ಶನಿವಾರ, ಜನವರಿ 16, 2021
21 °C
ಆ. 4ರಿಂದ ಮೂರು ದಿನ ಕಾರ್ಯಕ್ರಮ, ದೇವಸ್ಥಾನ ಪ್ರವೇಶಕ್ಕೆ ಥರ್ಮಲ್‌ ಸ್ರ್ಕೀನಿಂಗ್‌ ಕಡ್ಡಾಯ

ರಾಯರ ಆರಾಧನೆಗಿಲ್ಲ ತೀರ್ಥ, ಅನ್ನಸಂತರ್ಪಣೆ

ಪ್ರಮೋದ‌ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಜಿಲ್ಲೆಯಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವ ಕಾರಣ ಆ. 4ರಿಂದ ಮೂರು ದಿನ ಅವಳಿ ನಗರಗಳ ವಿವಿಧ ಮಠಗಳಲ್ಲಿ ನಡೆಯಲಿರುವ ರಾಘವೇಂದ್ರ ಸ್ವಾಮಿಯ 349ನೇ ಆರಾಧನಾ ಮಹೋತ್ಸವದಲ್ಲಿ ತೀರ್ಥ ಹಾಗೂ ಅನ್ನ ಸಂತರ್ಪಣೆಯನ್ನು ರದ್ದು ಮಾಡಲಾಗಿದೆ.

ಪ್ರತಿ ವರ್ಷ ಆರಾಧನೆ ಬಂದರೆ ಸಾಕು ಜನರಲ್ಲಿ ಸಂಭ್ರಮ ಮನೆ ಮಾಡಿರುತ್ತಿತ್ತು. ಜಿಲ್ಲೆಯ ವಿವಿಧ ರಾಯರ ಮಠಗಳಲ್ಲಿ ಆರಾಧನೆಯ ತಯಾರಿ, ಸಡಗರ ಎದ್ದು ಕಾಣುತ್ತಿತ್ತು. ಸಾವಿರಾರು ಜನರಿಗೆ ಮೂರೂ ದಿನಗಳ ಕಾಲ ಊಟದ ವ್ಯವಸ್ಥೆ ಇರುತ್ತಿತ್ತು. ಅನೇಕ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಆಯೋಜನೆಯಾಗುತ್ತಿದ್ದವು. ಅವಳಿ ನಗರಗಳಲ್ಲಿರುವ 20ಕ್ಕೂ ಹೆಚ್ಚು ರಾಯರ ಮಠಗಳಲ್ಲಿ ಪ್ರತಿ ವರ್ಷ ಸಾವಿರಾರು ಜನ ಅನ್ನಪ್ರಸಾದ ಸ್ವೀಕರಿಸುತ್ತಿದ್ದರು. ಆದರೆ, ಕೋವಿಡ್‌ 19 ಕಾರಣ ಈ ಬಾರಿ ಯಾವ ಸಂಭ್ರಮವೂ ಕಂಡು ಬರುತ್ತಿಲ್ಲ.

ಆ. 4ರಂದು ಪೂರ್ವಾರಾಧನೆ ಮತ್ತು 5ರಂದು ಜರುಗುವ ಮಧ್ಯಾರಾಧನೆ ದಿನಗಳಂದು ಉತ್ಸವ ರಾಯರಿಗೆ ಪಾದಪೂಜೆ, ಪಂಚಾಮೃತ ಮತ್ತು ಮಹಾಮಂಗಳಾರತಿ ಮಾತ್ರ ಇರುತ್ತದೆ. 6ರಂದು ನಡೆಯುವ ಉತ್ತರಾರಾಧನೆಯಂದು ಮಠದ ಪ್ರಾಂಗಣದಲ್ಲಿ ಸಂಕ್ಷಿಪ್ತವಾಗಿ ಮಹಾರಥೋತ್ಸವ ನಡೆಯತ್ತದೆ.

ಮಠ ಪ್ರವೇಶಿಸುವ ಭಕ್ತರು ಮಾಸ್ಕ್‌ ಧರಿಸುವುದು, ಸ್ಯಾನಿಟೈಸರ್‌ ಹಚ್ಚಿಕೊಳ್ಳುವುದು, ಥರ್ಮಲ್‌ ಸ್ರ್ಕೀನಿಂಗ್‌ ಪರೀಕ್ಷೆಗೆ ಒಳಪಡುವುದು ಮತ್ತು ಅಂತರ ಕಾಯ್ದುಕೊಳ್ಳುವುದನ್ನು ಕಡ್ಡಾಯಗೊಳಿಸಲಾಗಿದೆ. ಇದಕ್ಕಾಗಿ ಮಠಗಳಲ್ಲಿ ತಯಾರಿಯೂ ನಡೆಯುತ್ತಿದೆ.

ಹುಬ್ಬಳ್ಳಿಯಲ್ಲಿ ಭವಾನಿ ನಗರದಲ್ಲಿರುವ ನಂಜನಗೂಡು ರಾಘವೇಂದ್ರಸ್ವಾಮಿ ಮಠದ ವ್ಯವಸ್ಥಾಪಕ ಶ್ಯಾಮಾಚಾರ್ಯ ರಾಯಸ್ಥ ಹಾಗೂ ವಿಚಾರಣಾಕರ್ತ ರಘೋತ್ತಮರಾವ್ ‘ಆರಾಧನೆಯ ನಾಲ್ಕನೇ ದಿನ ನಡೆಯುತ್ತಿದ್ದ ಸುಜ್ಞಾನೇಂದ್ರ ತೀರ್ಥರ ಆರಾಧನೆಯೂ ಸೇರಿದಂತೆ ಪ್ರತಿ ವರ್ಷ 20 ಸಾವಿರಕ್ಕೂ ಹೆಚ್ಚು ಭಕ್ತರು ಭವಾನಿ ನಗರದ ಮಠಕ್ಕೆ ಬರುತ್ತಿದ್ದರು. ಈ ಬಾರಿ ಕೊರೊನಾ ಕಾರಣ ಅನ್ನ ಸಂತರ್ಪಣೆ ಹಾಗೂ ತೀರ್ಥ ಸೇವೆ ರದ್ದು ಮಾಡಲಾಗಿದೆ. ಸೇವೆ ಮಾಡಿಸುವ ಭಕ್ತರಿಗೆ ಡಬ್ಬಿಯಲ್ಲಿ ಪರಿಮಳ ಪ್ರಸಾದ ಕೊಡಲಾಗುವುದು’ ಎಂದರು.

ಆರಾಧನೆಯ ಮೂರೂ ದಿನ ಮಠದ ಸಿಬ್ಬಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಕೊರೊನಾ ಭೀತಿ ಇರುವ ಕಾರಣ ಭಕ್ತರು ಕೂಡ ಸಹಕರಿಸಬೇಕು.
- ಗುರಾಚಾರ್‌ ಪುರಾಣಿಕ್‌, ಮುಖ್ಯಸ್ಥರು, ಲಕ್ಷ್ಮಿ ವೆಂಕಟೇಶ್ವರ, ಪಂಚಮುಖಿ ದೇವಸ್ಥಾನ ರಾಘವೇಂದ್ರ ಸ್ವಾಮಿ ಮಠ, ಹುಬ್ಬಳ್ಳಿ

ಆರಾಧನೆಯ ದಿನಗಳಂದು ರಾಯರ ದರ್ಶನಕ್ಕೆ ಯಾವುದೇ ನಿರ್ಬಂಧವಿಲ್ಲ. ಪ್ರತಿ ವರ್ಷದಂತೆ ಈ ಬಾರಿ ಯಾವ ಹೆಚ್ಚುವರಿ ಕಾರ್ಯಕ್ರಮಗಳನ್ನೂ ಆಯೋಜಿಸುವುದಿಲ್ಲ.
- ವಿಜಯೇಂದ್ರಚಾರ್‌ ಕಂಪ್ಲಿ, ಪ್ರಮುಖರು, ಮಾಳಮಡ್ಡಿ ರಾಘವೇಂದ್ರ ಸ್ವಾಮಿ ಮಠ, ಧಾರವಾಡ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.