ಶನಿವಾರ, ಜನವರಿ 22, 2022
16 °C
ಎರಡೂ ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಪ್ರವೇಶ: ಜಿಲ್ಲಾಧಿಕಾರಿ

ಎಸ್‌ಡಿಎಂ ಹೊರ, ಒಳರೋಗಿ ವಿಭಾಗಕ್ಕೆ ಷರತ್ತುಬದ್ಧ ಅನುಮತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಧಾರವಾಡ: ಸತ್ತೂರಿನ ಎಸ್‌ಡಿಎಂ ವೈದ್ಯಕೀಯ ಕಾಲೇಜು ಆವರಣದಲ್ಲಿ ಕಂಡುಬಂದ ಕೋವಿಡ್ ಪ್ರಕರಣಗಳಿಂದ ಸ್ಥಿಗತಗೊಂಡಿದ್ದ ಆಸ್ಪತ್ರೆಯ ಹೊರ ಹಾಗೂ ಒಳ ರೋಗಿಗಳ ವಿಭಾಗವನ್ನು ಪುನರ್ ಆರಂಭಿಸಲು ಜಿಲ್ಲಾಧಿಕಾರಿ ಷರತ್ತುಬದ್ಧ ಅನುತಿಯನ್ನು ಶುಕ್ರವಾರ ನೀಡಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಜಿಲ್ಲಾಧಿಕಾರಿ, ‘ಆಸ್ಪತ್ರೆಯ ಹೊರ ಹಾಗು ಒಳ ರೋಗಿಗಳ ವಿಭಾಗ ಆರಂಭಿಸಲು ಅನುಮತಿ ಕೋರಿ ಎಸ್‌ಡಿಎಂ ಸಂಸ್ಥೆ ನ. 30ರಂದು ಮನವಿ ಸಲ್ಲಿಸಿತ್ತು. ಈ ಕುರಿತು ರಾಜ್ಯ ಮಟ್ಟದ ತಾಂತ್ರಿಕ ತಜ್ಞರ ಸಲಹಾ ಸಮಿತಿ ಅಭಿಪ್ರಾಯ ಕೋರಲಾಗಿತ್ತು. ಸಮಿತಿಯು ಡಿ. 2ರಂದು ಸಭೆ ನಡೆಸಿ ಅನುಮತಿ ನೀಡಬಹುದು ಎಂದು ಶಿಫಾರಸು ಮಾಡಿದೆ‘ ಎಂದು ತಿಳಿಸಿದರು.

‘ಕಳೆದ ನವೆಂಬರ್‌ ತಿಂಗಳ ಕೊನೆಯಲ್ಲಿ ಆಸ್ಪತ್ರೆ ಹಾಗೂ ಕಾಲೇಜು ಆವರಣದಲ್ಲಿ ಸುಮಾರು 306 ಕೋವಿಡ್ ಪ್ರಕರಣಗಳು ಕಂಡುಬಂದಿದ್ದವು. ನ. 24ರಿಂದ ಕಾಲೇಜಿನ ಎರಡು ವಿದ್ಯಾರ್ಥಿ ನಿಲಯಗಳನ್ನು ಸೀಲ್‌ಡೌನ್ ಮಾಡಲಾಗಿತ್ತು. ಒಟ್ಟು 7868 ಜನರ ಗಂಟಲು ಹಾಗೂ ಮೂಗಿನ ದ್ರವದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. ವೈರಾಣುವಿನ ತಳಿ ಪತ್ತೆ ಪರೀಕ್ಷೆಯನ್ನೂ ನಡೆಸಲಾಯಿತು. ಹೊಸ ತಳಿ ಅಲ್ಲ ಎಂದು ವರದಿ ದೃಢಪಡಿಸಿದೆ‘ ಎಂದಿದ್ದಾರೆ.

ಆಸ್ಪತ್ರೆಯ ವೈದ್ಯಕೀಯ ಸೇವೆ ಆರಂಭಿಸಲು ಷರತ್ತು ವಿಧಿಸಿರುವ ಜಿಲ್ಲಾಧಿಕಾರಿ, ‘ಕೋವಿಡ್ ಸುರಕ್ಷಾ ಕ್ರಮಗಳನ್ನು ಕಡ್ಡಾಯವಾಗಿ ಅಳವಡಿಸಿಕೊಂಡು ರೋಗಿಗಳ ಆರೈಕೆ ನಡೆಸಬೇಕು. ಮುಂದಿನ ಎರಡು ತಿಂಗಳ ಅವಧಿಯವರೆಗೆ ಜನದಟ್ಟಣೆಗೆ ಕಾರಣವಾಗುವ ಯಾವುದೇ ಸಾಮಾಜಿ, ಸಾಂಸ್ಕೃತಿಕ, ಕ್ರೀಡಾ ಚಟುವಟಿಕೆಗಳನ್ನು ಆಯೋಜಿಸಬಾರದು. ಆಸ್ಪತ್ರೆಯ ಹೊರರೋಗಿಗಳು ಹಾಗೂ ಒಳರೋಗಿಗಳ ಮೂಗು ಹಾಗೂ ಗಂಟಲ ದ್ರವದ ಮಾದರಿಯನ್ನು ಸಂಗ್ರಹಿಸಿ ಸರ್ಕಾರದ ಪ್ರಯೋಗಾಲಯಗಳಿಗೆ ಕಳುಹಿಸಬೇಕು. ಇವುಗಳನ್ನು ಸರ್ಕಾರ ಉಚಿತವಾಗಿ ತಪಾಸಣೆ ಮಾಡಲಿದೆ‘ ಎಂದಿದ್ದಾರೆ.

‘ಕೋವಿಡ್ ನಿರೋಧಕ ಎರಡೂ ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಆಸ್ಪತ್ರೆ ಆವರಣದೊಳಗೆ ಪ್ರವೇಶ ನೀಡಬೇಕು. ಆರೋಗ್ಯದ ಕಾರಣಗಳಿಗಾಗಿ ಲಸಿಕೆ ಪಡೆಯದ ವ್ಯಕ್ತಿಗಳಿದ್ದರೆ ಅಂತಹವರ ಆರೋಗ್ಯ ಸುಧಾರಣೆಯಾದ ಬಳಿಕ ಲಸಿಕೆ ನೀಡಿ ಆಸ್ಪತ್ರೆಯಿಂದ ಬಿಡುಗಡೆ ಮಾಡಬೇಕು. ಆಸ್ಪತ್ರೆಯ ಮುಖ್ಯದ್ವಾರದ ಬಳಿ ಲಸಿಕಾ ಹಾಗೂ ಸ್ವ್ಯಾಬ್ ಸಂಗ್ರಹಣಾ ತಂಡಗಳು ಕಾರ್ಯನಿರ್ವಹಿಸಬೇಕು‘ ಎಂಬ ಷರತ್ತು ವಿಧಿಸಿದ್ದಾರೆ.

‘ಕಂಟೇನ್ಮೆಂಟ್‌ ವಲಯದ ಎರಡು ವಿದ್ಯಾರ್ಥಿನಿಲಯಗಳಲ್ಲಿ ಕೋವಿಡ್ ಪ್ರಮಾಣೀಕೃತ ಸುರಕ್ಷತಾ ಶಿಷ್ಟಾಚಾರ ನಿಯಮಗಳನ್ನು ಪಾಲಿಸಬೇಕು. ಐಸೊಲೇಷನ್‌ನಲ್ಲಿದ್ದ ವೈದ್ಯಕೀಯ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಯನ್ನು ರಾಜ್ಯ ಸರ್ಕಾರದ ಮಾರ್ಗಸೂಚಿಗಳು, ಕ್ಲಿನಿಕಲ್ ಮ್ಯಾನೇಜ್ಮೆಂಟ್ ಪ್ರೊಟೊಕಾಲ್ ಮತ್ತು ತಜ್ಞ ವೈದ್ಯರು ನೀಡುವ ವರದಿ ಆಧರಿಸಿ ಹತ್ತು ದಿನಗಳ ಬಳಿಕೆ ಬಿಡುಗಡೆ ಮಾಡಬಹುದು. ಕೊನೆಯ ಕೋವಿಡ್ ಪ್ರಕರಣ ಪತ್ತೆಯಾದ 14 ದಿನಗಳ ನಂತರ ಕಂಟೇನ್ಮೆಂಟ್‌ ವಲಯದ ವಿದ್ಯಾರ್ಥಿನಿಲಯಗಳನ್ನು ಡಿನೋಟಿಫೈ ಮಾಡಲಾಗುವುದು‘ ಎಂದು ಷರತ್ತಿನಲ್ಲಿ ಹೇಳಿದ್ದಾರೆ.

‘ಕೇರಳ ಹಾಗೂ ಮಹಾರಾಷ್ಟ್ರಗಳಿಂದ ಬರುವ ವ್ಯಕ್ತಿಗಳು ಕಳೆದ 72 ಗಂಟೆಗಳ ಅವಧಿಯಲ್ಲಿ ಪಡೆದ ಆರ್‌ಟಿಪಿಸಿಆರ್ ನೆಗಟಿವ್ ವರದಿ ಹಾಗೂ ಕೋವಿಡ್‌ ನಿರೋಧಕ ಎರಡು ಡೋಸ್ ಲಸಿಕೆ ಪಡೆದ ವರದಿ ಇರಬೇಕು. ಇಲ್ಲದಿದ್ದರೆ ಏಳು ದಿನಗಳ ಕ್ವಾರಂಟೈನ್‌ಗೆ ಒಳಪಡಿಸಿ 8ನೇ ದಿನ ಕೋವಿಡ್ ತಪಾಸಣೆ ಮಾಡಿ ನೆಗಟಿವ್ ವರದಿ ಬಂದ ನಂತರವೇ ಬಿಡುಗಡೆ ಮಾಡಬೇಕು‘ ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು