ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಆರ್‌ಟಿಎಸ್‌ ಕಾರಿಡಾರ್‌ನಲ್ಲಿ ಅಪಘಾತ; 114 ಮಂದಿ ಸಾವು

ಐದು ವರ್ಷದಲ್ಲಿ 466 ಅಪಘಾತ ಪ್ರಕರಣ; 373 ಮಂದಿ ಗಾಯ
Published 3 ಜುಲೈ 2024, 15:38 IST
Last Updated 3 ಜುಲೈ 2024, 15:38 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಮಹಾನಗರದ ನಡುವೆ ಸಂಪರ್ಕ ಕಲ್ಪಿಸುವ ತ್ವರಿತ ಬಸ್‌ ಸಾರಿಗೆ ವ್ಯವಸ್ಥೆಯ (ಬಿಆರ್‌ಟಿಎಸ್‌) ಕಾರಿಡಾರ್‌ನಲ್ಲಿ ಐದು ವರ್ಷದ ಅವಧಿಯಲ್ಲಿ ನಡೆದ ಅಪಘಾತಗಳಲ್ಲಿ ಬರೋಬ್ಬರಿ 114 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

2019ರಿಂದ 2024ರ ಜುಲೈ 3ರ ವರೆಗೆ ಕಾರಿಡಾರ್‌ನಲ್ಲಿ 466 ಅಪಘಾತಗಳು ನಡೆದಿವೆ. ಚಿಗರಿ ಬಸ್‌ ವೇಗದ ಚಾಲನೆ, ಕಾರಿಡಾರ್‌ನಲ್ಲಿ ಬೈಕ್‌ ಚಾಲನೆ, ಪಾದಚಾರಿಗಳಿಗೆ ಚಿಗರಿ ಬಸ್‌ ಡಿಕ್ಕಿ, ನಿಯಂತ್ರಣ ತಪ್ಪಿ ಚಿಗರಿ ಬಸ್‌ ವಿಭಜಕಕ್ಕೆ ಡಿಕ್ಕಿ.. ಹೀಗೆ ವಿವಿಧ ಕಾರಣಗಳಿಂದ ಅಪಘಾತಗಳು ಸಂಭವಿಸಿದ್ದು, 373 ಮಂದಿ ಗಾಯಗೊಂಡಿದ್ದಾರೆ. 80ಕ್ಕೂ ಹೆಚ್ಚು ಮಂದಿ ಶಾಶ್ವತ ಅಂಗವಿಕಲರಾಗಿದ್ದಾರೆ.

ಅವಳಿನಗರದ ಮಧ್ಯೆ ನಿತ್ಯ ನೂರಕ್ಕೂ ಹೆಚ್ಚು ಚಿಗರಿ ಬಸ್‌ ಸಂಚರಿಸುತ್ತಿದ್ದು, 28 ಕಿ.ಮೀ. ದೂರವನ್ನು 40– 45 ನಿಮಿಷದಲ್ಲಿ ತಲುಪುತ್ತದೆ. ಅದಕ್ಕಾಗಿಯೇ ಮೀಸಲಾದ ಕಾರಿಡಾರ್‌ನಲ್ಲಿ 32 ಬಸ್‌ ನಿಲ್ದಾಣಗಳಿವೆ. ಈ ಕಾರಿಡಾರ್‌ನಲ್ಲಿ ಚಿಗರಿ ಬಸ್‌ ಮಾತ್ರ ಸಂಚರಿಸುವುದರಿಂದ, ಚಾಲಕರ ಬಸ್‌ ಚಾಲನೆಯ ವೇಗಗಕ್ಕೆ ಮಿತಿ ಇರುವುದಿಲ್ಲ. ಮಿಶ್ರಪಥದಿಂದ ಬಿಆರ್‌ಟಿಎಸ್‌ ಬಸ್‌ ನಿಲ್ದಾಣಕ್ಕೆ ಅಥವಾ ಒಂದು ಬದಿಯ ಮಿಶ್ರಪಥದಿಂದ–ಮತ್ತೊಂದು ಬದಿಯ ಮಿಶ್ರಪಥಕ್ಕೆ ತೆರಳಲು ಸಾರ್ವಜನಿಕರು ಕಾರಿಡಾರ್‌ ಮಾರ್ಗವನ್ನೇ ಬಳಸುತ್ತಾರೆ. ಆ ವೇಳೆ ವೇಗವಾಗಿ ಬರುವ ಚಿಗರಿ ಬಸ್‌, ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆದು ಪ್ರಾಣಕ್ಕೆ ಎರವಾಗುತ್ತಿದೆ.

‘ಹೊಸೂರು ಮಹಿಳಾ ವಿದ್ಯಾಪೀಠ, ವಿದ್ಯಾನಗರ ಕೆನರಾ ಬ್ಯಾಂಕ್‌, ಶುಶ್ರೂತ ಆಸ್ಪತ್ರೆ ಮುಂಭಾಗ, ಉಣಕಲ್‌ ಬಸ್‌ ನಿಲ್ದಾಣ, ನವನಗರ, ಪೊಲೀಸ್‌ ಕಮಿಷನರ್‌ ಕಚೇರಿ, ವಿದ್ಯಾಗಿರಿ ಹೀಗೆ ಅನೇಕ ಕಡೆ ಇಕ್ಕಟ್ಟಾದ ಮಿಶ್ರಪಥವಿದೆ. ಈ ಭಾಗದಲ್ಲೆಲ್ಲ ಸಾರ್ವಜನಿಕರು ಪ್ರಾಣ ಭಯದಿಂದಲೇ ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆರಳಲು ಕಾರಿಡಾರ್‌ ದಾಟಬೇಕಿದೆ. ಯಾವ ಕ್ಷಣದಲ್ಲಿ ಚಿಗರಿ ಬಸ್‌ ಬಂದು ಡಿಕ್ಕಿ ಹೊಡೆಯುತ್ತದೆ ಎಂದು ತಿಳಿಯುವುದಿಲ್ಲ. ಅವೈಜ್ಞಾನಿಕ ಯೋಜನೆಯಿಂದ ಅಪಘಾತಗಳು ಹೆಚ್ಚುತ್ತಿವೆ’ ಎನ್ನುವುದು ಸಾರ್ವಜನಿಕರ ಆರೋಪ.

‘ಚಿಗರಿ ಬಸ್‌ ಚಾಲಕರ ನಿಷ್ಕಾಳಜಿಯಿಂದ ಕಾರಿಡಾರ್‌ನಲ್ಲಿ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಯೋಜನೆ ಆರಂಭವಾದಂದಿನಿಂದ ಈವರೆಗೆ ನೂರಾರು ಅಪಘಾತಗಳು ನಡೆದಿದ್ದು, ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಮಿಶ್ರಪಥ ಕಿರಿದಾಗಿರುವುದರಿಂದ ಸಾರ್ವಜನಿಕರ ವಾಹನಗಳ ಓಡಾಟಕ್ಕೆ ಸಮಸ್ಯೆಯಾಗುತ್ತಿದೆ, ಬಿಆರ್‌ಟಿಎಸ್‌ ಕಾರಿಡಾರ್‌ ಮುಕ್ತಗೊಳಿಸಬೇಕು ಎಂದು ಸಾಕಷ್ಟು ಬಾರಿ ಮನವಿ ಮಾಡಲಾಗಿದೆ. ಜನಪ್ರತಿನಿಧಿಗಳು ಸಹ ಬೇಜವಾಬ್ದಾರಿಯಿಂದ ವರ್ತಿಸುತ್ತಿರುವುದರಿಂದ ಸಮಸ್ಯೆಗೆ ಪರಿಹಾರ ಸಿಗುತ್ತಿಲ್ಲ’ ಎಂದು ದಲಿತ ವಿಮೋಚನಾ ಸಮಿತಿ ಅಧ್ಯಕ್ಷ ಶ್ರೀಧರ ಕಂದಗಲ್‌ ಆಕ್ರೋಶ ವ್ಯಕ್ತಪಡಿಸಿದರು.

‘ಅಪಘಾತ ನಡೆದ ಸ್ಥಳಗಳನ್ನು ಬ್ಲಾಕ್‌ ಸ್ಪಾಟ್‌ ಎಂದು ಗುರುತಿಸಿ, ಅಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು. ಅಂತಹ ಸ್ಥಳದ ಹತ್ತಿರ ಚಿಗರಿ ಬಸ್‌ ನಿಧಾನವಾಗಿ ಚಲಿಸಬೇಕು. ಚಾಲಕರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಬೇಕು. ವೇಗದ ಮಿತಿ ಕಡಿಮೆ ಮಾಡಿದರೆ, ಅಪಘಾತಗಳನ್ನು ಶೂನ್ಯ ಪ್ರಮಾಣಕ್ಕೆ ಇಳಿಸಬಹುದು’ ಎಂದು ವಿದ್ಯಾನಗರದ ಉದ್ಯಮಿ ಗಣೇಶ ಚೌಗಲಾ ಹೇಳಿದರು.

ಚಿಗರಿ ಡಿಕ್ಕಿ; ಪಾದಚಾರಿ ಸಾವು

ಹುಬ್ಬಳ್ಳಿ: ಇಲ್ಲಿನ ವಿದ್ಯಾನಗರದ ಕೆನರಾ ಬ್ಯಾಂಕ್‌ ಎದುರಿನ ಬಿಆರ್‌ಟಿಎಸ್‌ ಕಾರಿಡಾರ್‌ನಲ್ಲಿ ಬುಧವಾರ ಪಾದಚಾರಿ ಮಂಜುನಾಥ ನಗರದ ಗಂಗಾಧರ ಮಮ್ಮಿಗಟ್ಟಿ(66) ಅವರಿಗೆ ಚಿಗರಿ ಬಸ್‌ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ವಿದ್ಯಾನಗರದ ಮಿಶ್ರಪಥದಿಂದ ಕಾರಿಡಾರ್‌ ಮೂಲಕ ಮಿಶ್ರಪಥಕ್ಕೆ ಸಾಗಲು ಸಾರ್ವಜನಿಕರಿಗೆ ಮೀಸಲಿಟ್ಟ ಮಾರ್ಗದಿಂದ ಕಾರಿಡಾರ್‌ ದಾಡುತ್ತಿದ್ದರು. ಆ ವೇಳೆ ಕಿಮ್ಸ್‌ ಕಡೆಯಿಂದ ಧಾರವಾಡಕ್ಕೆ ವೇಗವಾಗಿ ತೆರಳುತ್ತಿದ್ದ ಚಿಗರಿ ಬಸ್‌ ಅವರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ವ್ಯಕ್ತಿ 30 ಮೀಟರ್‌ ದೂರ ಹೋಗಿ ಬಿದ್ದಿದ್ದರು. ಸಾರ್ವಜನಿಕರ ಸಹಾಯದಿಂದ ಸಂಚಾರ ಠಾಣೆ ಪೊಲೀಸರು ಶವವನ್ನು ಆಂಬುಲೆನ್ಸ್‌ ಮೂಲಕ ಕಿಮ್ಸ್‌ಗೆ ಸಾಗಿಸಿದರು. ಉತ್ತರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದ ಭೀಕರತೆಯನ್ನು ಪ್ರತ್ಯಕ್ಷವಾಗಿ ಕಂಡ ಸಾರ್ವಜನಿಕರು ದಲಿತ ವಿಮೋಚನಾ ಸಮಿತಿ ಸದಸ್ಯರ ಜೊತೆ ಚಿಗರಿ ಬಸ್‌ ಸಂಚಾರ ತಡೆದು ಪ್ರತಿಭಟನೆ ನಡೆಸಿದರು. ವೈಜ್ಞಾನಿಕ ಬಿಆರ್‌ಟಿಎಸ್‌ ಯೋಜನೆಯನ್ನು ರದ್ದುಪಡಿಸಬೇಕು ಎಂದು ಆಗ್ರಹಿಸಿ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಸ್ಥಳಕ್ಕೆ ಬಂದ ಬಿಆರ್‌ಟಿಎಸ್‌ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡು ಆಕ್ರೋಶ ವ್ಯಕ್ತಪಡಿಸಿದರು. ಎಸಿಪಿ ಶಿವಪ್ರಕಾಶ ನಾಯ್ಕ ಉತ್ತರ ಸಂಚಾರ ಠಾಣೆ ಇನ್‌ಸ್ಪೆಕ್ಟರ್‌ ರಮೇಶ ಗೋಕಾಕ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT