ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಯರ್ ಚುನಾವಣೆಗಾಗಿ ಧಾರವಾಡ ಪ್ರವೇಶ ಕೋರಿದ್ದ ವಿನಯ ಕುಲಕರ್ಣಿ ಅರ್ಜಿ ತಿರಸ್ಕೃತ

Published 19 ಜೂನ್ 2023, 15:10 IST
Last Updated 19 ಜೂನ್ 2023, 15:10 IST
ಅಕ್ಷರ ಗಾತ್ರ

ಬೆಂಗಳೂರು: ‘ಹುಬ್ಬಳ್ಳಿ–ಧಾರವಾಡ ಕಾರ್ಪೂರೇಷನ್‌ನ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಯಲ್ಲಿ ಮತ ಚಲಾಯಿಸುವ ಕಾರಣಕ್ಕಾಗಿ ಧಾರವಾಡ ಜಿಲ್ಲೆ ಪ್ರವೇಶಿಸಲು ಅನುಮತಿ ನೀಡಬೇಕು‘ ಎಂದು ಕೋರಿ ಧಾರವಾಡ ವಿಧಾನಸಭಾ ಕ್ಷೇತ್ರದ ಶಾಸಕ ವಿನಯ ಆರ್‌. ಕುಲಕರ್ಣಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಜನಪ್ರತಿನಿಧಿಗಳ ಕೋರ್ಟ್‌ ತಿರಸ್ಕರಿಸಿದೆ.

ಈ ಕುರಿತಂತೆ ವಾದ–ಪ್ರತಿವಾದ ಆಲಿಸಿ ಮಧ್ಯಂತರ ಅರ್ಜಿ ಮೇಲಿನ ಕಾಯ್ದಿರಿಸಿದ್ದ ಆದೇಶವನ್ನು, ‘ಶಾಸಕರು–ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆಯ ವಿಶೇಷ ನ್ಯಾಯಾಲಯ‘ದ ನ್ಯಾಯಾಧೀಶ ಬಿ.ಜಯಂತ್‌ ಕುಮಾರ್‌ ಸೋಮವಾರ ಪ್ರಕಟಿಸಿದರು.

‘ಜಾಮೀನು ನೀಡುವ ಮುನ್ನ ವಿಧಿಸಲಾಗಿರುವ ಷರತ್ತುಗಳ ಸಡಿಲಿಕೆಗೆ ಕೋರಿಕೆ ಸಲ್ಲಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್‌ ಅರ್ಜಿದಾರರಿಗೆ ಸ್ವಾತಂತ್ರ್ಯ ನೀಡಿಲ್ಲ. ಹೀಗಾಗಿ, ಈ ಮಧ್ಯಂತರ ಅರ್ಜಿಯನ್ನು ಮಾನ್ಯ ಮಾಡಬಾರದು‘ ಎಂಬ ಪ್ರಾಸಿಕ್ಯೂಷನ್‌ ವಾದವನ್ನು ನ್ಯಾಯಾಧೀಶರು ಮಾನ್ಯ ಮಾಡಿ ಅರ್ಜಿ ತಿರಸ್ಕರಿಸಿದ್ದಾರೆ.

ಅರ್ಜಿದಾರರು ಇತ್ತೀಚೆಗೆ ವಿಧಾಸಭೆ ಚುನಾವಣೆಗೆ ಸ್ಪರ್ಧಿಸಿದಾಗಲೂ ಧಾರವಾಡ ಜಿಲ್ಲೆಯನ್ನು ಪ್ರವೇಶಿಸಿ 50 ದಿನಗಳ ಕಾಲ ಅಲ್ಲಿರಲು ಅನುಮತಿ ನೀಡುವಂತೆ ಕೋರಿದ್ದರು. ಆದರೆ, ಈ ಅರ್ಜಿಯನ್ನೂ ಹೈಕೋರ್ಟ್‌ ತಿರಸ್ಕರಿಸಿತ್ತು. 

‘ಹುಬ್ಬಳ್ಳಿ–ಧಾರವಾಡ ಕಾರ್ಪೋರೇಷನ್‌ನ ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಇದೇ 20ರಂದು ಚುನಾವಣೆ ನಿಗದಿಯಾಗಿದೆ. ನಾನು ಕ್ಷೇತ್ರದ ಶಾಸಕನಾಗಿ ಮತ್ತು ಕರ್ನಾಟಕ ಪುರಸಭೆ ಮಹಾನಗರ ಪಾಲಿಕೆ ಕಾಯ್ದೆಯ ಕಲಂ 7ರ ಅನುಸಾರ ಮತ ಚಲಾಯಿಸಲು ಹಕ್ಕನ್ನು ಪಡೆದಿರುವ ಕಾರಣ ಅಂದು ಬೆಳಗ್ಗೆ 11 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಧಾರವಾಡ ಜಿಲ್ಲೆ ಪ್ರವೇಶಿಸಲು ಅನುಮತಿ ನೀಡಬೇಕು‘ ಎಂದು ಅರ್ಜಿದಾರರು ಕೋರಿದ್ದರು.

2016ರ ಜೂನ್ 15ರಂದು ನಡೆದಿದ್ದ ಬಿಜೆಪಿ ಮುಖಂಡ ಹಾಗೂ ಹೆಬ್ಬಳ್ಳಿ ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೀಶ್ ಗೌಡ ಗೌಡರ್ ಕೊಲೆ ಪ್ರಕರಣದ ಆರೋಪಿಯಾಗಿರುವ ವಿನಯ ಕುಲಕರ್ಣಿ ಅವರಿಗೆ, ’ನ್ಯಾಯಾಲಯದ ಅನುಮತಿ ಇಲ್ಲದೆ ಧಾರವಾಡ ಜಿಲ್ಲೆ ಪ್ರವೇಶಿಸಬಾರದು‘ ಎಂದು ಕೋರ್ಟ್‌ ನಿರ್ಬಂಧ ವಿಧಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT