚ್ಛತೆಯಿಂದ ಧ್ಯೇಯವಾಕ್ಯದೊಂದಿಗೆ ಧಾರವಾಡ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಸರ್ಕಾರಿ ಶಾಲಾ–ಕಾಲೇಜುಗಳಿಗೆ ಬಣ್ಣ ಬಳಿಯುವ ‘ಬಣ್ಣದರ್ಪಣೆ’ ಕಾರ್ಯಕ್ರಮಕ್ಕೆ ಕುಂದಗೋಳ ಪಟ್ಟಣದ ಶ್ರೀ ಹರಭಟ್ಟ ಶಾಲೆ ಮೈದಾನದಲ್ಲಿ ಸಂಜೆ 6ಕ್ಕೆ ಚಾಲನೆ ನೀಡಲಾಗುವುದು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಜೆಎಸ್‌ಡಬ್ಲ್ಯೂ ಕಂಪನಿಯ ಸಿಎಸ್‌ಆರ್‌(ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ) ನಿಧಿಯಿಂದ ಈ ಅಭಿಯಾನ ಹಮ್ಮಿಕೊಂಡಿದ್ದು, ₹64 ಕೋಟಿ ವೆಚ್ಚದಲ್ಲಿ 1,177 ಶಾಲಾ–ಕಾಲೇಜುಗಳಿಗೆ ಬಣ್ಣ ಬಳಿಯಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಒಂದೊಂದು ಕೊಠಡಿಗೆ ಗುಣಮಟ್ಟದ 20 ಲೀ. ಬಣ್ಣದಂತೆ ಅಗತ್ಯವಿದ್ದಷ್ಟು ಬಣ್ಣ ಹಾಗೂ ಬ್ರಷ್‌ ನೀಡಲಾಗುವುದು. ಬಣ್ಣ ಬಳಿಯಲು ಜವಾಬ್ದಾರಿ ತೆಗೆದುಕೊಂಡವರು ಆಧಾರ ಕಾರ್ಡ್‌ ನೀಡಿ ನೋಂದಣಿ ಮಾಡಿಕೊಳ್ಳಬೇಕು. ಹಳೆಯ ವಿದ್ಯಾರ್ಥಿಗಳು, ಊರ ನಾಗರಿಕರು, ಪಾಲಕರು ಸಾಧ್ಯವಾದಷ್ಟು ಶ್ರಮದಾನ ಮಾಡಬೇಕು. ಶ್ರಮದಾನಕ್ಕೆ ಸ್ಥಳೀಯವಾಗಿ ಜನರು ಸಿಗದಿದ್ದರೆ ನಾವೇ ವ್ಯವಸ್ಥೆ ಮಾಡುತ್ತೇವೆ. ಉತ್ತಮವಾಗಿ ಬಣ್ಣ ಬಳಿದವರಿಗೆ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ 984 ಪ್ರಾಥಮಿಕ ಶಾಲೆ, 139 ಪ್ರೌಢಶಾಲೆ ಹಾಗೂ ಪದವಿ ಪೂರ್ವ 54 ಕಾಲೇಜುಗಳಿದ್ದು, ಪ್ರತಿ ತಿಂಗಳು 100 ಶಾಲೆಗಳಿಗೆ ಬಣ್ಣ ಬಳಿಯುವ ಯೋಜನೆ ಹಾಕಿಕೊಳ್ಳಲಾಗಿದೆ. ಮುಂದಿನ ದೀಪಾವಳಿಗೆ ಎಲ್ಲ ಶಾಲೆಗಳನ್ನು ಪೂರ್ಣಗೊಳಿಸಲಾಗುವುದು. ಬಣ್ಣ ಬಳಿಯಲು ಈಗಾಗಲೇ ಆಫ್‌ಲೈನ್‌ನಲ್ಲಿ 45 ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. ಕುಂದಗೋಳದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಆನ್‌ಲೈನ್‌ ನೋಂದಣಿಗೆ ಚಾಲನೆ ನೀಡಲಾಗುವುದು ಎಂದರು.

ಹು–ಧಾ ಮಹಾನಗರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಸಂಜಯ ಕಪಟಕರ, ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ಕುಂದಗೋಳಮಠ, ಲಿಂಗರಾಜ ಪಾಟೀಲ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು