ಶನಿವಾರ, ನವೆಂಬರ್ 28, 2020
25 °C

ದೀಪಾವಳಿ ವಿಶೇಷ: ಧನ್ ತೇರಸ್ ಚಿನ್ನ ಖರೀದಿ

ಕೃಷ್ಣಿ ಶಿರೂರ Updated:

ಅಕ್ಷರ ಗಾತ್ರ : | |

Deepavali

ಉತ್ತರ ಕರ್ನಾಟಕದ ಮಂದಿಗೆ ಬಂಗಾರ ಖರೀದಿಗೆ ಅಕ್ಷಯ ತೃತೀಯವೇ ವಿಶೇಷ ದಿನ. ಅಂದು ವಾಣಿಜ್ಯ ನಗರಿಯ ಬಂಗಾರದಂಗಡಿಗಳಲ್ಲಿ ಮಂದಿ ತುಂಬಿ ತುಳುಕುತ್ತಾರೆ. ಬಂಗಾರದೊಡವೆಗಳ ಖರೀದಿಯ ಭರಾಟೆ ಅಷ್ಟೇ ಜೋರಾಗಿರಲಿದೆ. ಅದರ ನಂತರ ಬಂಗಾರದಂಗಡಿಗಳಲ್ಲಿ ಬಂಗಾರದೊಡವೆ, ಬೆಳ್ಳಿ ಸಾಮಗ್ರಿಗಳ ಹೆಚ್ಚು ಖರೀದಿ ಕಾಣಬೇಕೆಂದರೆ ದೀಪಾವಳಿಯ ಧನ್ ತೇರಸ್ (ಧನ ತ್ರಯೋದಶಿ) ದಿನವೇ ಬರಬೇಕು.

ಧನ್ ತೇರಸ್ ಹೆಸರು ಹುಬ್ಬಳ್ಳಿಯ ಮೂಲ ಮಂದಿಗೆ ಅಷ್ಟು ಪರಿಚಯವಿಲ್ಲದಿದ್ದರೂ ಇತ್ತೀಚಿನ ವರ್ಷಗಳಲ್ಲಿ ಪ್ರಸಿದ್ಧಿ ಪಡೆಯುತ್ತಿದೆ. ಅಕ್ಷಯ ತೃತೀಯದಂದು ಏನಾದರೂ ಖರೀದಿಸಿದರೆ ಅದು ಅಕ್ಷಯವಾಗಲಿದೆ ಎಂಬ ಮನೋಭಾವ ಹೇಗೆ ಮನದಲ್ಲಿ ಬೇರುಬಿಟ್ಟಿದೆಯೋ ಹಾಗೇ ಈ ಧನ್ ತೇರಸ್ ದಿನ ಚಿನ್ನ, ಬೆಳ್ಳಿ ಖರೀದಿಸಿದರೆ ಒಳ್ಳೆಯದಾಗಲಿದೆ ಎಂಬ ನಂಬಿಕೆ ನೆಲೆಯೂರಿದೆ.

ಧನ್ ತೇರಸ್ ದೀಪಾವಳಿ ಅಮಾವಾಸ್ಯೆಗೆ ಎರಡು ದಿನಗಳ ಮೊದಲಿಗೆ ಬರುವ ತೃಯೋದಶಿ. ಈ ದಿನ ಉತ್ತರ ಭಾರತ ಹಾಗೂ ದಕ್ಷಿಣ ಭಾರತದಲ್ಲಿ ವಿಶೇಷದಿನ. ಅಲ್ಲಿ ಈ ತೃಯೋದಶಿ ದಿನದಂದು ಚಿನ್ನ, ಬೆಳ್ಳಿಯ ಏನಾದರೂ ವಸ್ತು ಖರೀದಿಸುವ ಸಂಪ್ರದಾಯವಿದೆ. ಹುಬ್ಬಳ್ಳಿ ಸರ್ವಜನಾಂಗೀಯ ಶಾಂತಿಯ ತೋಟ. ಉತ್ತರ ಭಾರತದ ಜನರು, ಜೈನರು ಹಾಗೂ ದಕ್ಷಿಣ ಭಾರತದ ಜನರು ಸಾಕಷ್ಟು ಸಂಖ್ಯೆಯಲ್ಲಿ ಇಲ್ಲಿ ನೆಲೆಕಂಡಿದ್ದರಿಂದ ಅಲ್ಲಿಯ ಆಚರಣೆಯನ್ನು ಇಲ್ಲಿಯೂ ಮುಂದುವರಿಸುತ್ತಿದ್ದಾರೆ. ಧನ್ ತೇರಸ್ ಕೂಡ ಪ್ರಚಲಿತಕ್ಕೆ ಬಂದಿದ್ದು ಅದೇ ಹಿನ್ನೆಲೆಯಲ್ಲಿ.

ಅದರಲ್ಲೂ ಈ ಬಾರಿಯ ಧನ್ ತೇರಸ್‌ಗಾಗಿ ಈಗಾಗಲೇ ಸಾಕಷ್ಟು ಮುಂಗಡ ಬುಕ್ಕಿಂಗ್‌ ಕೂಡ ಆಗಿದೆ ಎನ್ನುತ್ತಾರೆ ಹುಬ್ಬಳ್ಳಿಯ ಬಂಗಾರದಂಗಡಿಯ ಮಾಲೀಕರು. ಕೊರೊನಾ ಕಾರಣದಿಂದ ಏಪ್ರಿಲ್‌, ಮೇ ತಿಂಗಳಲ್ಲಿ ನಡೆಯಬೇಕಿದ್ದ ಮದುವೆಗಳೂ ಡಿಸೆಂಬರ್‌ ತಿಂಗಳಿಗೆ ಮುಂದೂಡಿದೆ. ತುಳಸಿ ವಿವಾಹದ ಮಾರನೇ ದಿನದಿಂದಲೇ ಮದುವೆಗಳು ಹೆಚ್ಚಿನ ಸಂಖ್ಯೆಯಲ್ಲಿ ನಿಶ್ಚಿಯಗೊಂಡಿರುವುದರಿಂದ ಬಂಗಾರ ಖರೀದಿ ಸಹಜವಾಗಿ ಹೆಚ್ಚಿದೆ. ಖರೀದಿಸುವುದು ಹೇಗಾದರೂ ಖರೀದಿಸಲೇಬೇಕು. ಅದನ್ನು ಧನ್ ತೇರಸ್ ದಿನವೇ ಖರೀದಿಸಿದರಾಯಿತು ಎಂಬ ನಿರ್ಧಾರಕ್ಕೆ ಬಂದವರು ಸಾಕಷ್ಟು ಜನರಿದ್ದಾರೆ.

ಅದರಲ್ಲೂ ಮಲಬಾರ್‌ ಗೋಲ್ಡ್‌ ಆ್ಯಂಡ್‌ ಡೈಮಂಡ್‌, ಜೊಯಾಲುಕ್ಕಾಸ್‌, ಕಲ್ಯಾಣ್‌ ನಂತಹ ಮಳಿಗೆಗಳು ಧನ್ ತೇರಸ್ ದಿನಕ್ಕೆ ವಿಶೇಷ ರಿಯಾಯಿತಿಗಳನ್ನು ನೀಡಿ ಗ್ರಾಹಕರನ್ನು ಸೆಳೆದಿದ್ದಾರೆ.

ವಾಣಿಜ್ಯನಗರಿಯಲ್ಲಿ ಸ್ಥಳೀಯರಲ್ಲದೆ, ಸುತ್ತಲಿನ ಗದಗ, ಹಾವೇರಿ, ಬಾಗಲಕೋಟೆ, ವಿಜಯಪುರ, ಶಿರಸಿ, ಯಲ್ಲಾಪುರ, ಅಂಕೋಲಾ, ಕೊಪ್ಪಳ, ಗಂಗಾವತಿ, ಗೋಕರ್ಣದಿಂದಲೂ ಜನರು ಬಂಗಾರದ ಒಡವೆ ಖರೀದಿಗೆ ಬರುತ್ತಿರುವುದರಿಂದ ಬಂಗಾರದ ವ್ಯಾಪಾರ ವಹಿವಾಟು ವೇಗ ಪಡೆದು ಕೊಂಡಿದೆ. ಕೊರೊನಾದ ಆರಂಭದ ದಿನಗಳಲ್ಲಿ ನೆಲಕಚ್ಚಿದ್ದ ವಹಿವಾಟು, ಒಂದೆರಡು ತಿಂಗಳಿಂದ ವೇಗ ಪಡೆದುಕೊಂಡಿದ್ದು, ಈಗ ಇನ್ನಷ್ಟು ಹೆಚ್ಚಲಿದೆ ಎನ್ನುತ್ತಾರೆ ಮಲಬಾರ್‌ ಗೋಲ್ಡ್‌ ಆ್ಯಂಡ್‌ ಡೈಮಂಡ್‌ನ ಹುಬ್ಬಳ್ಳಿ ಶಾಖಾ ಮುಖ್ಯಸ್ಥ ಶಶಾಂಕ ಏಕಬೋಟೆ.

ಧನ್ ತೇರಸ್‌ದಂದು ಬಂಗಾರದ ಖರೀದಿ ಮೂರು ವರ್ಷಗಳಿಂದ ಮುನ್ನೆಲೆಗೆ ಬಂದಿದೆ. ತೃಯೋದಶಿಯಂದು ಬಂಗಾರ ಅಥವಾ ಬೆಳ್ಳಿಯ ವಸ್ತುಗಳನ್ನು ಮನೆಗೆ ಒಯ್ದು ದೇವರ ಮುಂದಿಟ್ಟು ಪೂಜಿಸಿದರೆ ಒಳ್ಳೆಯದಾಗಲಿದೆ ಎಂಬುದು ಆಚರಣೆಯಲ್ಲಿರುವ ನಂಬಿಕೆ ಎಂದು ಅವರು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು