ಭಾನುವಾರ, ಅಕ್ಟೋಬರ್ 20, 2019
27 °C
ನವ ಅಯೋಧ್ಯಾನಗರದಲ್ಲಿ ಅಂಬೇಡ್ಕರ್ ಸಮುದಾಯ ಭವನ ಉದ್ಘಾಟನೆ

ದಲಿತರು ಆರ್ಥಿಕವಾಗಿ ಸಬಲರಾಗಬೇಕು: ಶೆಟ್ಟರ್

Published:
Updated:
Prajavani

ಹುಬ್ಬಳ್ಳಿ: ‘ದಲಿತರು ಶಿಕ್ಷಣ ಪಡೆಯುವ ಜತೆಗೆ, ಆರ್ಥಿಕವಾಗಿಯೂ ಸಬಲರಾಗಬೇಕು. ಆಗ ಅವರ ಸಾಮಾಜಿಕ ಸ್ಥಾನಮಾನವೂ ಬದಲಾಗುತ್ತದೆ’ ಎಂದು ಬೃಹತ್ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ಹುಬ್ಬಳ್ಳಿಯ ನವ ಅಯೋಧ್ಯಾನಗರದಲ್ಲಿ ನಿರ್ಮಿಸಿರುವ ನೂತನ ಡಾ. ಬಿ.ಆರ್. ಅಂಬೇಡ್ಕರ್ ಸಮುದಾಯ ಭವನವನ್ನು ಭಾನುವಾರ ಉದ್ಘಾಟಿಸಿ ಮಾತನಾಡಿದ ಅವರು, ‘ಅಂಬೇಡ್ಕರ್ ಅವರ ಆಶಯದಂತೆ ದಲಿತರು ಉದ್ಯೋಗ ಬೇಡುವ ಬದಲು, ಉದ್ಯೋಗ ನೀಡುವವರಾಗಬೇಕು’ ಎಂದರು.

‘ಶೋಷಿತ ಸಮುದಾಯದವರ ಕೈಗಾರಿಕೆ ಸ್ಥಾಪನೆಯನ್ನು ಉತ್ತೇಜಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳನ್ನು ರೂಪಿಸಿವೆ. ಜತೆಗೆ, ಅನೇಕ ವಿನಾಯ್ತಿಗಳನ್ನು ಸಹ ನೀಡಿವೆ. ಯೋಜನೆಯ ನಿಯಮಗಳು ಸ್ವಲ್ಪ ಕಠಿಣವಾಗಿರುವುದರಿಂದ ದಲಿತರು ಉದ್ಯಮ ಸ್ಥಾಪನೆಗೆ ಹಿಂದೇಟು ಹಾಕುತ್ತಿದ್ದಾರೆ. ಹಾಗಾಗಿ, ಅವುಗಳನ್ನು ತಿದ್ದುಪಡಿ ಮಾಡಲು ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮಾತನಾಡಿ, ‘ಶಾಸಕ ಪ್ರಸಾದ ಅಬ್ಬಯ್ಯ ಅವರ ಪ್ರಯತ್ನದಿಂದ ಸುಸಜ್ಜಿತ ಅಂಬೇಡ್ಕರ್ ಭವನ ನಿರ್ಮಾಣವಾಗಿದೆ. ಜತೆಗೆ, ಈ ಭಾಗದಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸಗಳಾಗಿವೆ. ಭವನವನ್ನು ದುರುದ್ದೇಶಕ್ಕೆ ಬಳಸಲು ಅವಕಾಶ ನೀಡಬಾರದು. ಅದರ ನಿರ್ವಹಣೆಗಾಗಿ ಸ್ಥಳೀಯ ಹಾಗೂ ಪಾಲಿಕೆಯ ಅಧಿಕಾರಿಯನ್ನೊಳಗೊಂಡ ನಿರ್ವಹಣಾ ಸಮಿತಿಯನ್ನು ರಚಿಸಬೇಕು’ ಎಂದು ಸಲಹೆ ನೀಡಿದರು.

ಅಧ್ಯಕ್ಷತೆ ವಹಿಸಿದ್ದ ಶಾಸಕ ಪ್ರಸಾದ ಅಬ್ಬಯ್ಯ, ‘ಮೂಲಸೌಕರ್ಯವಿಲ್ಲದೆ ಬಳಲುತ್ತಿದ್ದ ನವ ಅಯೋಧ್ಯಾನಗರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳಾಗಿವೆ. ಸಿಮೆಂಟ್ ರಸ್ತೆ, ಕುಡಿಯುವ ನೀರು ಪೂರೈಕೆ ಸೇರಿದಂತೆ ಹಲವು ಸೌಕರ್ಯ ಕಲ್ಪಿಸಲಾಗಿದೆ. ಇದೀಗ ₹1.5 ಕೋಟಿ ವೆಚ್ಚದಲ್ಲಿ ಎರಡು ಅಂತಸ್ತಿನ ಅಂಬೇಡ್ಕರ್ ಭವನ ನಿರ್ಮಿಸಲಾಗಿದೆ. ಸ್ಥಳೀಯ ಕಾರ್ಯಕ್ರಮಗಳ ಜತೆಗೆ, ಸ್ವಯಂ ಉದ್ಯೋಗಕ್ಕೆ ಸಂಬಂಧಿಸಿದಂತೆ ತರಬೇತಿ ಚಟುವಟಿಕೆಗಳಿಗೆ ಮಾತ್ರ ಅಂಬೇಡ್ಕರ್ ಭವನವನ್ನು ಬಳಸಬೇಕು’ ಎಂದರು.

‘ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದಲಿತರ ಅಭ್ಯುದಯಕ್ಕಾಗಿ ಅನೇಕ ಯೋಜನೆಗಳನ್ನು ರೂಪಿಸಿವೆ. ಆದರೆ, ಅನೇಕರಿಗೆ ಅವುಗಳ ಮಾಹಿತಿಯೇ ಇಲ್ಲ. ಹಾಗಾಗಿ, ಯೋಜನೆಗಳನ್ನು ಪ್ರಚಾರಪಡಿಸುವ ಕೆಲಸವನ್ನು ಸರ್ಕಾರಗಳು ಮಾಡಬೇಕಿದೆ’ ಎಂದು ಹೇಳಿದರು.

ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಪಾಲಿಕೆಯ ಹೆಚ್ಚುವರಿ ಆಯುಕ್ತ ಅಜೀಜ್ ದೇಸಾಯಿ, ಬಿಜೆಪಿ ಮುಖಂಡಾರದ ಸಂತೋಷ ಅರಕೇರಿ, ಸುಧೀರ ಸರಾಫ, ದಶರಥ ವಾಲಿ, ನಾಗೇಶ ಕಲಬುರ್ಗಿ, ಈರಣ್ಣ ಜಡಿ, ಕಾಂಗ್ರೆಸ್‌ನ ಅನಿಲಕುಮಾರ ಪಾಟೀಲ, ಅಲ್ತಾಫ್ ಕಿತ್ತೂರ, ದಲಿತ ಮುಖಂಡ ಪಿತಾಂಬ್ರಪ್ಪ ಬಿಳಾರ ಹಾಗೂ ಸ್ಥಳೀಯ ಮುಖಂಡರು ಇದ್ದರು.

Post Comments (+)