ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನವಜಾತ ಶಿಶು ಪತ್ತೆ; 7 ದಿನದ ಬಳಿಕ ದೂರು

Last Updated 30 ಏಪ್ರಿಲ್ 2022, 2:39 IST
ಅಕ್ಷರ ಗಾತ್ರ

ಹುಬ್ಬಳ್ಳಿ: ತಾಲ್ಲೂಕಿನ ಕೋಳಿವಾಡ ಗ್ರಾಮದ ರೊಟ್ಟಿಗವಾಡದ ಹೊಲದ ಬದುವಿನಲ್ಲಿ ಏಳು ದಿನದ ಹಸುಗೂಸು ಪತ್ತೆಯಾಗಿದ್ದು, ಜಿಲ್ಲಾ ಬಾಲ ಮಂದಿರದಲ್ಲಿಟ್ಟು ಪೋಷಣೆ ಮಾಡಲಾಗುತ್ತಿದೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೋಳಿವಾಡ ಅಂಬೇಡ್ಕರ್‌ ನಗರದ ನಿವಾಸಿ ರೇಣುಕಾ ಅವರು ಏ. 22ರಂದು ಹೊಲಕ್ಕೆ ತೆರಳುತ್ತಿದ್ದಾಗ ಬದುವಿನಲ್ಲಿ ಏಳು ತಿಂಗಳ ಶಿಶುವನ್ನು ಚೀಲದಲ್ಲಿಟ್ಟು ಬಿಟ್ಟು ಹೋಗಿರುವುದು ಗಮನಕ್ಕೆ ಬಂದಿದೆ. ಶಿಶುವನ್ನು ಮನೆಗೆ ತಂದು ಪೋಷಣೆ ಮಾಡಿದ್ದಾರೆ. ಸ್ಥಳೀಯರ ಸಲಹೆ ಮೇರೆಗೆ ಪೊಲೀಸ್‌ ಠಾಣೆಗೆ ತಿಳಿಸಿ, ಮಗು ಪತ್ತೆಯಾಗಿರುವ ಕುರಿತು ದೂರು ಸಲ್ಲಿಸಿದ್ದರು.

ಆನ್‌ಲೈನ್‌ನಲ್ಲಿ ವಂಚನೆ: ವಿದ್ಯಾನಗರದ ಎಸ್‌.ಬಿ. ಶೆಟ್ಟಿ ಅವರ ಮೊಬೈಲ್‌ಗೆ ಲಿಂಕ್‌ ಕಳಹಿಸಿದ ವಂಚಕ, ತಕ್ಷಣ ಪಾನ್‌ ಕಾರ್ಡ್‌ ಅಪ್‌ಡೇಟ್‌ ಮಾಡಬೇಕು ಎಂದು ನಂಬಿಸಿ ಬ್ಯಾಂಕ್‌ ಮಾಹಿತಿ ಪಡೆದು ₹1.99 ಲಕ್ಷ ವರ್ಗಾಯಿಸಿಕೊಂಡಿದ್ದಾನೆ.

ಧಾರವಾಡ ಯಾಲಕ್ಕಿ ಶೆಟ್ಟರ್ ಕಾಲೊನಿಯ ಸುಹಾಸಿನಿ ಶಿಗ್ಗಾವಿ ಅವರ ಮೊಬೈಲ್‌ಗೆ ಲಿಂಕ್‌ ಕಳುಹಿಸಿದ ವಂಚಕ, ಆನ್‌ಲೈನ್‌ನಲ್ಲಿ ₹87 ಸಾವಿರ ವರ್ಗಾಯಿಸಿಕೊಂಡಿದ್ದಾನೆ. ಅದೇ ರೀತಿ, ಕೇಶ್ವಾಪುರದ ಪುಷ್ಪಾ ಬದಾಮಿ ಅವರಿಗೆ ಕರೆ ಮಾಡಿರುವ ವಂಚಕರು, ಮಾಮಾ ವೆಬ್‌ಸೈಟ್‌ನಿಂದ ಗಿಫ್ಟ್‌ ಬಂದಿರುವುದಾಗಿ ನಂಬಿಸಿ ₹98 ಸಾವಿರ ವರ್ಗಾಯಿಸಿಕೊಂಡಿದ್ದಾರೆ. ಈ ಮೂರೂ ಪ್ರಕರಣ ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ದಾಖಲಾಗಿವೆ.

ಕಳವಿಗೆ ತಂದ ವಾಹನ ಬಿಟ್ಟೋದ ಕಳ್ಳರು: ₹5 ಸಾವಿರ ಮೌಲ್ಯದ ಸಾಮಗ್ರಿಗಳನ್ನು ಕಳವು ಮಾಡಿದ ಕಳ್ಳರು, ತಾವು ತಂದಿದ್ದ ಆಟೊ ಮತ್ತು ಬೈಕ್‌ ಬಿಟ್ಟು ಹೋದ ಘಟನೆ ಗಬ್ಬೂರ ಕ್ರಾಸ್‌ನ ಎಲ್‌.ಜಿ. ಗೋದಾಮು ಬಳಿ ಗುರುವಾರ ರಾತ್ರಿ ನಡೆದಿದೆ.

ಝಂಡು ಕನ್‌ಸ್ಟ್ರಕ್ಷನ್‌ ಇಂಡಿಯಾ ಕಂಪನಿ ಕಾಂಪೌಂಡ್‌ ಒಳಗೆ ಕಾಮಗಾರಿಗೆಂದು ಸಾಮಗ್ರಿಗಳನ್ನು ಸಂಗ್ರಹಿಸಲಾಗಿತ್ತು. ಆಟೊ ಮತ್ತು ಬೈಕ್‌ನಲ್ಲಿ ಬಂದ ಮೂವರು ಕಾಂಪೌಂಡ್‌ ಹೊರಗೆ ವಾಹನಗಳನ್ನು ನಿಲ್ಲಿಸಿ ₹3 ಸಾವಿರ ಮೌಲ್ಯದ ಕಬ್ಬಿಣ ಸರಳು ಮತ್ತು ₹2 ಸಾವಿರ ಮೌಲ್ಯದ ಸೇಫ್ಟಿ ಬೋರ್ಡ್‌ ಕಳವು ಮಾಡಿದ್ದು, ವಾಹನಗಳನ್ನು ಬಿಟ್ಟು ಹೋಗಿದ್ದಾರೆ.

ಬೈಕ್‌ ಮತ್ತು ರಿಕ್ಷಾ ಕಳವು ಮಾಡಿದ್ದೇ ಅಥವಾ ಕಳವು ಮಾಡಿದ ಆರೋಪಿಗಳದ್ದೇ ಎನ್ನುವ ಕುರಿತು ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಕಸಬಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT