ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಕ್ಕನರ್ತಿ: ಮೂಲಸೌಕರ್ಯ ಮರೀಚಿಕೆ

ಹಾಳಾದ ಶುದ್ಧ ನೀರಿನ ಘಟಕ, ಹದಗೆಟ್ಟ ರಸ್ತೆ: ದುರಸ್ತಿಗೆ ಕಾದಿದೆ ಶಾಲೆ
ಬಸನಗೌಡ ಪಾಟೀಲ
Published 14 ಫೆಬ್ರುವರಿ 2024, 5:26 IST
Last Updated 14 ಫೆಬ್ರುವರಿ 2024, 5:26 IST
ಅಕ್ಷರ ಗಾತ್ರ

ಕುಂದಗೋಳ: ತಾಲ್ಲೂಕಿನ ಚಿಕ್ಕನರ್ತಿ ಗ್ರಾಮ ಅಗತ್ಯ ಮೂಲಸೌಕರ್ಯಗಳಿಂದ ವಂಚಿತವಾಗಿದೆ.

ಯರಗುಪ್ಪಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಈ ಗ್ರಾಮದಲ್ಲಿ 1,500 ಜನಸಂಖ್ಯೆ ಇದ್ದು, 3 ಜನ ಗ್ರಾಮ ಪಂಚಾಯಿತಿ ಸದಸ್ಯರನ್ನು ಹೊಂದಿದೆ. ಗ್ರಾಮದಲ್ಲಿ ಒಂದು ಶುದ್ಧ ಕುಡಿಯುವ ನೀರಿನ ಘಟಕವಿದ್ದು, ಹಲವು ತಿಂಗಳಿಂದ ಕಾರ್ಯ ನಿರ್ವಹಿಸುತ್ತಿಲ್ಲ. ಯಲ್ಲಮ್ಮನ ದೇವಸ್ಥಾನ ಹತ್ತಿರದ ಓಣಿ, ಬಿಳೇಬಾಳದವರ ಓಣಿ, ಅಗಸರ ಓಣಿಯಲ್ಲಿ ಸಿ.ಸಿ ರಸ್ತೆ ನಿರ್ಮಾಣವಾಗಿಲ್ಲ.

ಗ್ರಾಮದಲ್ಲಿ ಸುಸಜ್ಜಿತ ಚರಂಡಿ ವ್ಯವಸ್ಥೆಯಿಲ್ಲ. ಮಳೆ ಬಂದರೆ ಚರಂಡಿ ನೀರು ರಸ್ತೆ ಮೇಲೆ ಹರಿಯುತ್ತದೆ. ಹದಗೆಟ್ಟ ರಸ್ತೆಯಲ್ಲಿ ಸಂಚರಿಸಲು ವಾಹನ ಸವಾರರು ದಿನನಿತ್ಯ ಪರದಾಡಬೇಕಾದ ಸ್ಥಿತಿ ಇದೆ. ಕೆರೆಯಲ್ಲಿ ಹೂಳು ತುಂಬಿದೆ. ಇದ್ದ ಅಲ್ಪಸ್ವಲ್ಪ ನೀರನ್ನು ಜನರು ವೈಯಕ್ತಿಕ ಕೆಲಸಗಳಿಗೆ ಪಂಪ್‌ಸೆಟ್ ಮೂಲಕ ಬಳಸಿಕೊಳ್ಳುತ್ತಿದ್ದಾರೆ. ಕೆರೆ ದಂಡೆಯಲ್ಲಿ ಆಳೆತ್ತರಕ್ಕೆ ಬೆಳೆದ ಹುಲ್ಲು, ಬೀಸಾಡಿದ ಮದ್ಯದ ಪಾಕೆಟ್‌, ಪ್ಲಾಸ್ಟಿಕ್ ಚೀಲಗಳು ಕೆರೆಯ ಸ್ವಚ್ಛತೆಗೆ ಮಾರಕವಾಗಿವೆ.

ಕೆರೆಯ ಮಧ್ಯೆ ಸಿಹಿ ನೀರಿನ ಬಾವಿ ಇದೆ. ಬಾವಿ ತಲುಪಲು ಸೇತುವೆ ನಿರ್ಮಿಸಿದ್ದು, ಅದು ಶಿಥಿಲಾವಸ್ಥೆ ತಲುಪಿದೆ. ಸೇತುವೆಯನ್ನು ಜನರು ಕಾಳು, ಬಟ್ಟೆ ಒಣಗಿಸಲು ಬಳಸಿಕೊಳ್ಳುತ್ತಿದ್ದಾರೆ. ಬಾವಿಯ ನೀರನ್ನು ಬಳಸಲು ಯಾವುದೇ ಮೋಟರ್ ವ್ಯವಸ್ಥೆ ಇಲ್ಲ.

ಕಿರಿಯ ಪ್ರಾಥಮಿಕ ಶಾಲೆಯ ಕೆಲವು ಕೊಠಡಿಗಳ ಚಾವಣಿ ಅಲ್ಲಲ್ಲಿ ಕಿತ್ತು ಹೋಗಿದೆ. ಮಳೆ ಬಂದರೆ ಕೊಠಡಿಗಳು ಸೋರುತ್ತವೆ. 8ನೇ ತರಗತಿಗೆ ಪಕ್ಕದ ಗ್ರಾಮಕ್ಕೆ ಹೋಗಬೇಕು. ಮಳೆ ಬಂದಾಗ ಹಳ್ಳ ತುಂಬಿ ಬಂದರೆ ಶಾಲೆಗೆ ಹೋಗಲು ಆಗುವುದಿಲ್ಲ ಎನ್ನುತ್ತಾರೆ ವಿದ್ಯಾರ್ಥಿಗಳು.

ಗ್ರಾಮದಲ್ಲಿ ಬಸ್ ನಿಲ್ದಾಣವಿಲ್ಲ. ಸರಿಯಾದ ಸಮಯಕ್ಕೆ ಹುಬ್ಬಳ್ಳಿಯಿಂದ ಬಸ್‌ ವ್ಯವಸ್ಥೆ ಇಲ್ಲ. ಬಹಿರ್ದೆಸೆಗೆ ಬಯಲನ್ನೇ ಅವಲಂಬಿಸಬೇಕಾಗಿದೆ. ಆಸ್ಪತ್ರೆಗೆ ಪಕ್ಕದ ಗ್ರಾಮ ಯರಗುಪ್ಪಿಯೇ ಆಸರೆಯಾಗಿದೆ.

ನಮ್ದು ಸಣ್ಣ ಊರ್ ಅಂತಾ ನಮ್ಮನ್ನ ಹೊಳ್ಳಿ ನೋಡೋರಿಲ್ಲ. ಚುನಾವಣೆ ಇದ್ದಾಗಷ್ಟೇ ದೊಡ್ಡ ಮಂದಿಗೆ ಸಣ್ಣ ಊರು ನೆನಪಾಗತೈತಿ ರೇಣುಕಮ್ಮ,
ಚಿಕ್ಕನರ್ತಿ ನಿವಾಸಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT