ಗುರುವಾರ , ನವೆಂಬರ್ 21, 2019
20 °C
ವಿದ್ಯಾರ್ಥಿನಿ ಭಾವನಾ ಹುಲಿಗೆಮ್ಮನವರ ‘ಚಿಣ್ಣರ ಚಿನ್ನ’ ಗೌರವ

‘ಸರ್ಕಾರಿ ಶಾಲೆಗಳಿಂದಲೇ ಸಂಸ್ಕೃತಿ ಉಳಿವು’

Published:
Updated:
Prajavani

ಹುಬ್ಬಳ್ಳಿ: ಓದು, ಬರಹದ ಲೆಕ್ಕಾಚಾರವೇ ಶಿಕ್ಷಣವಲ್ಲ. ಅದರಾಚೆಗೂ ಮಗುವನ್ನು ಉತ್ತಮ ಮನುಷ್ಯನನ್ನಾಗಿ ಮಾಡುವುದೇ ಶಿಕ್ಷಣ. ಓದಿನ ಜೊತೆಗೆ ಕಲೆ, ಸಾಹಿತ್ಯ, ಸಂಸ್ಕೃತಿ, ನಾಟಕ ಸುಂದರ ಭವಿಷ್ಯಕ್ಕೆ ಬುನಾದಿಯಿದ್ದಂತೆ. ಸರ್ಕಾರಿ ಶಾಲೆಯಿಂದ ಮಾತ್ರ ಇವೆಲ್ಲವುಗಳ ಉಳಿವು ಸಾಧ್ಯ ಎಂದು ಮಕ್ಕಳ ಸಾಹಿತಿ ಶಂಕರ ಹಲಗತ್ತಿ ಅಭಿಪ್ರಾಯಪಟ್ಟರು.

ಆನಂದನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕ ಸಾಹಿತಿ ಡಾ. ಲಿಂಗರಾಜ ರಾಮಾಪೂರ ದತ್ತಿ ಅಂಗವಾಗಿ ನಡೆದ ‘ಶಾಲಾ ಅಂಗಳದಲ್ಲಿ ಸಾಹಿತ್ಯ ಸಂವಾದ ಹಾಗೂ ಚಿಣ್ಣರ ಚಿನ್ನ ಪ್ರಶಸ್ತಿ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಭಾವನಾ ಹುಲಿಗೆಮ್ಮನವರ ಅವರಿಗೆ ‘ಚಿಣ್ಣರ ಚಿನ್ನ’ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಮಕ್ಕಳ ಕವಿ ನಿಂಗಣ್ಣ ಕುಂಟಿ ‘ಇದು ಪ್ರಶಸ್ತಿಯೊಳಗೊಂದು ಪ್ರಶಸ್ತಿ ಇದ್ದಂತೆ. ರಾಮಾಪೂರ ಅವರಿಗೆ ಬಂದ ರಾಜ್ಯ ಪ್ರಶಸ್ತಿ ₹15 ಸಾವಿರ ಹಣವನ್ನು ಅವರು ಶಾಲೆಗೆ ದಾನವಾಗಿ ನೀಡಿದ್ದಾರೆ. ಪ್ರಶಸ್ತಿಗಾಗಿ ದತ್ತಿ ಸ್ಥಾಪಿಸಿದ್ದು, ಶ್ಲಾಘನೀಯ. ರಾಮಾಪುರ ಶಿಕ್ಷಕರ ಕುಲಕ್ಕೆ ಮಾದರಿ’ ಎಂದು ಪ್ರಶಂಸಿಸಿದರು.

ಸಾಹಿತ್ಯ ಸಂವಾದದಲ್ಲಿ ಜಾನಪದ ಕವಿ ಡಾ. ರಾಮುಮೂಲಗಿ, ಹಾಸ್ಯ ಕವಿ ಎಂ.ಡಿ.ಗೋಗೇರಿ ಮಕ್ಕಳೊಂದಿಗೆ ಸಂವಾದ ಮಾಡಿದರು.

ಹುಬ್ಬಳ್ಳಿ ಶಹರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀಶೈಲ ಕರೀಕಟ್ಟಿ ‘ಮಕ್ಕಳು ಪಠ್ಯಪುಸ್ತಕದಲ್ಲಿ ಮಾತ್ರ ಸಾಹಿತಿ, ಲೇಖಕ, ಕವಿ, ಕಲಾವಿದರನ್ನು ನೋಡುತ್ತಾರೆ. ಡಾ. ರಾಮಾಪೂರ ಅವರು ಶಾಲಾ ಅಂಗಳಕ್ಕೆ ಮಹಾನ್ ವ್ಯಕ್ತಿಗಳನ್ನು ಕರೆ ತಂದಿದ್ದಾರೆ. ಈ ರೀತಿಯ ಕೆಲಸ ಎಲ್ಲ ಶಾಲೆಗಳಲ್ಲಿಯೂ ಆಗಬೇಕು’ ಎಂದರು. 

ರಾಮಾಪೂರ ಅವರು ದತ್ತಿಯ ಆಶಯ ವಿವರಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಮಹೇಶ ಕುಮಾರ ಪಾಟೀಲ, ಜನಾಬ ಯಲಿಗಾರ, ಎನ್.ಎಂ. ನಿಂಬಣ್ಣವರ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ವಿಜಯಲಕ್ಷ್ಮಿ ಹೆಬ್ಬಾಳ ಸ್ವಾಗತಿಸಿದರು. ಶಿಕ್ಷಕ ಪಿ.ಎಸ್.ಹುಗ್ಗಿ ವಂದಿಸಿದರು. ಎಸ್.ಬಿ.ಶಿವಶಿಂಪಿ ನಿರ್ವಹಿಸಿದರು.

ಪ್ರತಿಕ್ರಿಯಿಸಿ (+)