ಹುಬ್ಬಳ್ಳಿ: ‘ಬೆಳಗಾವಿಯಲ್ಲಿ ಮಾರ್ಚ್ ಸೋಮವಾರ (ಮಾ.20) ನಡೆಯಲಿರುವ ಯುವಕ್ರಾಂತಿ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪಾಲ್ಗೊಳ್ಳಲಿದ್ದಾರೆ. ಸಮಾವೇಶದಲ್ಲಿ ಎರಡು ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದೆ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದರು.
ನಗರದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ, ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಶಾಸಕರಾದ ಎಂ.ಬಿ.ಪಾಟೀಲ, ಡಾ.ಜಿ.ಪರಮೇಶ್ವರ, ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್, ಕೆ.ಎಚ್.ಮುನಿಯಪ್ಪ ಸೇರಿದಂತೆ ಹಲವು ನಾಯಕರು ಭಾಗವಹಿಸಲಿದ್ದಾರೆ’ ಎಂದು ತಿಳಿಸಿದರು.
‘ಶೇ 40ರಷ್ಟು ಕಮಿಷನ್, ಅಗತ್ಯ ವಸ್ತುಗಳ ಬೆಲೆ ಏರಿಕೆ, ನಿರುದ್ಯೋಗ ಹೆಚ್ಚಳ ಕಾರಣಕ್ಕೆ ಬಿಜೆಪಿಯವರು ಕ್ಷಮಾ ಯಾತ್ರೆ ಮಾಡಬೇಕು. ವಿಜಯ ಸಂಕಲ್ಪ ಯಾತ್ರೆ ಮಾಡುತ್ತಿರುವುದಕ್ಕೆ ಯಾವುದೇ ಅರ್ಥ ಇಲ್ಲ. ರಾಜ್ಯದಲ್ಲಿ 150 ಸೀಟುಗಳನ್ನು ಗೆಲ್ಲುವ ಗುರಿ ಇದ್ದು, ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳು ಈ ಬಾರಿ ಕಾಂಗ್ರೆಸ್ ಪಾಲಾಗಲಿವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ಫೈಟರ್ ರವಿಗೆ ಪ್ರಧಾನಿ ನರೇಂದ್ರ ಮೋದಿ ನಮಸ್ಕರಿಸಿದ್ದು ದುರ್ದೈವದ ಸಂಗತಿ. ರಾಜ್ಯದಲ್ಲಿ ನಾಲ್ಕು ವರ್ಷಗಳಲ್ಲಿ 23 ಸಾವಿರ ರೌಡಿಗಳ ಹೆಸರನ್ನು ರೌಡಿಪಟ್ಟಿಯಿಂದ ತೆಗೆದುಹಾಕಲಾಗಿದೆ. ಸಮಾಜಘಾತುಕರಿಗೆ ರಕ್ಷಣೆ ನೀಡುವುದು ಬಿಜೆಪಿ ಸಂಸ್ಕೃತಿ. ಇದು ದಲ್ಲಾಳಿಗಳ, ಲೂಟಿಕೋರರ ಸರ್ಕಾರ’ ಎಂದರು.
‘ಮಹದಾಯಿ, ಕಳಸಾ –ಬಂಡೂರಿ ಕಾಮಗಾರಿಗೆ ಒಂದು ತಿಂಗಳಲ್ಲಿ ಶಂಕುಸ್ಥಾಪನೆ ನೆರವೇರಿಸಲಾಗುವುದು ಎಂದು ಬಿಜೆಪಿಯವರು ಹೇಳಿದ್ದರು. ಈಗ ಮೌನ ವಹಿಸಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಈ ಬಗ್ಗೆ ಉತ್ತರ ನೀಡಬೇಕು’ ಎಂದು ಆಗ್ರಹಿಸಿದರು.
‘ಬಿಜೆಪಿಯವರಿಗೆ ಚುನಾವಣೆಯಲ್ಲಿ ಸೋಲುವ ಭಯ ಕಾಡುತ್ತಿದೆ. ಹೀಗಾಗಿಯೇ ಟಿಪ್ಪುವನ್ನು ಹತ್ಯೆ ಮಾಡಿದ್ದು ಉರಿಗೌಡ–ನಂಜೇಗೌಡ ಎಂಬ ಅಸಂಬದ್ಧ ಹೇಳಿಕೆ ನೀಡುತ್ತಿದ್ದಾರೆ. ಸಿ.ಟಿ ಅವರಿಗೆ ಬದ್ಧತೆ ಇದ್ದರೆ ತಮ್ಮ ಪಕ್ಷದ ಭ್ರಷ್ಟಾಚಾರದ ಬಗ್ಗೆ ಮಾತಾಡಬೇಕು. ನೆಹರೂ ಬಗ್ಗೆ ಮಾತನಾಡುವ ನೈತಿಕತೆ ಅವರಿಗಿಲ್ಲ’ ಎಂದರು. ಶಾಸಕ ಪ್ರಸಾದ ಅಬ್ಬಯ್ಯ, ಅನಿಲಕುಮಾರ ಪಾಟೀಲ, ಅಲ್ತಾಫ್ ಹಳ್ಳೂರ, ಎನ್.ಎಚ್.ಕೋನರಡ್ಡಿ, ಸದಾನಂದ ಡಂಗನವರ, ಮೋಹನ ಲಿಂಬಿಕಾಯಿ ಇದ್ದರು.
ಬಿಜೆಪಿಯಿಂದ ಅನ್ಯಾಯ: ಲಿಂಬಿಕಾಯಿ
‘ಬಿಜೆಪಿ ಸರ್ಕಾರದ ಜನವಿರೋಧಿ ನೀತಿ, ಪಕ್ಷದಲ್ಲಿ ನನಗೆ ಆದ ಅನ್ಯಾಯದಿಂದ ಬೇಸತ್ತು ಕಾಂಗ್ರೆಸ್ ಸೇರಿದ್ದೇನೆ’ ಎಂದು ಕಾಂಗ್ರೆಸ್ ಮುಖಂಡ ಮೋಹನ ಲಿಂಬಿಕಾಯಿ ಹೇಳಿದರು.
‘ಪದವೀಧರರ ಕ್ಷೇತ್ರ 24 ವರ್ಷ ಕಾಂಗ್ರೆಸ್ ಹಿಡಿತದಲ್ಲಿತ್ತು. ನಾನು ಬಿಜೆಪಿ ಸೇರಿದ ನಂತರ ಆ ಕ್ಷೇತ್ರದಿಂದ ಜಯಗಳಿಸಿದೆ. ಆದರೆ, 2014, 2020ರಲ್ಲಿ ಪದವೀಧರರ ಕ್ಷೇತ್ರದಿಂದ ನನಗೆ ಟಿಕೆಟ್ ನೀಡಲಿಲ್ಲ. 2022ರಲ್ಲಿ ಶಿಕ್ಷಕರ ಕ್ಷೇತ್ರದ ಟಿಕೆಟ್ ನೀಡುವ ಭರವಸೆ ನೀಡಿದ್ದರು. ಕೊನೆಗೆ ಟಿಕೆಟ್ ಕೈತಪ್ಪಿತು’ ಎಂದರು.
‘ಯಾವ ಕಾರಣಕ್ಕೆ ಟಿಕೆಟ್ ತಪ್ಪಿಸಲಾಯಿತು ಎಂದು ಯಾವ ನಾಯಕರೂ ಸ್ಪಷ್ಟನೆ ನೀಡಲಿಲ್ಲ. ಕಳೆದ ಒಂದು ವರ್ಷದ ಬಿಜೆಪಿ ಸರ್ಕಾರದ ಆಡಳಿತ ಅತ್ಯಂತ ಜನವಿರೋಧಿಯಾಗಿದೆ’ ಎಂದು ಹೇಳಿದರು.
‘ಹು–ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ಕೇಳಿಲ್ಲ. ಕಾಂಗ್ರೆಸ್ ಸೇರಲು ಯಾವುದೇ ಷರತ್ತು ವಿಧಿಸಿಲ್ಲ. ಪಕ್ಷ ಯಾವ ಜವಾಬ್ದಾರಿ ನೀಡಿದರೂ ನಿಭಾಯಿಸುತ್ತೇನೆ’ ಎಂದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.