ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಕ್ಷಿದಾರರಿಗೆ ಅನ್ಯಾಯವಾಗಬಾರದು

ವಕೀಲರಿಗೆ ಜಿಲ್ಲಾ ಪ್ರಧಾನ ನ್ಯಾಯಾಧೀಶ ಈಶಪ್ಪ ಕೆ. ಭೂತೆ ಕಿವಿಮಾತು
Last Updated 1 ಜುಲೈ 2019, 13:36 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ವಕೀಲರು ತಮ್ಮ ವೃತ್ತಿಗೆ ಸಂಬಂಧಿಸಿದಂತೆ ಅಗತ್ಯ ಜ್ಞಾನ ಹೊಂದಿರಬೇಕು. ವಕೀಲರು ಸಿದ್ಧಪಡಿಸುವ ಡ್ರಾಫ್ಟ್‌ ಪ್ರಕರಣಕ್ಕೆ ಭದ್ರ ಬುನಾದಿಯಾಗಿರುತ್ತದೆ. ಅಲ್ಲಿ ಅಗತ್ಯ ಅಂಶಗಳನ್ನಷ್ಟೇ ದಾಖಲಿಸಬೇಕು. ಆ ಮೂಲಕ, ತಮ್ಮನ್ನು ನಂಬಿ ಬರುವ ಕಕ್ಷಿದಾರರಿಗೆ ಅನ್ಯಾಯವಾಗದಂತೆ ಪ್ರಕರಣ ನಿರ್ವಹಿಸಬೇಕು’ ಎಂದು ಜಿಲ್ಲಾ ಪ್ರಧಾನ ಹಾಗೂ ಸೆಷನ್ಸ್ ನ್ಯಾಯಾಧೀಶ ಈಶಪ್ಪ ಕೆ. ಭೂತೆ ಕಿವಿಮಾತು ಹೇಳಿದರು.

ರಾಜ್ಯ ವಕೀಲರ ಪರಿಷತ್ ಹಾಗೂ ಹುಬ್ಬಳ್ಳಿಯ ವಕೀಲರ ಸಂಘವು ವಕೀಲರಿಗಾಗಿ ಒಂದು ತಿಂಗಳು ಆಯೋಜಿಸಿರುವ ‘ಕಾನೂನು ಕಾರ್ಯಾಗಾರ’ವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದ ಅವರು, ‘ವಾದ ಮಂಡಿಸುವಾಗ ಏನನ್ನು ಹೇಳಬೇಕು, ಏನನ್ನು ಹೇಳಬಾರದು ಎಂಬ ಪ್ರಜ್ಞೆ ವಕೀಲರಿಗೆ ಇರಬೇಕು’ ಎಂದರು.

‘ಓದು ಹಾಗೂ ಅನುಭವದಿಂದ ಜ್ಞಾನ ಹೆಚ್ಚುತ್ತದೆ. ಈ ನಿಟ್ಟಿನಲ್ಲಿ ಹಿರಿಯ ವಕೀಲರು ತಮ್ಮ ಅನುಭಗಳನ್ನು ಕಿರಿಯರ ಜತೆ ಹಂಚಿಕೊಳ್ಳಬೇಕು. ವಕೀಲರಿಗಾಗಿ ನಡೆಯುತ್ತಿರುವ ಈ ಕಾರ್ಯಾಗಾರದ ಪ್ರಯೋಜನವನ್ನು ಎಲ್ಲರೂ ಪಡೆಯಬೇಕು. ಆ ಮೂಲಕ, ಜ್ಞಾನ ವಿಸ್ತರಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.

ವಕೀಲರ ಪರಿಷತ್ ಸದಸ್ಯ ವಿ.ಡಿ. ಕಾಮರಡ್ಡಿ ಮಾತನಾಡಿ, ‘ಹಿಂದೆ ವಕೀಲಿಕೆ ಮಾಡುವವರಿಗೆ ಸಲಹೆ ಮತ್ತು ತರಬೇತಿ ನೀಡುವ ಯಾವುದೇ ವ್ಯವಸ್ಥೆ ಇರಲಿಲ್ಲ. ಈಗ ವಕೀಲರ ಸಂಘ ಹಾಗೂ ಪರಿಷತ್‌ ವೃತ್ತಿಗೆ ಹೊಸದಾಗಿ ಬರುವವರಿಗೆ ಅನುಕೂಲ ಕಲ್ಪಿಸಲು ಮಾರ್ಗದರ್ಶಕವಾಗುವಂತಹ ಕಾರ್ಯಾಗಾರಗಳನ್ನು ಆಯೋಜಿಸುತ್ತಿವೆ’ ಎಂದರು.

ವಕೀಲ ಪರಿಷತ್‌ನ ಮತ್ತೊಬ್ಬ ಸದಸ್ಯ ಎ.ಎ. ಮುಗದುಮ, ‘ಉತ್ತಮ ಜ್ಞಾನವಿದ್ದಾಗ ಜಡ್ಜ್‌ ಹುದ್ದೆಯಿಂದಿಡಿದು, ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಹುದ್ದೆಯನ್ನು ಅಲಂಕರಿಸಬಹುದು. ಆದರೆ, ಎಲ್ಲವೂ ನಮ್ಮ ಜ್ಞಾನವನ್ನು ಆಧರಿಸಿದೆ. ಹಿರಿಯರು ತಮ್ಮ ಅನುಭವವನ್ನು ಧಾರೆಯೆರೆಯುವ ಈ ಕಾರ್ಯಾಗಾರಕ್ಕೆ ಎಲ್ಲರೂ ಹಾಜರಾಗಬೇಕು’ ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಅಶೋಕ ಬಳಿಗಾರ ಮಾತನಾಡಿ, ‘ವಕೀಲರಿಗೆ ತಮ್ಮ ವೃತ್ತಿಯಲ್ಲಿ ಪರಿಣತಿ ಇದ್ದಾಗ ಮಾತ್ರ ಕಕ್ಷಿದಾರರಿಗೆ ನ್ಯಾಯ ಕೊಡಿಸಲು ಸಾಧ್ಯ. ಜ್ಞಾನಕ್ಕೆ ಕೊನೆ ಎಂಬುದಿಲ್ಲ. ಈ ಕಾರ್ಯಾಗಾರದಲ್ಲಿಪ್ರಕರಣದ ಡ್ರಾಫ್ಟಿಂಗ್ ಸಿದ್ಧಪಡಿಸುವುದು, ಪಾಟೀಸವಾಲು, ವೃತ್ತಿ ನೀತಿ, ವೃತ್ತಿಪರ ವಿಷಯಗಳ ಕುರಿತು ನ್ಯಾಯಾಧೀಶರು, ನ್ಯಾಯಮೂರ್ತಿಗಳು ಹಾಗೂ ಹಿರಿಯ ವಕೀಲರು ಉಪನ್ಯಾಸ ನೀಡಲಿದ್ದಾರೆ’ ಎಂದರು.

ಪರಿಷತ್‌ನ ಸದಸ್ಯ ಎಸ್‌.ಎಸ್. ಮಿಟ್ಟಲಕೋಡ, ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಗುರು ಹಿರೇಮಠ, ಉಪಾಧ್ಯಕ್ಷ ಎಸ್.ವಿ. ಕೊಪ್ಪರ, ಕೋಶಾಧ್ಯಕ್ಷ ಜಯರಾಜ ಪಾಟೀಲ ಹಾಗೂ ಸಹ ಕಾರ್ಯದರ್ಶಿ ಸುಮಿತ ಶೆಟ್ಟರ ಇದ್ದರು.

ಕಾರ್ಯಾಗಾರವು ಜುಲೈ 1ರಿಂದ 31ರವರೆಗೆ ಸಂಜೆ 4.30ರಿಂದ 6ರವರೆಗೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT