ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ, ಶಾ, ಬಿಎಸ್‌ವೈ ಆಶೀರ್ವಾದದಿಂದ ಈ ಸ್ಥಾನಕ್ಕೆ ಬಂದೆ: ಮುಖ್ಯಮಂತ್ರಿ ಬೊಮ್ಮಾಯಿ

Last Updated 29 ಜುಲೈ 2021, 8:39 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲೇ ನನ್ನ ಶಿಕ್ಷಣ ಮುಗಿದಿದೆ. ಸ್ನೇಹಿತರ ದೊಡ್ಡ ಬಳಗ ಇದೆ. ಮುಖ್ಯಮಂತ್ರಿ ಆಗುತ್ತೇನೆ ಅಂದುಕೊಂಡಿರಲಿಲ್ಲ.‌ ಮೋದಿ, ಅಮಿತ್ ಶಾ, ನಡ್ಡಾ ದೊಡ್ಡ ಜವಾಬ್ದಾರಿ ಕೊಟ್ಟಿದ್ದಾರೆ. ಅದೇ ರೀತಿ ಬಿ.ಎಸ್‌. ಯಡಿಯೂರಪ್ಪ ಅವರು ಕೂಡ ಗುರುತಿಸಿದ್ದಾರೆ. ಎಲ್ಲರ ಆಶೀರ್ವಾದದಿಂದ ಈ ಸ್ಥಾನಕ್ಕೆ ಬಂದಿದ್ದೇನೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಬೆಂಗಳೂರಿನ ನಂತರ ಹುಬ್ಬಳ್ಳಿ ಮತ್ತು ಧಾರವಾಡ ರಾಜ್ಯದ ಅತಿ ದೊಡ್ಡ ನಗರವಾಗಿದೆ. ಇದರ ಅಭಿವೃದ್ಧಿಗೆ ಅಗತ್ಯ ಪ್ರಾಶಸ್ತ್ಯ ನೀಡುವೆ. ಸಮಸ್ಯೆಗಳನ್ನು ನಿವಾರಿಸಲು ಶ್ರಮಿಸುವೆ. ಇಲ್ಲಿ ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ, ನಮ್ಮ ನಾಯಕರಾದ ಜಗದೀಶ ಶೆಟ್ಟರ್ ಸೇರಿದಂತೆ ಶಾಸಕ ಮಿತ್ರರಿದ್ದಾರೆ. ಪಕ್ಷ ಮತ್ತು ಸಂಘ ಪರಿವಾರದ ಹಿರಿಯರಿದ್ದಾರೆ. ಅವರೆಲ್ಲರ ಜತರ ಚರ್ಚಿಸಿ, ಅವರು ನೀಡುವ ಸಲಹೆ ಸೂಚನೆ ಮೇರೆಗೆ ಅವಳಿನಗರದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.

ಶುಕ್ರವಾರ ಬೆಳಿಗ್ಗೆ ದೆಹಲಿಗೆ ಹೋಗಿ ಪ್ರಧಾನಿ ಮೋದಿ ಮತ್ತು ಅಮಿತ್ ಶಾ ಅವರನ್ನು ಭೇಟಿ ಮಾಡಿ, ಆಶೀರ್ವಾದ ಪಡೆಯುವೆ. ನಂತರ ಎರಡ್ಮೂರು ದಿನಗಳ ಬಳಿಕ, ಮತ್ತೊಮ್ಮೆ ಹೋಗಿ ಸಂಪುಟದ ಬಗ್ಗೆ ಚರ್ಚಿಸಿ, ಸಚಿವರ ಆಯ್ಕೆ ಮಾಡಲಾಗುವುದು ಎಂದರು.

ಹಿರಿಯರಾದ ಶೆಟ್ಟರ್ ಅವರು ನನ್ನ ಸಂಪುಟಕ್ಕೆ ಸೇರುವುದಿಲ್ಲ ಎಂದು ಈಗಾಗಲೇ ಬಹಿರಂಗವಾಗಿ ಹೇಳಿದ್ದಾರೆ. ಈ ಬಗ್ಗೆ ನೆನ್ನೆ ಅವರೊಂದಿಗೆ ಮಾತನಾಡಿದ್ದೇನೆ. ನಾವಿಬ್ಬರೂ ಆತ್ಮೀಯ ಸ್ನೇಹಿತರು. ಒಟ್ಟಿಗೆ ಬೆಳೆದವರು. ಬೇರೆ ಬೇರೆ ಪಕ್ಷದಲ್ಲಿದ್ದಾಗಿನಿಂದಲೂ ನಮ್ಮ ನಡುವೆ ಒಳ್ಳೆಯ ಸಂಬಂಧಗಳಿವೆ. ಇಬ್ಬರ ನಡುವೆ ಅಪಾರ ಅಭಿಮಾನ ಮತ್ತು ಪ್ರೀತಿ ವಿಶ್ವಾಸವಿದೆ. ವೈಯಕ್ತಿಕವಾಗಿ ಭೇಟಿ ಮಾಡಿ, ಅವರ ಭಾವನೆಗಳನ್ನು ತಿಳಿದುಕೊಳ್ಳುವೆ. ಹಿರಿಯರ ಜತೆ ಚರ್ಚಿಸಿ ಸಮಸ್ಯೆಯನ್ನು ಬಗೆಹರಿಸುವೆ ಎಂದು ಹೇಳಿದರು.

ಯುಕೆಪಿ ಕುರಿತು ಪ್ರತಿಕ್ರಿಯಿಸಿದ ಅವರು, ಈ ಕುರಿತು ಏನು ಮಾಡಬೇಕೆಂಬುದರ ಸ್ಪಷ್ಟತೆ ಹಾಗೂ ಮಾಹಿತಿ ಇದೆ. ಬ್ರಿಜೇಶ್ ಕುಮಾರ್ ಮಿಶ್ರಾ ಟ್ರಿಬ್ಯೂನಲ್ ಆದೇಶದ ಬಳಿಕ, ಗೆಜೆಟ್ ನೋಟಿಫಿಕೇಶನ್ ಆಗುವ ಹಂತದಲ್ಲಿ ಆಂಧ್ರಪ್ರದೇಶ ಸರ್ಕಾರ ಸುಪ್ರೀಂ ಕೋರ್ಟ್ ಗೆ ಹೋಗಿದೆ. ಕರ್ನಾಟಕ ಮತ್ತು ಮಹಾರಾಷ್ಟ್ರ ಸರ್ಕಾರ ಈ ಬಗ್ಗೆ ಕೋರ್ಟ್ ನಲ್ಲಿ ಹೋರಾಡುತ್ತಿವೆ. ಒಂದೂವರೆ ತಿಂಗಳೊಳಗೆ ಪ್ರಕರಣ ವಿಚಾರಣೆಗೆ ಬರಲಿದೆ. ನಮ್ಮ ಪರವಾಗಿ ತೀರ್ಪು ಬರುವ ವಿಶ್ವಾಸವಿದೆ. ಗೆಜೆಟ್ ನೋಟಿಫಿಕೇಶನ್ ಆದ ತಕ್ಷಣ ಆರ್ ಅಂಡ್ ಆರ್ ಕೆಲಸ ಆರಂಭಿಸಿ, ಅಣೆಕಟ್ಟೆ ಎತ್ತರವನ್ನು 524 ಗೆ ಎತ್ತರಿಸಲು ಕ್ರಮ ಕೈಗೊಳ್ಳಲಾಗುವುದು. 13.50 ಲಕ್ಷ ಹೆಕ್ಟೇರ್ ನೀರಾವರಿಯ ಉತ್ತರ ಕರ್ನಾಟಕದ ಅಭಿವೃದ್ದಿಯ ಪ್ರಮುಖ ಯೋಜನೆ ಇದಾಗಿದ್ದು, ಅದರ ಜಾರಿಗೆ ಮೊದಲ ಪ್ರಾಶಸ್ತ್ಯ ನೀಡಲಾಗುವುದು ಎಂದು ಹೇಳಿದರು.

ಶಾಸಕರಾದ ಅಮೃತ ದೇಸಾಯಿ, ಶಿವರಾಮ ಹೆಬ್ಬಾರ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ ಇದ್ದರು.

ಶಿವರಾಮ್‌ ಹೆಬ್ಬಾರ್‌ ಕಾರು ಅಫಘಾತ: ವಿಮಾನನಿಲ್ದಾಣದ ಮುಂಭಾಗ ಮಾಜಿ ಸಚಿವ ಶಿವರಾಮ್ ಹೆಬ್ಬಾರ್ ಅವರ ಕಾರು ಆಪಘಾತವಾಗಿದೆ. ಸಿಎಂ‌ ಬೆಂಗಾವಲು ವಾಹನಕ್ಕೆ ಕಾರು ಗುದ್ದಿದೆ.ವಿಮಾನ ನಿಲ್ದಾಣದಿಂದ ಸಿಎಂ ಹೊರ ಹೋಗುತ್ತಿದ್ದಾಗ ಘಟನೆ ಸಂಭವಿಸಿದೆ.ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸಿಎಂ ಕಾರು ಹಿಂಬಾಲಿಸುವ ಭರದಲ್ಲಿ ಆಪಘಾತ ಸಂಭವಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT