ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಬ್ಬಳ್ಳಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ರೋಡ್‌ ಷೋ, ಮತ ಯಾಚನೆ

Published 25 ಏಪ್ರಿಲ್ 2023, 11:10 IST
Last Updated 25 ಏಪ್ರಿಲ್ 2023, 11:10 IST
ಅಕ್ಷರ ಗಾತ್ರ

ಹುಬ್ಬಳ್ಳಿ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಂಗಳವಾರ ನಗರದಲ್ಲಿ ರೋಡ್ ಷೋ ನಡೆಸಿದರು.

ಅಮರಗೋಳ ಬೀರೇಶ್ವರ ದೇವಸ್ಥಾನದಿಂದ ಗ್ರಾಮದ ಪ್ರಾಥಮಿಕ ಸಹಕಾರಿ ಸಂಘದವರೆಗೆ ಜಯವಾಹಿನಿ ವಾಹನದಲ್ಲಿ ಬೆಂಬಿಗರೊಂದಿಗೆ ತೆರಳಿದ ಸಿಎಂ ಬೊಮ್ಮಾಯಿ, ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಅರವಿಂದ ಬೆಲ್ಲದ ಅವರಿಗೆ ಮತ ನೀಡುವಂತೆ ವಿನಂತಿಸಿದರು.

ಗ್ರಾಮದ ಜನತೆ ಮಾರ್ಗದುದ್ದಕ್ಕೂ ಪುಷ್ಪವೃಷ್ಟಿಗೈದು ಬೊಮ್ಮಾಯಿ ಅವರನ್ನು ಸ್ವಾಗತಿಸಿದರು. ಒಂದೆಡೆ ಬಿಜೆಪಿ ಬಾವುಟ ರಾರಾಜಿಸುತ್ತಿದ್ದರೆ, ಇನ್ನೊಂದೆಡೆ ಅರವಿಂದ ಬೆಲ್ಲದ, ಬೊಮ್ಮಾಯಿ ಪರ ಘೋಷಣೆ ಜೋರಾಗಿದ್ದವು. ಕ್ರೇನ್‌ ಸಹಾಯದಿಂದ ಬೃಹತ್‌ ಸೇಬು ಹಾರ ಹಾಕಿ ಸನ್ಮಾನಿಸಲಾಯಿತು.

ಗ್ರಾಮದ ಜನತೆಯನ್ನು ಉದ್ದೇಶಿಸಿ ಮಾತನಾಡಿದ ಮುಖ್ಯಮಂತ್ರಿ‌ ಬಸವರಾಜ ಬೊಮ್ಮಾಯಿ, ‘ಗ್ರಾಮದ ಅಭಿವೃದ್ಧಿಗೆ ಕೊಡುಗೆ ನೀಡಿದವರು ಯಾರು, ಚುನಾವಣೆ ಸಂದರ್ಭದಲ್ಲಿ ಬಂದು ಹೊಲಿಗೆ ಯಂತ್ರ ನೀಡಿ ಪ್ರಚಾರ ಗಿಟ್ಟಿಸಿಕೊಂಡವರು ಯಾರು ಎನ್ನುವುದು ನಿಮಗೆಲ್ಲ ತಿಳಿದಿದೆ. ಐದುನೂರು, ಒಂದು ಸಾವಿರ ರೂಪಾಯಿಗೆ ಖರೀದಿಸಿ ನೀಡಿದ ಯಂತ್ರಗಳೆಲ್ಲ ಹಾಳಾಗಿದೆ. ಅಭಿವೃದ್ಧಿ ಮತ್ತು ಆಮಿಷದ ನಡುವೆ ಚುನಾವಣೆ ನಡೆಯುತ್ತಿದೆ. ಬೆಲ್ಲದ ಅವರು ಅಭಿವೃದ್ಧಿಗೆ ಪೂರಕವಾದ ವ್ಯಕ್ತಿಯಾಗಿದ್ದಾರೆ’ ಎಂದರು.

‘ನನ್ನ ತಂದೆ, ತಾಯಿಯ ಸಮಾಧಿ ಇದೇ ಅಮರಗೋಳದ ಪುಣ್ಯ ಭೂಮಿಯಲ್ಲಿದೆ. ತಂದೆಯವರು ಇದೇ ಗ್ರಾಮದವರ ಜೊತೆ ಒಡನಾಟ ಇಟ್ಟುಕೊಂಡು ಬೆಳೆದ ವ್ಯಕ್ತಿ. ಅವರ ಹಹಾಗೂ ನನ್ನ ಮೇಲಿನ ಅಭಿಮಾನ ಅರವಿಂದ ಬೆಲ್ಲದವರ ಮೇಲೂ ಇಟ್ಟು, ಗ್ರಾಮದವರೆಲ್ಲ ಒಗ್ಗಟ್ಟಾಗಿ ಅವರನ್ನು ಅತಿಹೆಚ್ಚು ಮತಗಳಿಂದ ಗೆಲ್ಲಿಸಬೇಕು’ ಎಂದು ವಿನಂತಿಸಿದರು.

ಕ್ಷೇತ್ರದ ಅಭ್ಯರ್ಥಿ ಅರವಿಂದ ಬೆಲ್ಲದ, ಅಜ್ಜಪ್ಪ ಹೊರಕೇರಿ, ಮಲ್ಲಿಕಾರ್ಜುನ ಹೊರಕೇರಿ, ಸುನೀತಾ ಮಾಳವದಕರ, ಸ್ವಾಮಿ ಮಹಾನಜ ಶೆಟ್ಟರ್‌ ಹಾಗೂ ಇತರರು ಇದ್ದರು.

ತಲೆಬಾಗಿದ ಸಿಎಂ

ಅಂದಾಜು ಒಂದು ಕಿ.ಮೀ. ರೋಡ್‌ ಷೋ ಮಾರ್ಗದಲ್ಲಿ ಅರ್ಧ ಕಿ.ಮೀ. ಮಾರ್ಗ ಹರಸಾಹಸದಲ್ಲಿಯೇ ಸಾಗಿತು. ನಾಲ್ಕು ಚಕ್ರ ವಾಹನ ಹೋಗದಂಥ ಇಕ್ಕಟ್ಟಾದ ರಸ್ತೆಯಲ್ಲಿಯೇ ಜೋತಾಡುವ ವಿದ್ಯುತ್‌ ತಂತಿಗಳನ್ನು ಬಡಿಗೆಯಿಂದ ಮೇಲಕ್ಕೆತ್ತುತ್ತ ಸಿಎಂ ಬೊಮ್ಮಾಯಿ ಅವರನ್ನು ಕರೆದೊಯ್ಯಲಾಯಿತು. ವಿದ್ಯುತ್‌ ತಂತಿ ಮೇಲಕ್ಕೆತ್ತುವಾಗ ನೆರೆದ ಜನರು ಭಯಭೀತರಾಗಿ, ‘ವಾಹನದಲ್ಲಿ ರೋಡ್‌ ಷೋ ಅನಗತ್ಯವಾಗಿತ್ತು. ಸಿಎಂ ಸಾಹೇಬ್ರು ನಡೆದುಕೊಂಡು ಬರಬಹುದಿತ್ತು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದು ಕೇಳಿಬಂತು. ಸ್ವತಂ ಸಿಎಂ ಬೊಮ್ಮಾಯಿ ಸಹ ಆ ಸಂದರ್ಭದಲ್ಲಿ ತಲೆಬಾಗುತ್ತ ಕಿರಿಕಿರಿ ಅನುಭವಿಸಿದ್ದು ಕಂಡು ಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT