ಭಾನುವಾರ, ನವೆಂಬರ್ 28, 2021
20 °C
ಸಾರ್ವಜನಿಕರ ಆಕ್ರೋಶ, ಇಂಧನ ಮೇಲಿನ ತೆರಿಗೆ ಕಡಿಮೆ ಮಾಡಲು ಆಗ್ರಹ

ಹುಬ್ಬಳ್ಳಿ-ಧಾರವಾಡದಲ್ಲಿ ₹100 ದಾಟಿದ ಡಿಸೇಲ್‌ ದರ: ಸಾರ್ವಜನಿಕರ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ನಗರದಲ್ಲಿ ಪೆಟ್ರೋಲ್‌ ಬಳಿಕ ಈಗ ಡಿಸೇಲ್‌ ದರವೂ ಪ್ರತಿ ಲೀಟರ್‌ಗೆ ₹100 ದಾಟಿದೆ. ಇದಕ್ಕೆ ಸಾರ್ವಜನಿಕರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದು, ಇಂಧನದ ಮೇಲಿನ ತೆರಿಗೆ ಕಡಿಮೆ ಮಾಡುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದ್ದಾರೆ.

ಕಳೆದ ಒಂದು ವಾರದ ಅವಧಿಯಲ್ಲಿ ಡಿಸೇಲ್‌ ನಿತ್ಯ ಸರಾಸರಿ 30ರಿಂದ 35 ಪೈಸೆ ಹೆಚ್ಚಳವಾಗಿದೆ. ಐಒಸಿಎಲ್‌ನಲ್ಲಿ ಭಾನುವಾರ ಒಂದು ಲೀಟರ್ ಪೆಟ್ರೋಲ್‌ ಬೆಲೆ ₹100.16 ಇದ್ದರೆ, ಪೆಟ್ರೋಲ್‌ ಬೆಲೆ ಪ್ರತಿ ಲೀಟರ್‌ಗೆ ₹112.75 ಆಗಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಕೆಲ ದಿನಗಳ ಹಿಂದೆಯೇ ಡಿಸೇಲ್‌ ದರ ಶತಕ ದಾಟಿತ್ತು. ಈಗ ಹುಬ್ಬಳ್ಳಿಯಲ್ಲಿಯೂ ಅದೇ ಬೆಲೆ ದಾಖಲಾಯಿತು.

ಹಾನಗಲ್‌ ಉಪಚುನಾವಣಾ ಹಿನ್ನೆಲೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ನಾಯಕರು ಭಾನುವಾರ ಹುಬ್ಬಳ್ಳಿಯಲ್ಲಿದ್ದರು. ಅವರು ಈ ಕುರಿತು ಪ್ರತಿಕ್ರಿಯೆ ನೀಡಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಈ ಕುರಿತು ಪ್ರಶ್ನಿಸಿದಾಗ ‘ಎಲ್ಲರಿಗೂ ‌ಈಗ ಬಿಸಿ ತಟ್ಟಿತಲ್ಲವೇ; ಬೆಲೆ ಏರಿಕೆ ಪರಿಣಾಮ ಎನೆಂಬುದು ಗೊತ್ತಾಗುತ್ತಿದೆ. ಇಂಧನ ಮೇಲಿನ ಬೆಲೆ ಕಡಿಮೆಯಿದ್ದು, ಅದರ ಮೇಲೆ ವಿಧಿಸಲಾಗುತ್ತಿರುವ ತೆರಿಗೆಯೇ ಹೆಚ್ಚಿದೆ. ಮೊದಲು ಇದನ್ನು ಕಡಿಮೆ ಮಾಡಬೇಕು’ ಎಂದು ಆಗ್ರಹಿಸಿದರು.

ಗೋಕುಲ ರಸ್ತೆಯ ಪೆಟ್ರೋಲ್‌ ಬಂಕ್‌ನಲ್ಲಿ ದ್ವಿಚಕ್ರವಾಹನದಲ್ಲಿ ಬಂದಿದ್ದ ಗೋಕುಲ ಗ್ರಾಮದ ನಾಗೇಶ ಯಲಗುರ್ಕಿ ಎಂಬುವರು ‘ಪೆಟ್ರೋಲ್‌ ಹಾಗೂ ಡಿಸೇಲ್‌ ಬೆಲೆ ಹೀಗೆಯೇ ಹೆಚ್ಚಾಗುತ್ತ ಹೋದರೆ ನಡೆದುಕೊಂಡು ಓಡಾಡುವುದೇ ವಾಸಿ ಎನಿಸುತ್ತದೆ. ದುಡಿದ ಹಣವೆಲ್ಲ ಇಂಧನಕ್ಕಾಗಿಯೇ ಖರ್ಚು ಮಾಡಬೇಕಾದ ಪರಿಸ್ಥಿತಿ ಬಂದಿದೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೆಲೆ ಹೆಚ್ಚಳದ ಕುರಿತು ಜಿಲ್ಲಾ ಪೆಟ್ರೋಲ್‌ ಬಂಕ್‌ ಮಾಲೀಕರ ಸಂಘದ ಅಧ್ಯಕ್ಷ ಶಾಂತರಾಜ ಪೋಳ ಪ್ರತಿಕ್ರಿಯಿಸಿ ‘ಬೆಲೆ ಹೆಚ್ಚಳ ಹಾಗೂ ಇಳಿಕೆ ನಮ್ಮ ಕೈಯಲ್ಲಿ ಇಲ್ಲ. ಆದರೆ, ನಿರಂತರ ಬೆಲೆ ಏರಿಕೆಯಿಂದಾಗಿ ಸಾರ್ವಜನಿಕರು ಪಡಿಪಾಟಿಲು ಪಡುವಂತಾಗಿದೆ. ವಾಹನಗಳಿಗೆ ಇಂಧನ ಹಾಕಿಸಿಕೊಳ್ಳಲು ಬರುವ ಬಹಳಷ್ಟು ಗ್ರಾಹಕರು ನಮ್ಮ ಮುಂದೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು