ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಶ್ಚಿಯನ್ನರ ಅವಹೇಳನ: ಕ್ರಮಕ್ಕೆ ಆಗ್ರಹ

Last Updated 18 ಮಾರ್ಚ್ 2021, 12:39 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಮತಾಂತರ ಮಾಡುತ್ತಾರೆ ಎನ್ನುವ ಸುಳ್ಳು ಕಾರಣ ಮುಂದಿಟ್ಟು ಕ್ರಿಶ್ಚಿಯನ್ನರನ್ನು ಅವಹೇಳನ ಮಾಡಲಾಗುತ್ತಿದ್ದು, ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಹಾಗೂ ಗೃಹ ಸಚಿವರಿಗೆ ಪತ್ರ ಬರೆದಿದ್ದೇನೆ ಎಂದು ಕರ್ನಾಟಕ ರಾಜ್ಯ ಕ್ರೈಸ್ತ ಸಂಘ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಡೇವಿಡ್‌ ಸಿಮೇಯೊನ್ ತಿಳಿಸಿದರು.

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ‘ನಮ್ಮ ಧರ್ಮವನ್ನು ಪ್ರೀತಿಯಿಂದ ಒಪ್ಪಿಕೊಂಡವರು ಕಾನೂನಿನ ನಿಯಮಗಳನ್ನು ಅನುಸರಿಸಿಯೇ ಮತಾಂತರಗೊಳ್ಳುತ್ತಿದ್ದಾರೆ. ಬಲವಂತವಾಗಿ ನಾವು ಯಾರನ್ನೂ ಮತಾಂತರ ಮಾಡುತ್ತಿಲ್ಲ. ಹಾವೇರಿ ಹಾಗೂ ಬೆಳಗಾವಿ ಜಿಲ್ಲೆಗಳಲ್ಲಿ ಪ್ರಾರ್ಥನೆ ಸಲ್ಲಿಸುವಾಗ ಮತಾಂತರ ಮಾಡಲಾಗುತ್ತಿದೆ ಎನ್ನುವ ಸುಳ್ಳು ಮಾಹಿತಿಯಿಂದಾಗಿ ನಮ್ಮ ಸಮಾಜದ ಜನರ ಮೇಲೆ ಹಲ್ಲೆ ಮಾಡಲಾಗಿದೆ’ ಎಂದರು.

‘ಅವರವರ ಧರ್ಮ ಆಚರಿಸಲು ಎಲ್ಲರೂ ಸ್ವತಂತ್ರರು. ಆದರೆ, ಕ್ರಿಶ್ಚಿಯನ್‌ ಸಭಾಪಾಲಕರನ್ನು ಭಯೋತ್ಪಾದಕರಂತೆ ಬಿಂಬಿಸಲಾಗುತ್ತಿದೆ. ಮತಾಂತರದ ನೆಪದಲ್ಲಿ ದಬ್ಬಾಳಿಕೆ ಮಾಡಲಾಗುತ್ತಿದೆ. ಆದ್ದರಿಂದ ಭದ್ರತೆ ನೀಡಬೇಕೆಂದು ಮುಖ್ಯಮಂತ್ರಿಗೆ ಮನವಿ ಮಾಡಿದ್ದೇನೆ’ ಎಂದು ತಿಳಿಸಿದರು.

‘ನಮ್ಮ ಸಮಾಜದವರು ಹಲವಾರು ಬಾರಿ ವಿವಿಧ ಬೇಡಿಕೆಗಳನ್ನು ಮುಂದಿಟ್ಟಾಗ ಎಲ್ಲ ಮುಖ್ಯಮಂತ್ರಿಗಳು ಈಡೇರಿಸಿದ್ದಾರೆ. ಸಂದರ್ಭಕ್ಕೆ ಅನುಗುಣವಾಗಿ ಅನುದಾನ ನೀಡಿದ್ದಾರೆ. ಆದರೆ, ಕ್ರೈಸ್ತ ಅಭಿವೃದ್ಧಿ ಮಂಡಳಿ ಸ್ಥಾಪಿಸುವ ವಾಗ್ದಾನ ಮಾತ್ರ ಈಡೇರಿಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.

ವಿಧಾನ ಪರಿಷತ್‌ ಮಾಜಿ ಸಭಾಪತಿಯೂ ಆದ ಸಿಮೇಯೊನ್ ‘ವಿಧಾನಸಭೆಯಲ್ಲಿ ಕಲಾಪ ಸುಗಮವಾಗಿ ಸಾಗಲು ನೈತಿಕ ಸಮಿತಿ ರಚಿಸಬೇಕೆಂದು ಹಿಂದೆಯೇ ಶಿಫಾರಸು ಮಾಡಲಾಗಿತ್ತು. ಈಗಲೂ ಜಾರಿಗೆ ಬಂದಿಲ್ಲ. ಕಲಾಪ ಪರಿಣಾಮಕಾರಿಯಾಗಿರಲು ಪ್ರಶ್ನೋತ್ತರ ಹಾಗೂ ಶೂನ್ಯ ಅವಧಿಗಳು ಕಡ್ಡಾಯವಾಗಿ ನಡೆಯಬೇಕು’ ಎಂದು ಅಭಿಪ್ರಾಯಪಟ್ಟರು.

ಒಕ್ಕೂಟದ ಉಪಾಧ್ಯಕ್ಷೆ ದೇವನ್‌ಸನ್‌ ಸ್ಯಾಮುಯೆಲ್‌, ಹುಬ್ಬಳ್ಳಿ–ಧಾರವಾಡದ ಅಧ್ಯಕ್ಷ ಸುನಿಲ ಮಹಾಡೆ, ಹಾವೇರಿಯ ಪದಾಧಿಕಾರಿ ಕಿರಣ ನಾಯಕ, ಶಾದ್ರಾಖ್‌ ಜಾಕೋಬ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT