ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿಮ್ಸ್‌ಗೆ 27 ವೆಂಟಿಲೇಟರ್ ಹಸ್ತಾಂತರ

ಆಸ್ಪತ್ರೆ ಆವರಣದಲ್ಲಿ ಮತ್ತೊಂದು ತುರ್ತು ಆಸ್ಪತ್ರೆಗೆ ಜೋಶಿ ಭೂಮಿ ಪೂಜೆ
Last Updated 19 ಮೇ 2021, 15:57 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಪಿಎಂ ಕೇರ್ಸ್‌ನಡಿ ಕೇಂದ್ರ ಸರ್ಕಾರವು ರಾಜ್ಯಕ್ಕೆ ನೀಡಿರುವ ವೆಂಟಿಲೇಟರ್‌ ಸಿಸ್ಟಂಗಳ ಪೈಕಿ, ಧಾರವಾಡಕ್ಕೆ ಕೊಟ್ಟಿರುವ 27 ಸಿಸ್ಟಂಗಳನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಬುಧವಾರ ಹಸ್ತಾಂತರಿಸಿದರು.ಆಸ್ಪತ್ರೆ ಆವರಣದಲ್ಲಿ ವೇದಾಂತ ಕಂಪನಿಯು ಸಿಎಸ್‌ಆರ್‌ನಡಿ (ಸಾಮಾಜಿಕ ಹೊಣೆಗಾರಿಕೆಯಡಿ) ಕೊರೊನಾ ಸೋಂಕಿತರ ಚಿಕಿತ್ಸೆಗೆ ನಿರ್ಮಿಸುತ್ತಿರುವ ಆಮ್ಲಜನಕಯುಕ್ತ 100 ಹಾಸಿಗೆ ಸಾಮರ್ಥ್ಯದ ತುರ್ತು ಆಸ್ಪತ್ರೆ (ಮೇಕ್‌ಶಿಫ್ಟ್ ಹಾಸ್ಪಿಟಲ್) ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ‘ಧಾರವಾಡ ಜಿಲ್ಲೆಯಲ್ಲಿ ಕೋವಿಡ್ ರೋಗಿಗಳ ಚಿಕಿತ್ಸೆಗೆ ವೆಂಟಿಲೇಟರ್‌ಗಳ ಕೊರತೆ ಇರುವ ಬಗ್ಗೆ ಜಿಲ್ಲಾಧಿಕಾರಿ ಮತ್ತು ಕಿಮ್ಸ್ ನಿರ್ದೇಶಕರು ಗಮನಕ್ಕೆ ತಂದಿದ್ದರು. ತಕ್ಷಣ ಜಿಲ್ಲೆಗೆ ವೆಂಟಿಲೇಟರ್‌ ಒದಗಿಸುವಂತೆ ರಾಜ್ಯ ಸರ್ಕಾರಕ್ಕೆ ವಿನಂತಿಸಿದ್ದೆ. ಅದರಂತೆ, ತಲಾ ₹3.50 ಲಕ್ಷ ವೆಚ್ಚದ 27 ವೆಂಟಿಲೇಟರ್‌ಗಳು ಜಿಲ್ಲೆಗೆ ಬಂದಿವೆ’ ಎಂದರು.

‘ಹಿಂದೆ ಕೇಂದ್ರವು ಕೊಟ್ಟಿದ್ದ ವೆಂಟಿಲೇಟರ್‌ಗಳು ಅತ್ಯುನ್ನತ ತಂತ್ರಜ್ಞಾನ ಹೊಂದಿದ್ದವು. ಅವುಗಳನ್ನು ನಿರ್ವಹಣೆ ಮಾಡುವ ತಂತ್ರಜ್ಞರು ಸರಿಯಾಗಿಇರಲಿಲ್ಲ. ಈಗ ಆಸ್ಪತ್ರೆ ವ್ಯವಸ್ಥೆಗೆ ಅನುಗುಣವಾದ ವೆಂಟಿಲೇಟರ್‌ಗಳನ್ನು ನೀಡಲಾಗಿದ್ದು, ನಿರ್ವಹಣೆಯೂ ಸುಲಭವಾಗಿರಲಿದೆ’ ಎಂದು ಅವರು, ‘ಕಳಪೆ ವೆಂಟಿಲೇಟರ್‌ಗಳನ್ನು ನೀಡಲಾಗಿದೆ’ ಎಂದು ಕಾಂಗ್ರೆಸ್‌ನವರು ಇತ್ತೀಚೆಗೆ ಮಾಡಿದ ಆರೋಪಗಳನ್ನು ಅಲ್ಲಗಳೆದರು.

‘ರಾಜ್ಯಕ್ಕೆ 2 ಲಕ್ಷ ಕೋವಿಡ್ ಲಸಿಕೆ ಬಂದಿದ್ದು, ಜುಲೈನಿಂದ ದೊಡ್ಡ ಪ್ರಮಾಣದಲ್ಲಿ ಲಸಿಕೆ ಅಭಿಯಾನ ಆರಂಭಿಸಲಾಗುವುದು. ಲಸಿಕೆ ಖರೀದಿಗೆ ₹100 ಕೋಟಿ ನೀಡುವುದಾಗಿ ಹೇಳುತ್ತಿರುವ ಕಾಂಗ್ರೆಸ್‌ನವರು, ಆರಂಭದಲ್ಲಿ ಲಸಿಕೆ ಬಂದಾಗ ಅದರ ಬಗ್ಗೆ ಅಪಪ್ರಚಾರ ಮಾಡಿದ್ದರು. ಜನ ಲಸಿಕೆ ಹಾಕಿಸಿಕೊಳ್ಳದಂತೆ ಮಾಡಿದ್ದರು. ಇನ್ನು ರಾಹುಲ್ ಗಾಂಧಿ ಅವರಿಗೆ ವೆಂಟಿಲೇಟರ್‌ ಕುರಿತು ಜ್ಞಾನವೇ ಇಲ್ಲ. ತಜ್ಞರನ್ನು ಕೇಳಿ ಅವರು ಮಾತನಾಡಿದರೆ ಒಳ್ಳೆಯದು. ಜಾಣರು ಕೇಳಿದರೆ, ಏನಾದರೂ ಹೇಳಬಹುದು. ರಾಹುಲ್‌ ಅವರಿಗೆ ಏನು ಹೇಳುವುದು’ ಎಂದು ವ್ಯಂಗ್ಯವಾಡಿದರು.

15 ದಿನದಲ್ಲಿ ಆಸ್ಪತ್ರೆ ಆರಂಭ:

‘ಕಿಮ್ಸ್ ಆಸ್ಪತ್ರೆ ಆವರಣದಲ್ಲಿ ವೇದಾಂತ್ ಕಂಪನಿ ಸಿಎಸ್‌ಆರ್‌ನಡಿ ನಿರ್ಮಿಸುತ್ತಿರುವ ತುರ್ತು ಆಸ್ಪತ್ರೆ ಹದಿನೈದು ದಿನದೊಳಗೆ ಕಾರ್ಯಾರಂಭ ಮಾಡಲಿದೆ. ಈ ಕುರಿತು, ವೇದಾಂತ್ ಕಂಪನಿಯ ಮುಖ್ಯಸ್ಥ ಅನಿಲ್ ಅಗರ್‌ವಾಲ್ ಅವರೊಂದಿಗೆ ಮಾತನಾಡಿದ್ದು,ಆಸ್ಪತ್ರೆಗೆ ಎಲ್ಲಾ ರೀತಿಯ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ’ ಎಂದರು.

ಕಿಮ್ಸ್ ವೈದ್ಯಕೀಯ ಅಧೀಕ್ಷಕ ಡಾ. ಅರುಣ್‌ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT