ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರ ಸುಭದ್ರವಾಗಿದೆ: ದಿಗ್ವಿಜಯ್‌ ಸಿಂಗ್‌

Published 16 ಆಗಸ್ಟ್ 2023, 6:01 IST
Last Updated 16 ಆಗಸ್ಟ್ 2023, 6:01 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಬಿಜೆಪಿಯು 40 ಪರ್ಸೆಂಟ್‌ ಭ್ರಷ್ಟಾಚಾರದ ಹಣದಲ್ಲಿ ಕಾಂಗ್ರೆಸ್‌ ಸರ್ಕಾರವನ್ನು ಉರುಳಿಸಬಹುದು ಎಂದು ಭಾವಿಸಿದ್ದರೆ, ಅದು ಅಸಾಧ್ಯ. ಈ ಸರ್ಕಾರ ಸುಭದ್ರವಾಗಿದೆ’ ಎಂದು ರಾಜ್ಯಸಭಾ ಸದಸ್ಯ, ಕಾಂಗ್ರೆಸ್‌ ಹಿರಿಯ ಮುಖಂಡ ದಿಗ್ವಿಜಯ್‌ ಸಿಂಗ್‌ ಹೇಳಿದರು. 

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿಯವರು ದೇಶದ ಸಂವಿಧಾನ ಬುಡಮೇಲು ಮಾಡಲು ಹೊರಟಿದ್ದಾರೆ. ಅಹಂಕಾರದಿಂದ ಮಾತನಾಡುತ್ತಿದ್ದಾರೆ. ಜನಾದೇಶದಿಂದ ರೂಪಿತ ಸರ್ಕಾರವನ್ನು ಪತನಗೊಳಿಸಲು ಹೊರಟಿದ್ದಾರೆ. ಇದು ಸಾಧ್ಯವಿಲ್ಲ’ ಎಂದರು.

‘ಕರ್ನಾಟಕದ ಚುನಾವಣಾ ಫಲಿತಾಂಶ ಇಡೀ ದೇಶಕ್ಕೆ ಶಕ್ತಿ ತುಂಬಿದೆ. ಧರ್ಮದ ಆಧಾರದ ಮೇಲೆ ದೇಶ  ಒಡೆಯಲು ಯತ್ನಿಸಿದವರನ್ನು ಕರ್ನಾಟಕದ ಜನ ಸೋಲಿಸಿದ್ದಾರೆ. ಇದು ಹಿಂದೂ, ಮುಸ್ಲಿಂ, ಜೈನ,  ಬೌದ್ಧ  ಎಲ್ಲರ ಗೆಲುವಾಗಿದೆ’ ಎಂದು ಹೇಳಿದರು. 

ಭಾರತ ಹಿಂದೂ ರಾಷ್ಟ್ರ ಎಂಬ ಕಮಲನಾಥ್‌ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಕಮಲನಾಥ್‌ ಅವರ ಹೇಳಿಕೆ ತಪ್ಪಾಗಿ ಗ್ರಹಿಸಲಾಗಿದೆ. ಭಾರತದ ಸಂವಿಧಾನದಲ್ಲಿ ಎಲ್ಲ ವ್ಯಕ್ತಿಗಳಿಗೂ ತಮ್ಮ ತಮ್ಮ ಧರ್ಮ ಪಾಲನೆಗೆ ಅವಕಾಶವಿದೆ. ಸಂವಿಧಾನವೇ ಸರ್ವಸ್ವ ಆಗಿದೆ. ನಮಗಿಂತ ಹೆಚ್ಚು ಜನ (ಪ್ರತಿಶತ) ಹಿಂದೂಗಳು ನೇಪಾಳದಲ್ಲಿ ಇದ್ದರೂ ಅದು ಹಿಂದೂ ಎಂದು ಘೋಷಿಸಿಕೊಂಡಿಲ್ಲ. ಇಸ್ಲಾಮಿಕ್‌ ರಾಷ್ಟ್ರವೆಂದು ಘೋಷಿಸಿಕೊಂಡಿರುವ ಪಾಕಿಸ್ತಾನದಲ್ಲಿ ಮುಸ್ಲಿಮರನ್ನು ಮುಸ್ಲಿಮರೇ  ಹತ್ಯೆ ಮಾಡುತ್ತಿದ್ದಾರೆ. ಇಲ್ಲಿ ಹಿಂದೂ ರಾಷ್ಟ್ರ  ಎನ್ನುವ  ಪ್ರಶ್ನೆಯಿಲ್ಲ. ಇದು ಎಲ್ಲರಿಗೂ ಸೇರಿದ ದೇಶವಾಗಿದೆ’ ಎಂದರು. 

ಮೃದು ಹಿಂದುತ್ವ, ಕಟ್ಟರ್‌ ಹಿಂದುತ್ವ ಎನ್ನುವುದು ಇಲ್ಲ. ಸನಾತನ ಧರ್ಮಕ್ಕೂ ಹಿಂದೂ ಧರ್ಮಕ್ಕೂ ಸಂಬಂಧವಿಲ್ಲವೆಂದು ಸಾವರ್ಕರ್‌ ಅವರೇ ಹೇಳಿದ್ದಾರೆ ಎಂದು ಉಲ್ಲೇಖಿಸಿದರು. 

ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ಬುಡಕಟ್ಟು ಜನಾಂಗದವರನ್ನು ಬುಡಕಟ್ಟು ಸ್ಥಾನಮಾನದಿಂದ ಹೊರಗಿಡಬೇಕೆಂದು ಆರ್‌ಎಸ್‌ಎಸ್‌ ಕುತಂತ್ರ ನಡೆಸಿದೆ. ಇದರ ಫಲವಾಗಿಯೇ ಇವತ್ತು ಮಣಿಪುರದಲ್ಲಿ ಗಲಭೆಗಳು ನಡೆದಿವೆ ಎಂದು ನುಡಿದರು. 

ಶಾಸಕ ಜಗದೀಶ ಶೆಟ್ಟರ್‌, ಧಾರವಾಡ ಜಿಲ್ಲಾ (ಗ್ರಾಮೀಣ) ಕಾಂಗ್ರೆಸ್‌ ಘಟಕದ ಅಧ್ಯಕ್ಷ ಅನಿಲಕುಮಾರ  ಪಾಟೀಲ, ಹು–ಧಾ ಮಹಾನಗರ  ಜಿಲ್ಲಾ ಘಟಕದ ಅಧ್ಯಕ್ಷ ಅಲ್ತಾಫ್‌ ಹಳ್ಳೂರ, ಎ.ಎಂ. ಹಿಂಡಸಗೇರಿ ಸೇರಿದಂತೆ  ಹಲವು ಮುಖಂಡರು ಉಪಸ್ಥಿತರಿದ್ದರು.

‘ಬಿಜೆಪಿಗೆ ನೈತಿಕ ಹಕ್ಕಿಲ್ಲ’

ಹುಬ್ಬಳ್ಳಿ: ಭ್ರಷ್ಟಾಚಾರದ ಬಗ್ಗೆ ಸಿ.ಟಿ. ರವಿ ಅವರಿಗಾಗಲೀ  ಬಿಜೆಪಿಯವರಿಗಾಗಲೀ ಮಾತನಾಡುವ ಯಾವುದೇ ನೈತಿಕ ಹಕ್ಕಿಲ್ಲ ಎಂದು ಶಾಸಕ ಜಗದೀಶ ಶೆಟ್ಟರ್‌ ಪ್ರತಿಕ್ರಿಯಿಸಿದರು. ಅವರ ಸರ್ಕಾರದಲ್ಲಿ 40ಪರ್ಸೆಂಟ್‌ ಭ್ರಷ್ಟಾಚಾರದ ಬಗ್ಗೆ ಜನರು ಮಾತನಾಡುತ್ತಿದ್ದರು ಎನ್ನುವುದನ್ನು ಅವರೊಮ್ಮೆ ನೆನಪಿಸಿಕೊಳ್ಳಲಿ ಎಂದು ತಿರುಗೇಟು ನೀಡಿದರು.

ಈ ಕಾಂಗ್ರೆಸ್‌ ಸರ್ಕಾರ ಸ್ಥಿರವಾಗಿದೆ. 6 ತಿಂಗಳಲ್ಲಿ ಬಿದ್ದುಹೋಗಲಿದೆ ಎಂದು ಹೇಳಿದರೆ ಯಾರಾದರೂ ನಂಬಲು ಸಾಧ್ಯವೇ? 5 ವರ್ಷ ಪೂರ್ಣಾವಧಿಯನ್ನು ಪೂರ್ಣಗೊಳಿಸಲಿದೆ ಎಂದು ಅವರು ಹೇಳಿದರು. ‘ಉತ್ತರ ಕರ್ನಾಟಕ ಭಾಗದ 30 ಸೀಟುಗಳು ಕೈಬಿಟ್ಟು ಹೋಗಿದ್ದರಿಂದ ಜಗದೀಶ ಶೆಟ್ಟರ್‌ ಮಹತ್ವ ಅವರಿಗೆ (ಬಿಜೆಪಿಯವರಿಗೆ) ಈಗ ಗೊತ್ತಾಗಿದೆ’ ಎಂದು ವ್ಯಂಗ್ಯವಾಡಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT