ಸೋಮವಾರ, ನವೆಂಬರ್ 29, 2021
20 °C
ಬೆಟ್ಟದ ಅಂಚಿನ ನಿವಾಸಿಗಳಲ್ಲಿ ಆತಂಕ; ಹೆಚ್ಚುವರಿ ಸಿಬ್ಬಂದಿ ನಿಯೋಜನೆ

ನೃಪತುಂಗ ಬೆಟ್ಟದ ಬಳಿ ಚಿರತೆ ಪತ್ತೆ: ಸೆರೆಗೆ ಮುಂದುವರಿದ ಕಾರ್ಯಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ನೃಪತುಂಗ ಬೆಟ್ಟದ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿರತೆ ಇರುವುದು ದೃಢವಾಗಿ ಒಂದು ದಿನ ಕಳೆದರೂ ಸೆರೆ ಸಿಕ್ಕಿಲ್ಲ. ಹೀಗಾಗಿ ಭಾನುವಾರ ತಡರಾತ್ರಿಯವರೆಗೂ ಕಾರ್ಯಾಚರಣೆ ಮುಂದುವರಿದಿತ್ತು.

ಭಾನುವಾರ ಬೆಳಿಗ್ಗೆ ಡಿಸಿಪಿ ಆರ್‌. ಬಸರಗಿ ಹಾಗೂ ತಹಶೀಲ್ದಾರ್‌ ಶಶಿಧರ ಮಾಡ್ಯಾಳ ಚಿರತೆ ಪತ್ತೆಯಾದ ರಾಜನಗರದ ಕೇಂದ್ರೀಯ ವಿದ್ಯಾಲಯದ ಆವರಣಕ್ಕೆ ಭೇಟಿ ನೀಡಿ ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಮಾಹಿತಿ ಪಡೆದರು. ಸಂಜೆ ಧಾರವಾಡ ಉಪ ಅರಣ್ಯ ಸಂರಕ್ಷಣಾಧಿಕಾರಿ ಯಶಪಾಲ್‌ ಕ್ಷೀರಸಾಗರ ಭೇಟಿ ನೀಡಿ, ಚಿರತೆ ಸೆರೆಗೆ ಕೈಗೊಳ್ಳಬೇಕಾದ ಯೋಜನೆಗಳ ಬಗ್ಗೆ ಸಿಬ್ಬಂದಿಗೆ ಮಾಹಿತಿ ನೀಡಿದರು.

‘ಸಾರ್ವಜನಿಕರು ಭಯಭೀತರಾಗಿದ್ದಾರೆ. ಚಿರತೆ ಹಗಲು ಸುಮ್ಮನಿದ್ದು, ರಾತ್ರಿ ವೇಳೆ ಒಡಾಡುವುದು ಆತಂಕದ ಸಂಗತಿ. ಮಾಹಿತಿ ಸಂಗ್ರಹಿಸುತ್ತಾ ಕೂತರೆ ಕೆಲಸ ಆಗದು. ಪೊಲೀಸ್‌ ಇಲಾಖೆ ಜೊತೆ ಜಂಟಿ ಕಾರ್ಯಾಚರಣೆ ನಡೆಸಿ, ತಾರ್ಕಿಕ ಅಂತ್ಯ ಹಾಡಬೇಕು. ಅಗತ್ಯವಿದ್ದರೆ ಹೆಚ್ಚುವರಿ ಸಿಬ್ಬಂದಿಯನ್ನು ನೀಡಲಾಗುವುದು’ ಎಂದು ಆರ್‌. ಬಸರಗಿ ಹೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಹುಬ್ಬಳ್ಳಿ ವಲಯದ ಅರಣ್ಯಾಧಿಕಾರಿ ಶ್ರೀಧರ ತೆಗ್ಗಿನಮನಿ, ‘ವಿದ್ಯಾಲಯದ ಹಿಂಭಾಗ ದಟ್ಟ ಅರಣ್ಯ ಇರುವುದರಿಂದ ಕಾರ್ಯಾಚರಣೆ ಸುಲಭವಲ್ಲ. ಚಿರತೆಗೆ ತೊಂದರೆ ನೀಡಿ ಕಾರ್ಯಾಚರಣೆ ನಡೆಸಿದರೆ, ಗಾಬರಿಯಾಗಿ ಜನವಸತಿ ಪ್ರದೇಶಕ್ಕೆ ನುಗ್ಗುವ ಅಪಾಯವಿರುತ್ತದೆ. ಒಮ್ಮೆ ಬೇಟೆಯಾಡಿದರೆ 12ರಿಂದ 15 ಕೆ.ಜಿ.ವರೆಗೆ ಆಹಾರ ತಿಂದು ಎರಡ್ಮೂರು ದಿನ ಹಾಗೆಯೇ ಇರುತ್ತದೆ. ಈ ಪ್ರದೇಶದಲ್ಲಿ ಮೊಲ, ಹಂದಿಗಳು ಇರುವುದರಿಂದ ಅವುಗಳನ್ನೇ ತಿಂದು ಅಲ್ಲಿರುವ ಸಾಧ್ಯತೆಯಿದೆ. ಏನೇ ಮಾಡಿದರೂ ತಾಳ್ಮೆಯಿಂದಲೇ ಮಾಡಬೇಕು’ ಎಂದರು.

ನಂತರ ಚಿರತೆ ಓಡಾಡಿರಬಹುದಾದ ಕೇಂದ್ರೀಯ ವಿದ್ಯಾಲಯದ ಹಿಂಭಾಗದ ಅರಣ್ಯ ಪ್ರದೇಶಕ್ಕೆ ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ತೆರಳಿ ಬಸರಗಿ ಮಾಹಿತಿ ಸಂಗ್ರಹಿಸಿದರು. ಹೆಜ್ಜೆ ಗುರುತು, ಪ್ರಾಣಿಗಳನ್ನು ಬೇಟಿಯಾಗಿರುವ ಕುರುಹುಗಳ ಪತ್ತೆ ಕಾರ್ಯ ನಡೆಸಿದರು. ನಂತರ ವಿದ್ಯಾಲಯದ ಸಿಬ್ಬಂದಿಯ ಕ್ವಾಟ್ರರ್ಸ್‌ಗೆ ತೆರಳಿ, ಅವರಿಂದ ಮಾಹಿತಿ ಸಂಗ್ರಹಿಸಿ. ಒಬ್ಬಂಟಿಯಾಗಿ ಹಾಗೂ ಸಂಜೆ ವೇಳೆ ಮನೆಯಿಂದ ಹೊರಗೆ ಬರದಂತೆ ಸೂಚಿಸಿದರು.

ಸಹಕಾರ ಅಗತ್ಯ: ‘ಚಿರತೆ ಓಡಾಡಿರುವ ಕುರಿತು ಸ್ಥಳೀಯರು ಮೊಬೈಲ್‌ನಲ್ಲಿ ವಿಡಿಯೊ ಚಿತ್ರಿಕರಣ ಮಾಡಿ ನಮಗೆ ಮಾಹಿತಿ ನೀಡಿದ್ದಾರೆ. ಅದರನ್ವಯ ನಾವು ಮೂರು ಕಡೆ ಬೋನ್‌ಗಳನ್ನು ಇಟ್ಟು ಅದರೆ ಸೆರೆಗೆ ಯೋಜನೆ ರೂಪಿಸಿದ್ದೇನೆ. ಅಲ್ಲದೆ, ಬೆಟ್ಟದ ಬಳಿ ಎರಡು ಕಡೆ ಟ್ರ್ಯಾಪ್‌ ಕ್ಯಾಮೆರಾ ಅಳವಡಿಸಿ ಅದರ ಚಲನವಲನ ಸಂಗ್ರಹಿಸುತ್ತಿದ್ದೇವೆ. ಡ್ರೋಣ್ ಕಾರ್ಯಾಚರಣೆ ನಿರಂತರವಾಗಿದ್ದು, ಸದ್ಯ 13 ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಅಗತ್ಯವಿದ್ದರೆ ಧಾರವಾಡ, ಕಲಘಟಗಿ ವಲಯದಿಂದಲೂ ಸಿಬ್ಬಂದಿಯನ್ನು ಕರೆಸಿಕೊಳ್ಳುತ್ತೇವೆ. ಚಿರತೆ ರಾತ್ರಿ 9ರ ನಂತರ ಓಡಾಡುವುದರಿಂದ ಸೆರೆಗೆ ಯೋಜನಾಬದ್ಧ ತಂತ್ರ ಹೆಣೆಯಬೇಕಾಗುತ್ತದೆ. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ’ ಎಂದು ಮಾಧ್ಯದವರಿಗೆ ವಲಯ ಅರಣ್ಯಾಧಿಕಾರಿ ಶ್ರೀಧರ ತೆಗ್ಗಿನಮನಿ ತಿಳಿಸಿದರು.

ಸೆರೆ ವಿಳಂಬಕ್ಕೆ ಸ್ಥಳೀಯರ ಆಕ್ರೋಶ: ಚಿರತೆ ಸೆರೆಗೆ ವಿಶೇಷ ಕಾರ್ಯಾಚರಣೆ ಕೈಗೊಳ್ಳದಿರುವುದು ಸ್ಥಳೀಯ ನಿವಾಸಿಗಳ ಆಕ್ರೋಶಕ್ಕೆ ಕಾರಣವಾಗಿದೆ.

ನೃಪತುಂಗ ಬೆಟ್ಟದ ಬಳಿ ಚಿರತೆ ಬಂದಿದೆ ಎನ್ನುವ ಸುದ್ದಿ ಬುಧವಾರ ರಾತ್ರಿಯೇ ಹರಿದಾಡಿತ್ತು. ಅದು ನಾಲ್ಕನೇ ದಿನವಾದ ಶನಿವಾರ ದೃಢಪಟ್ಟಿತ್ತು. ಕಾಟಾಚಾರಕ್ಕೆ ಎನ್ನುವಂತೆ ಆಗಾಗ ಬೆಟ್ಟದ ಮೇಲಿಂದ ಡ್ರೋಣ್ ಹಾರಿಸುತ್ತಾರೆ. ಮೂರು ಕಡೆ ಬೋನ್‌ಗಳನ್ನು ಇಟ್ಟು ಚಿರತೆ ಸೆರೆಗೆ ಕಾಯುತ್ತಿದ್ದಾರೆ. ಅದು ಹೊರತು ಪಡಿಸಿ ಕಾರ್ಯಾಚರಣೆಗೆ ವಿಶೇಷ ಕ್ರಮಗಳನ್ನು ಕೈಗೊಂಡಿಲ್ಲ ಎಂದು ತಾಜನಗರ, ಶಿರಡಿ ನಗರದ ನಿವಾಸಿಗಳು ಆರೋಪಿಸಿದ್ದಾರೆ.

‘ಬೆಟ್ಟದ ಅಂಚಿನಲ್ಲಿ ವಾಸುತ್ತಿದ್ದೇವೆ. ಚಿರತೆ ಇರಬಹುದು ಎಂದು ಗುರುತಿಸಿದ ಪ್ರದೇಶದಲ್ಲಿಯೇ ನಮ್ಮ ದಿನನಿತ್ಯದ ಓಡಾಟ. ನಾಲ್ಕು ದಿನಗಳಿಂದ ಚಿರತೆ ಬಂದಿದೆ ಎನ್ನುವ ಸುದ್ದಿಯಿದ್ದು, ಮನೆಯಿಂದ ಹೊರಗೆ ಬರಲು ಭಯಪಡುವಂತಾಗಿದೆ. ಮಕ್ಕಳು, ವೃದ್ಧರು ಮನೆಯಲ್ಲಿ ಇರುವುದರಿಂದ ರಾತ್ರಿ ನಿದ್ದೆಯಿಲ್ಲದೆ ಕಳೆಯುವಂತಾಗಿದೆ’ ಎಂದು ಶಿರಡಿನಗರದ ಸಾವಿತ್ರಿ ಮುದ್ದೆಬಿಹಾಳ ಆತಂಕ ವ್ಯಕ್ತಪಡಿಸಿದರು.

‘ಸುಮಾರು ಹತ್ತು ದಿನಗಳಿಂದ ರಾತ್ರಿ ವೇಳೆ ಪ್ರಾಣಿಯ ಕೂಗು ಕೇಳುತ್ತಿದ್ದೇವೆ. ಶನಿವಾರ ರಾತ್ರಿ ಅದು ಚಿರತೆ ಕೂಗು ಎಂದು ಸ್ಪಷ್ಟವಾಗಿದೆ. ಕಾಲೊನಿಯಲ್ಲಿ ಸಾಕಿದ್ದ ನಾಲ್ಕು ನಾಯಿಗಳು ಮತ್ತು ಏಳೆಂಟು ನಾಯಿ ಮರಿಗಳು ನಾಪತ್ತೆಯಾಗಿವೆ. ನವಿಲುಗಳ ಸಹ ಸಾಕಷ್ಟು ಪ್ರಮಾಣದಲ್ಲಿ ಬರುತ್ತಿದ್ದವು. ಆದರೆ, ಮೂರ್ನಾಲ್ಕು ದಿನಗಳಿಂದ ಅವು ಸಹ ಕಾಣುತ್ತಿಲ್ಲ’ ಎಂದು ಸಂಶಿದಾ ಕೊಡಚಿ ಹೇಳಿದರು.

ಶಾರದಾ ರಾಠೋಡ, ಪುಟ್ಟರಾಜ ಹುಣಸಿಮರದ, ಇಜಾಜ್ ಐರನಿ, ಮೆಹಬೂಬ್ ಗುಜನೂರು ಹಾಗೂ ಸ್ಥಳೀಯರು ಇದ್ದರು.

ಭೌತಿಕ ತರಗತಿ ರದ್ದು: ಚಿರತೆ ಸೆರೆಯಾಗುವ ತನಕ ಕೇಂದ್ರೀಯ ವಿದ್ಯಾಲಯದಲ್ಲಿ ಭೌತಿಕ ತರಗತಿಗಳನ್ನು ರದ್ದುಪಡಿಸಲಾಗಿದ್ದು, ಆನ್‌ಲೈನ್‌ ತರಗತಿಗಳನ್ನು ಮಾತ್ರ ನಡೆಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ನಿತೇಶ್ ಪಾಟೀಲ ತಿಳಿಸಿದ್ದಾರೆ.

ಕೇಂದ್ರೀಯ ವಿದ್ಯಾಲಯದಲ್ಲಿ 1ರಿಂದ 12ನೇ ತರಗತಿ ನಡೆಯುತ್ತವೆ. ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಸೆ. 20ರಿಂದ ಆನ್‌ಲೈನ್‌ ತರಗತಿಗಳು ಮಾತ್ರ ಜರುಗಲಿವೆ. ಈ ಕುರಿತು ಶಾಲೆಯ ಮುಖ್ಯಸ್ಥರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗಿದೆ ಎಂದಿದ್ದಾರೆ. ಶಿರಡಿ ನಗರದ ಸರ್ಕಾರಿ ಪ್ರಾಥಮಿಕ ಶಾಲೆಗೆ ರಜೆ ನೀಡಲಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು