ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನ್ಯೂನತೆ ಧ್ವಜ ಪೂರೈಕೆ; ಕ್ರಮಕ್ಕೆ ಪ್ರಲ್ಹಾದ ಜೋಶಿ ಸೂಚನೆ

10 ಕೋಟಿ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸುವ ಯೋಜನೆ
Last Updated 12 ಆಗಸ್ಟ್ 2022, 10:43 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಹುಧಾ ಮಹಾನಗರ ಪಾಲಿಕೆಗೆ ದೋಷಪೂರಿತ ರಾಷ್ಟ್ರಧ್ವಜ ಪೂರೈಸಿದವರ ವಿರುದ್ಧ ಹಾಗೂ ಅವುಗಳನ್ನು ಪರಿಶೀಲನೆ ಮಾಡದೆ ಸ್ವೀಕರಿಸಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಪಾಲಿಕೆ ಆಯುಕ್ತರಿಗೆ ಸೂಚಿಸಲಾಗಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ‘ದೋಷಪೂರಿತ ಧ್ವಜ ಪೂರೈಕೆಯು ಮನೆಮನೆಯಲ್ಲಿ ತ್ರಿವರ್ಣ ಧ್ವಜ ಅಭಿಯಾನಕ್ಕೆ ಹಿನ್ನಡೆಯಾಗಬಾರದು. ಅಂತಹ ಧ್ವಜಗಳನ್ನು ಸಾರ್ವಜನಿಕರಿಗೆ ನೀಡಿದ್ದರೆ ಮರಳಿ ಪಡೆಯಬೇಕು. ಹಾಗೂ ಅವುಗಳನ್ನು ಮಾರಾಟ ಮಾಡಬಾರದು ಎಂದು ತಿಳಿಸಲಾಗಿದೆ. ಗುಣಮಟ್ಟದ ಧ್ವಜಗಳನ್ನು ಪೂರೈಸದ ಕಂಪನಿಗಳ ಮಾಹಿತಿ ಪಡೆದು ಅವರ ವಿರುದ್ಧ ಕ್ರಮ ಕೈಗೊಳ್ಳಲು ತಿಳಿಸಲಾಗಿದೆ’ ಎಂದು ಹೇಳಿದರು.

‘ಸ್ವಾತಂತ್ರ್ಯಕ್ಕಾಗಿ ಸಾಕಷ್ಟು ಮಂದಿ ಪ್ರಾಣ ತ್ಯಾಗ ಮಾಡಿದ್ದಾರೆ, ಲೆಕ್ಕವಿಲ್ಲದಷ್ಟು ಮಂದಿ ಹಲವು ವರ್ಷ ಜೈಲಿನಲ್ಲಿ ಕಳೆದಿದ್ದಾರೆ. ಅವರ ಕೊಡುಗೆ ಇಂದಿನ ಪೀಳಿಗೆಗೆ ತಿಳಿಯಬೇಕಿದೆ. ಪಠ್ಯದಲ್ಲಿ ಅವರೆಲ್ಲ ಮಾಹಿತಿ ಒದಗಿಸಲು ಸಾಧ್ಯವಾಗಿಲ್ಲ. ಅಮೃತ ಮಹೋತ್ಸವದ ಸ್ವಾತಂತ್ರ್ಯ ಆಚರಣೆಯಲ್ಲಾದರೂ ಅವರ ಬಗ್ಗೆ ಮಾಹಿತಿ ನೀಡಬೇಕಿದೆ. ಈ ನಿಟ್ಟಿನಲ್ಲಿ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದೇಶದಾದ್ಯಂತ 10 ಕೋಟಿ ಮನೆಗಳ ಮೇಲೆ ತ್ರಿವರ್ಣ ಧ್ವಜ ಹಾರಿಸುವ ವಿಶೇಷ ಕಾರ್ಯಕ್ರಮ ಆ. 13ರಿಂದ 15ರವರೆಗೆ ನಡೆಯಲಿದೆ’ ಎಂದರು.

‘ಈದ್ಗಾ ಮೈದಾನದಲ್ಲಿ ಗಣೇಶೋತ್ಸವ ನಡೆಸುವ ಕುರಿತು ಯಾರು ಮನವಿ ನೀಡಿದ್ದಾರೆ ಎಂದು ಗೊತ್ತಿಲ್ಲ. ಅದು ಮಹಾನಗರ ಪಾಲಿಕೆ ಆಸ್ತಿಯಾಗಿದ್ದು, ಅಲ್ಲಿ ಯಾವೆಲ್ಲ ಕಾರ್ಯಕ್ರಮ ನಡೆಸಬೇಕು, ಯಾವುದಕ್ಕೆ ಅವಕಾಶ ನೀಡಬೇಕು ಎನ್ನುವುದನ್ನು ಪಾಲಿಕೆ ಆಯುಕ್ತರು ತೀರ್ಮಾನ ಮಾಡುತ್ತಾರೆ. ವರ್ಷದಲ್ಲಿ ಎರಡು ದಿನ ಮುಸ್ಲಿಂ ಸಮುದಾಯಕ್ಕೆ ಅಲ್ಲಿ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಸುಪ್ರೀಂ ಕೋರ್ಟ್‌ ತಿಳಿಸಿದೆ. ಉಳಿದ ಅವಧಿ ಪಾಲಿಕೆಗೆ ಸೇರಿದ್ದಾಗಿರುವುದರಿಂದ, ಅದು ಸೂಕ್ತ ನಿರ್ಧಾರ ತೆಗೆದುಕೊಳ್ಳಲು ಸ್ವತಂತ್ರವಾಗಿದೆ’ ಎಂದು ತಿಳಿಸಿದರು.

‘ಮಹಾನಗರ ಪಾಲಿಕೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿರುವ ಕುರಿತು ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಿರುವುದು ಗಮನಕ್ಕೆ ಬಂದಿದೆ. ಯಾವ ರಾಜಕೀಯ ಒತ್ತಡಕ್ಕೂ ಮಣಿಯದೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲು ಮೇಯರ್‌, ಆಯುಕ್ತರಿಗೆ ತಿಳಿಸಿದ್ದೇನೆ’ ಎಂದು ಸಚಿವ ಜೋಶಿ ಹೇಳಿದರು.

ಧ್ವಜ ವಾಪ್ಸಿಗೆ ಚರ್ಚೆ: ಚಿಂಚೋರೆ

ಹುಬ್ಬಳ್ಳಿ: ‘ಸಾರ್ವಜನಿಕರಿಗೆ ಪೂರೈಕೆ ಮಾಡುತ್ತಿರುವ ದೋಷಪೂರಿತ ಪಾಲಿಸ್ಟರ್‌ ಧ್ವಜಗಳನ್ನು ಸಂಗ್ರಹಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕಳುಹಿಸುವ ಧ್ವಜ ವಾಪ್ಸಿ ಯೋಜನೆಗೆ ಪಕ್ಷದ ಮುಖಂಡರ ಜೊತೆ ಚರ್ಚಿಸಲಾಗುವುದು’ ಎಂದು ಎಐಸಿಸಿ ಸದಸ್ಯ ದೀಪಕ ಚಿಂಚೋರೆ ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹುಧಾ ಮಹಾನಗರ ಪಾಲಿಕೆಯ ಪ್ರತಿಯೊಂದು ವಾರ್ಡ್‌ಗೆ ಒಂದು ಸಾವಿರ ಪಾಲಿಸ್ಟರ್‌ ಧ್ವಜ ಪೂರೈಸಲಾಗಿದೆ. ಅವುಗಳಲ್ಲಿ ಬಹುತೇಕ ಧ್ವಜ ದೋಷಪೂರಿತವಾಗಿದೆ. ರಾಷ್ಟ್ರಧ್ವಜ ತಯಾರಿಸುವ ಘಟಕ ಹುಬ್ಬಳ್ಳಿಯಲ್ಲಿಯೇ ಇದ್ದರೂ, ಅಲ್ಲಿಂದಲೇ ಖಾದಿ ಧ್ವಜ ಖರೀದಿಸಿ ಸಾರ್ವಜನಿಕರಿಗೆ ಹಂಚಿಕೆ ಮಾಡಬಹುದಿತ್ತು. ಸ್ಥಳೀಯ ಕಾರ್ಮಿಕರಿಗೆ ಮತ್ತಷ್ಟು ಉದ್ಯೋಗವಾದರೂ ದೊರೆಯುತ್ತಿತ್ತು’ ಎಂದು ಹೇಳಿದರು.

ಮುಖಂಡ ರಜತ್‌ ಉಳ್ಳಾಗಡ್ಡಿಮಠ ಮಾತನಾಡಿ, ‘ಯಂತ್ರದಿಂದ ತಯಾರಿಸಿದ ಪಾಲಿಸ್ಟರ್‌ ಧ್ವಜ ಬಳಸಬಹುದು ಎಂದಷ್ಟೇ ತಿದ್ದುಪಡಿ ಧ್ವಜ ಸಂಹಿತೆಯಲ್ಲಿದೆ. ಆದರೆ, ಇವರು ಬಿಎಸ್‌ಐ ಮಾನದಂಡಗಳನ್ನೆಲ್ಲ ಗಾಳಿಗೆ ತೂರಿ ಧ್ವಜ ಸಿದ್ಧಪಡಿಸಿದ್ದಾರೆ. ಸಾರ್ವಜನಿಕರಿಗೆ ವಿತರಿಸುತ್ತಿರುವ ಶೇ 70ರಷ್ಟು ಧ್ವಜ ದೋಷಪೂರಿತವಾಗಿದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

***

ಅಮೃತ ಮಹೋತ್ಸವದ ಅಮಗವಾಗಿ ನಗರದ ಪ್ರಮುಖ ಸ್ಥಳಗಳನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಿದಂತೆ ಖಾದಿ ರಾಷ್ಟ್ರಧ್ವಜ ಉತ್ಪಾದನೆ ಮಾಡುವ ಬೆಂಗೇರಿಯ ರಾಷ್ಟ್ರಧ್ವಜ ಉತ್ಪಾದನಾ ಕೇಂದ್ರವನ್ನು ಅಲಂಕರಿಸಬೇಕು

-ರಜತ್‌ ಉಳ್ಳಾಗಡ್ಡಿಮಠ, ಮುಖಂಡ, ಕಾಂಗ್ರೆಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT