ಹುಬ್ಬಳ್ಳಿ: ಕೋವಿಡ್ ಸೋಂಕಿತರಾಗುವ ಎಲ್ಲರಿಗೂ ವಂಶವಾಹಿ ಸಂರಚನೆ ವಿಶ್ಲೇಷಣೆಗೆ (ಜಿನೋಮ್ ಸಿಕ್ವೆನ್ಸಿಂಗ್) ಪರೀಕ್ಷೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ವಿಮಾನ ನಿಲ್ದಾಣದಲ್ಲಿ ಗುರುವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು ’ನಾಲ್ಕನೇ ಅಲೆ ಬಂದಿಲ್ಲ. ಲಸಿಕೆ ಪಡೆಯದ ಯುರೋಪ್ ರಾಷ್ಟ್ರಗಳಲ್ಲಿ ಸೋಂಕಿತರ ಪ್ರಮಾಣ ಹೆಚ್ಚಾಗುತ್ತಿದೆ. ಆದ್ದರಿಂದ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದಲ್ಲಿ ಸುರಕ್ಷತಾ ಕ್ರಮಗಳನ್ನು ಅನುಸರಿಸಲಾಗುತ್ತಿದೆ. ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಕೋವಿಡ್ ಪರೀಕ್ಷೆ ಮಾಡಲಾಗುವುದು.
ಸೋಂಕು ದೃಢಪಟ್ಟರೆ ಅವರನ್ನು ಜಿನೋಮ್ ಪರೀಕ್ಷೆಗೆ ಒಳಪಡಿಸಲಾಗುವುದು. ಇದರಿಂದ ಅವರಲ್ಲಿ ಸೋಂಕಿನ ಬೇರೆ ತಳಿಗಳಿದ್ದರೆ ಗೊತ್ತಾಗುತ್ತದೆ. ಈಗಾಗಲೇ ರಾಜ್ಯದಲ್ಲಿ 8,500 ಜನರಿಗೆ ಜಿನೋಮ್ ಪರೀಕ್ಷೆ ಮಾಡಲಾಗಿದೆ‘ ಎಂದು ತಿಳಿಸಿದರು.
’ರಾಜ್ಯದಲ್ಲಿ ಶೇ 98ರಷ್ಟು ಜನ ಲಸಿಕೆಯ ಎರಡೂ ಡೋಸ್‌ಗಳನ್ನು ಪಡೆದಿದ್ದಾರೆ. ಬೂಸ್ಟರ್ ಡೋಸ್ ವಿತರಣೆ ಚುರುಕುಗೊಳಿಸಲಾಗುವುದು. 6ರಿಂದ 12 ವರ್ಷದ ಒಳಗಿನ ಮಕ್ಕಳಿಗೆ ಲಸಿಕೆ ನೀಡಲು ಕೇಂದ್ರ ಅನುಮತಿ ಕೊಟ್ಟಿದ್ದು, ಪ್ರಾಥಮಿಕ ಶಾಲೆಗಳಲ್ಲಿ ಲಸಿಕಾ ಅಭಿಯಾನ ಆರಂಭಿಸಲು ನಿರ್ಧರಿಸಲಾಗಿದೆ‘ ಎಂದರು.
’ರಾಜ್ಯ ಮಾತ್ರವಲ್ಲ, ದೇಶದಾದ್ಯಂತ ಕೋಮುಗಲಭೆ ಸೃಷ್ಟಿಸುವ ಪ್ರಚೋದನಾ ಭಾಷಣಗಳನ್ನು ಕೆಲವರು ಮಾಡುತ್ತಿದ್ದಾರೆ. ವಿಶೇಷವಾಗಿ ಸಾಮಾಜಿಕ ಜಾಲತಾಣದಲ್ಲಿ ಇದರ ಹಾವಳಿ ಹೆಚ್ಚಾಗಿದೆ. ಸುಪ್ರೀಂ ಕೋಟ್೯ ನಿರ್ದೇಶನದಂತೆ ಸಮಿತಿ ರಚನೆ ಮಾಡುತ್ತೇವೆ‘ ಎಂದು ತಿಳಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.