ಬುಧವಾರ, ನವೆಂಬರ್ 13, 2019
28 °C

ಕ್ರಿಕೆಟ್‌: ಪಂದ್ಯ ಡ್ರಾ, ಕರ್ನಾಟಕಕ್ಕೆ ಮೂರು ಅಂಕ

Published:
Updated:
Prajavani

ಹುಬ್ಬಳ್ಳಿ: ಕೊನೆಯ ದಿನವೂ ತುಂತುರು ಮಳೆ ಕಾಡಿದ್ದರಿಂದ ಕರ್ನಾಟಕ ಮತ್ತು ಹೈದರಾಬಾದ್ ತಂಡಗಳ ನಡುವಿನ 16 ವರ್ಷದ ಒಳಗಿನವರ ವಿಜಯ್‌ ಮರ್ಚಂಟ್ ಟ್ರೋಫಿ ದಕ್ಷಿಣ ವಲಯ ಕ್ರಿಕೆಟ್‌ ಟೂರ್ನಿಯ ಪಂದ್ಯ ಡ್ರಾದಲ್ಲಿ ಅಂತ್ಯಕಂಡಿತು. ಇನಿಂಗ್ಸ್‌ ಮುನ್ನಡೆ ಪಡೆದ ರಾಜ್ಯ ತಂಡಕ್ಕೆ ಮೂರು ಅಂಕಗಳು ಲಭಿಸಿದವು.

ಇಲ್ಲಿನ ಕೆ.ಎಸ್‌.ಸಿ.ಎ. ಕ್ರೀಡಾಂಗಣದಲ್ಲಿ ಮೂರು ದಿನ ಆಯೋಜನೆಯಾಗಿದ್ದ ಪಂದ್ಯಕ್ಕೆ ಮೊದಲ ದಿನ ಮಳೆ ಕಾಡಿತ್ತು. ಅಂತಿಮ ದಿನವಾದ ಭಾನುವಾರ ಕೂಡ ಮಳೆ ಅಡ್ಡಿಯಾಯಿತು. 

ಮೊದಲು ಬ್ಯಾಟ್‌ ಮಾಡಿದ್ದ ಹೈದರಾಬಾದ್‌ ತಂಡ 105 ರನ್‌ ಗಳಿಸಿತ್ತು. ಕರ್ನಾಟಕ ತಂಡ ಶನಿವಾರದ ಅಂತ್ಯಕ್ಕೆ 34 ಓವರ್‌ಗಳಲ್ಲಿ ನಾಲ್ಕು ವಿಕೆಟ್‌ ನಷ್ಟಕ್ಕೆ 98 ರನ್ ಕಲೆಹಾಕಿತ್ತು. ರಾಜ್ಯ ತಂಡ ಒಟ್ಟು 50.5 ಓವರ್‌ಗಳಲ್ಲಿ ಆರು ವಿಕೆಟ್‌ಗೆ 172 ರನ್‌ ಗಳಿಸಿದ್ದ ವೇಳೆ ಮಂದಬೆಳಕಿನ ಕಾರಣ ಕೊನೆಯ ದಿನದಾಟ ನಿಲ್ಲಿಸಲಾಯಿತು.

64 ರನ್‌ ಗಳಿಸಿ ಕ್ರೀಸ್‌ ಕಾಯ್ದುಕೊಂಡಿದ್ದ ಎಸ್‌. ಚೈತನ್ಯ (ಅಜೇಯ 104, 139ಎಸೆತ, 17 ಬೌಂಡರಿ, 1 ಸಿಕ್ಸರ್‌) ಹೈದರಾಬಾದ್ ಬೌಲರ್‌ಗಳನ್ನು ಕಾಡಿದರು. ಆಶಿಶ್‌ ಮಹೇಶ (34) ನೆರವಾದರು. ರಾಜ್ಯ ತಂಡ ಅ. 17ರಿಂದ ಬೆಳಗಾವಿಯಲ್ಲಿ ಗೋವಾ ಎದುರು ಮುಂದಿನ ಪಂದ್ಯವಾಡಲಿದೆ.

ಸಂಕ್ಷಿಪ್ತ ಸ್ಕೋರು: ಹೈದರಾಬಾದ್ ಮೊದಲ ಇನಿಂಗ್ಸ್‌ 65.1 ಓವರ್‌ಗಳಲ್ಲಿ 105. ಕರ್ನಾಟಕ ಪ್ರಥಮ ಇನಿಂಗ್ಸ್‌ 50.5 ಓವರ್‌ಗಳಲ್ಲಿ 6 ವಿಕೆಟ್‌ಗೆ 172 (ಎಸ್‌. ಚೈತನ್ಯ 104, ಯಶೋವರ್ಧನ ಪ್ರತಾಪ್‌ 16, ಆಶೀಶ್‌ ಮಹೇಶ 34; ರಿಷಿತ್‌ ರೆಡ್ಡಿ 30ಕ್ಕೆ3, ಪ್ರಣವ್ ವರ್ಮ 10ಕ್ಕೆ1). ಫಲಿತಾಂಶ: ಡ್ರಾ. ಕರ್ನಾಟಕಕ್ಕೆ ಮೂರು ಅಂಕ. ಹೈದರಾಬಾದ್‌ಗೆ ಒಂದು ಅಂಕ.

ಪ್ರತಿಕ್ರಿಯಿಸಿ (+)