ಶನಿವಾರ, ಅಕ್ಟೋಬರ್ 16, 2021
29 °C
ಕೆರೆ ಅಭಿವೃದ್ಧಿಗೊಳಿಸಲು ಹುಡಾ ಸಭೆಯಲ್ಲಿ ನಿರ್ಧಾರ

ಹುಬ್ಬಳ್ಳಿ: ಭೂಸ್ವಾಧೀನ ಕೈಬಿಡಲು ತೀರ್ಮಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ನಿವೇಶನಕ್ಕಾಗಿ ಧಾರವಾಡ ಸಮೀಪದ ಸತ್ತೂರಿನಲ್ಲಿ 227 ಎಕರೆ ಜಾಗ ಭೂಸ್ವಾಧೀನ ಮಾಡಿಕೊಳ್ಳುವ ಯೋಜನೆಗೆ ರೈತರು ಪ್ರಬಲ ವಿರೋಧ ವ್ಯಕ್ತಪಡಿಸಿದ್ದರಿಂದ ಹುಬ್ಬಳ್ಳಿ–ಧಾರವಾಡ ಪ್ರಾಧಿಕಾರ ಈ ಯೋಜನೆ ಕೈಬಿಟ್ಟಿದೆ.

ಪ್ರಾಧಿಕಾರದ ಕಚೇರಿಯಲ್ಲಿ ಶುಕ್ರವಾರ ನಡೆದ ಮಾಸಿಕ ಸಭೆಯಲ್ಲಿ ಸರ್ವಸಮ್ಮತದಿಂದ ಈ ತೀರ್ಮಾನಕ್ಕೆ ಬರಲಾಯಿತು.

ಸತ್ತೂರಿನಲ್ಲಿ ಭೂಮಿ ವಶಪಡಿಸಿಕೊಳ್ಳಲು ಹುಡಾ 2016ರಿಂದಲೇ ರೈತರ ಜೊತೆ ನಿರಂತರ ಮಾತುಕತೆಯಲ್ಲಿ ತೊಡಗಿತ್ತು. ಇದಕ್ಕೆ ರೈತರು ವಿರೋಧ ವ್ಯಕ್ತಪಡಿಸುತ್ತ ಬಂದಿದ್ದರು. ಈ ವಿಷಯವನ್ನು ಸರ್ಕಾರದ ಗಮನಕ್ಕೆ ತಂದಾಗ ಇನ್ನೊಂದು ಬಾರಿ ರೈತರೊಂದಿಗೆ ಚರ್ಚಿಸಿ ಹುಡಾಕ್ಕೆ ಶೇ 60 ಹಾಗೂ ಭೂಮಿ ಕೊಡುವ ರೈತರಿಗೆ ಶೇ 40ರ ಲೆಕ್ಕಾಚಾರದಲ್ಲಿ ಹಂಚಿಕೆಗೆ ಮನವೊಲಿಸುವಂತೆ ಸೂಚಿಸಿತ್ತು.

ಇದಕ್ಕೂ ರೈತರು ಒಪ್ಪಿರಲಿಲ್ಲ. ಅಷ್ಟೇ ಅಲ್ಲ; ಆರಂಭದ ದಿನಗಳಲ್ಲಿದ್ದ ವಿರೋಧವನ್ನು ಈಗಲೂ ಗಟ್ಟಿಯಾಗಿಯೇ ಉಳಿಸಿಕೊಂಡು ಬಂದಿದ್ದರು. ಹೀಗಾಗಿ ಸತ್ತೂರಿನಲ್ಲಿ ನಿವೇಶನಗಳ ನಿರ್ಮಾಣದ ಯೋಜನೆಯಿಂದ ಹುಡಾ ಹಿಂದೆ ಸರಿದಿದೆ.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಹುಡಾ ಅಧ್ಯಕ್ಷ ನಾಗೇಶ ಕಲಬುರ್ಗಿ ‘ರೈತರು ವಿರೋಧದಿಂದಾಗಿ ಯೋಜನೆ ಕೈಬಿಟ್ಟಿದ್ದೆವೆ. ಸರ್ಕಾರಕ್ಕೆ ತಿಳಿಸಲಾಗುವುದು’ ಎಂದರು.

ಕೆರೆ ಅಭಿವೃದ್ಧಿ ಯೋಜನೆ: ಅವಳಿ ನಗರದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಹಲವು ಕೆರೆಗಳನ್ನು ಅಭಿವೃದ್ಧಿಪಡಿಸಲು ಹುಡಾದಿಂದ ಪ್ರತಿ ಕ್ಷೇತ್ರಕ್ಕೆ ತಲಾ ₹4 ಕೋಟಿ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.

ಹುಬ್ಬಳ್ಳಿಯ ಸಂತೋಷ ನಗರ, ನಾಗಶೆಟ್ಟಿಕೊಪ್ಪ, ಕೆಂಪಗೆರೆ ಧಾರವಾಡದ ಸಾಧನಕೇರಿ ಮತ್ತು ಕೆಲಗೇರಿ ಕೆರೆಗಳ ಅಭಿವೃದ್ಧಿಗೆ ಆಯಾ ಕ್ಷೇತ್ರಗಳ ಜನಪ್ರತಿನಿಧಿಗಳು ಶಿಫಾರಸು ಮಾಡಿದ್ದಾರೆ. ಕೆಲ ದಿನಗಳಲ್ಲಿ ಡಿಪಿಆರ್‌ ಸಿದ್ಧಪಡಿಸಿ ಎಲ್ಲ ಪ್ರಮುಖ ಕೆರೆಗಳ ಅಭಿವೃದ್ಧಿಗೆ ಯೋಜನೆ ಸಿದ್ಧಪಡಿಸಲಾಗುತ್ತಿದೆ ಎಂದು ಕಲಬುರ್ಗಿ ತಿಳಿಸಿದರು.

ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ್, ಶಾಸಕರಾದ ಅಮೃತ ದೇಸಾಯಿ, ಪ್ರಸಾದ ಅಬ್ಬಯ್ಯ, ಕುಸುಮಾವತಿ ಶಿವಳ್ಳಿ, ಹುಡಾ ಸದಸ್ಯರಾದ ಸುನೀಲ ಮೋರೆ, ಚಂದ್ರಶೇಖರ ಗೋಕಾಕ, ಮೀನಾಕ್ಷಿ ಒಂಟಮೂರಿ, ಆಯುಕ್ತ ಎನ್‌.ಎಚ್‌. ಕುಮ್ಮಣ್ಣನವರ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.