ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟೊ ಟಿಪ್ಪರ್, ಸಮವಸ್ತ್ರ ಖರೀದಿಯಲ್ಲಿ ಅವ್ಯವಹಾರ ಆರೋಪ

ಪಾಲಿಕೆ ಸಾಮಾನ್ಯ ಸಭೆಯಲ್ಲಿ ಚರ್ಚೆ: ಸ್ಪಷ್ಟನೆ ನೀಡುವಂತೆ ಅಧಿಕಾರಿಗಳಿಗೆ ಸೂಚನೆ
Last Updated 31 ಆಗಸ್ಟ್ 2018, 16:05 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಆಟೊ ಟಿಪ್ಪರ್, ಸಮವಸ್ತ್ರ, ಕೈಗಾಡಿ ಖರೀದಿಯಲ್ಲಿ ಅವ್ಯವಹಾರ ಆಗಿದೆ ಎಂಬ ಆರೋಪ ಶುಕ್ರವಾರ ನಡೆದ ಪಾಲಿಕೆ ಸಾಮಾನ್ಯ ಸಭೆಯಲ್ಲಿ ಕೇಳಿ ಬಂತು.

ಸದಸ್ಯ ಲಕ್ಷ್ಮಣ್ ಗಂಡಗಾಳೇಕರ್ ಮಾತನಾಡಿ, ಕಸ ಸಂಗ್ರಹಣೆಗಾಗಿ 113 ಟಿಪ್ಪರ್ ಖರೀದಿಸಲಾಗಿದ್ದು, ಅದರಲ್ಲಿ ಅವ್ಯವಹಾರ ಆಗಿದೆ ಎಂಬ ಸುದ್ದಿ ಕೆಲವು ಮಾಧ್ಯಮಗಳಲ್ಲಿ ಬಂದಿದೆ. ಇದಕ್ಕೆ ಪಾಲಿಕೆ ಸ್ಪಷ್ಟನೆಯನ್ನೂ ನೀಡದ ಕಾರಣ, ಆಡಳಿತ ಹಾಗೂ ವಿರೋಧ ಪಕ್ಷದವರು ಸೇರಿ ಹಣ ಹೊಡೆದಿದ್ದಾರೆ ಎಂಬ ಭಾವನೆ ಜನರಲ್ಲಿ ಬಂದಿದೆ ಎಂದರು.

ಇದಕ್ಕೆ ವಿರೋಧ ಪಕ್ಷದ ನಾಯಕ ಗಣೇಶ್ ಟಗರಗುಂಟಿ ಹಾಗೂ ಪ್ರಕಾಶ್ ಕ್ಯಾರಕಟ್ಟಿ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ವಾಗ್ದಾಳಿ ನಡೆಸಿದರು. ‘ಟಿಪ್ಪರ್ ಖರೀದಿ ಪ್ರಕ್ರಿಯೆ ಆರಂಭವಾಗಿ ನಾಲ್ಕು ವರ್ಷಗಳಾಗಿವೆ. ಸರ್ಕಾರದ ಮಟ್ಟದಲ್ಲಿ ಈ ಯೋಜನೆಗೆ ಒಪ್ಪಿಗೆ ಸಿಕ್ಕಿದೆ. ಜಗದೀಶ್ ಶೆಟ್ಟರ್ ಅವರು ಆಗ ವಿರೋಧ ಪಕ್ಷದ ನಾಯಕರಾಗಿದ್ದರು. ಅದರಲ್ಲಿ ಲೋಪ ಇದ್ದರೆ ಆಗಲೇ ಆಕ್ಷೇಪ ವ್ಯಕ್ತಪಡಿಸಬಹುದಿತ್ತು. ಇದರಲ್ಲಿ ಅವ್ಯವಹಾರ ಆಗಿದೆ ಅನಿಸಿದರೆ ಅದನ್ನು ಹೇಳುವ ಹಕ್ಕು ಸದಸ್ಯರಿಗೆ ಇದೆ. ಆದರೆ ವಿರೋಧ ಪಕ್ಷದ ಸದಸ್ಯರ ವಿರುದ್ಧ ಆರೋಪ ಮಾಡಿದ್ದು ಸರಿಯಲ್ಲ’ ಎಂದು ತರಾಟೆಗೆ ತೆಗೆದುಕೊಂಡರು.

ಟಿಪ್ಪರ್ ಖರೀದಿ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು, ‘ಇ– ಟೆಂಡರ್ ಪ್ರಕ್ರಿಯೆ ನಡೆಸಿ, ಕಡಿಮೆ ಬಿಡ್‌ದಾರರನ್ನು ಆಯ್ಕೆ ಮಾಡಲಾಗಿದೆ. ಪ್ರತಿ ಟಿಪ್ಪರ್‌ಗೆ ₹7.71 ಲಕ್ಷ ನೀಡಲಾಗಿದೆ’ ಎಂದರು. ಈ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿ ಸ್ಪಷ್ಟನೆ ನೀಡುವಂತೆ ಸದಸ್ಯರು ಮೇಯರ್ ಅವರಿಗೆ ಒತ್ತಾಯಿಸಿದರು.

ಪೌರ ಕಾರ್ಮಿಕರಿಗೆ ವಿತರಣೆ ಮಾಡಿರುವ ಸಮವಸ್ತ್ರ, ಶೂ, ತಳ್ಳುಗಾಡಿ, ಕೈಗವಸು. ಕಸಪೊರಕೆ, ಮುಖಗವಸು ಖರೀದಿಯಲ್ಲಿಯೂ ಅವ್ಯವಹಾರ ಆಗಿದೆ ಎಂಬ ಆರೋಪ ಸಹ ಕೇಳಿ ಬಂತು. ಟೆಂಡರ್ ಪ್ರಕ್ರಿಯೆ ಮೂಲಕವೇ ಖರೀದಿ ನಡೆದಿದೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದರು.

55ನೇ ವಾರ್ಡ್‌ಗೆ ಸರಿಯಾಗಿ ನೀರು ಪೂರೈಕೆಯಾಗುತ್ತಿಲ್ಲ ಎಂದು ಸದಸ್ಯ ಶಿವು ಮೆಣಸಿನಕಾಯಿ ಮೇಯರ್ ಪೀಠದ ಮುಂಭಾಗ ಕೂರುವ ಮೂಲಕ ಪ್ರತಿಭಟನೆ ನಡೆಸಿದರು. ಆಡಳಿತ ಸದಸ್ಯರೇ ಪ್ರತಿಭಟನೆ ನಡೆಸುತ್ತಿರುವುದು ಮೇಯರ್ ತಮ್ಮ ಕರ್ತವ್ಯ ನಿರ್ವಹಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂಬುದನ್ನು ಸೂಚಿಸುತ್ತದೆ. ಅವರು ಈ ಕೂಡಲೇ ರಾಜೀನಾಮೆ ನೀಡಬೇಕು ಎಂದು ಕಾಂಗ್ರೆಸ್ ಸದಸ್ಯರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT