ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಶಿಗೆ ಟಿಕೆಟ್ ಬೇಡ: ಮಠಾಧೀಶರ ಒತ್ತಾಯ

Published 27 ಮಾರ್ಚ್ 2024, 14:39 IST
Last Updated 27 ಮಾರ್ಚ್ 2024, 14:39 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಬಹುಸಂಖ್ಯಾತ ಲಿಂಗಾಯತ ಮತ್ತು ಇತರ ಸಮಾಜದ ನಾಯಕರನ್ನು ತುಳಿದು, ಅವಮಾನಿಸಿದ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಬದಲು ಬೇರೊಬ್ಬರನ್ನು ಧಾರವಾಡ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಕಣಕ್ಕೆ ಇಳಿಸಬೇಕು’ ಎಂದು ಶಿರಹಟ್ಟಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಆಗ್ರಹಿಸಿದರು.

ಇಲ್ಲಿನ ಮೂರು ಸಾವಿರ ಮಠದಲ್ಲಿ ಬುಧವಾರ ವಿವಿಧ ಮಠಾಧೀಶರ ಚಿಂತನ–ಮಂಥನ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬಿಜೆಪಿ ವರಿಷ್ಠರು ಮಾರ್ಚ್‌ 31ರೊಳಗೆ ಅಭ್ಯರ್ಥಿಯನ್ನು ಬದಲಿಸಬೇಕು. ಇಲ್ಲದಿದ್ದರೆ, ಏಪ್ರಿಲ್ 2ರಂದು ಮತ್ತೆ ಮಠಾಧೀಶರ ಸಭೆ ನಡೆಸಿ, ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

‘ಜೋಶಿ ಅವರ ನಡೆಯಿಂದ ವೀರಶೈವ ಲಿಂಗಾಯತರು, ದಲಿತರು, ಕುರುಬರು ಸೇರಿ ಎಲ್ಲ ಸಮಾಜದವರು ನೊಂದಿದ್ದಾರೆ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ರಾಜಸತ್ತೆಯನ್ನು ತಂದ ಅವರನ್ನು ಬದಲಿಸಬೇಕು. ನಾವು ವ್ಯಕ್ತಿಯ ವ್ಯಕ್ತಿತ್ವ ವಿರೋಧಿಸುತ್ತೇವೆಯೇ ಹೊರತು ಬ್ರಾಹ್ಮಣರು ಸೇರಿ ಯಾವುದೇ ಸಮಾಜದ ವಿರೋಧಿಗಳಲ್ಲ’ ಎಂದು ಹೇಳಿದರು.

‘ಲಿಂಗಾಯತರು ಜೋಶಿ ಅವರ ಬೆನ್ನಿಗೆ ನಿಂತು ನಾಲ್ಕು ಬಾರಿ ಆಯ್ಕೆ ಮಾಡಿದ್ದಾರೆ. ಆ ಉಪಕಾರಕ್ಕೆ ಅವರು ಕ್ಷೇತ್ರ ತ್ಯಾಗ ಮಾಡಬೇಕು. ಲಿಂಗಾಯತರ ಪ್ರಾಬಲ್ಯದ‌ ಕ್ಷೇತ್ರದಲ್ಲಿ ಬ್ರಾಹ್ಮಣರು ಅನಿವಾರ್ಯವಾದರೆ, ಬ್ರಾಹ್ಮಣರ ಪ್ರಾಬಲ್ಯ ಇರುವ ಕ್ಷೇತ್ರದಲ್ಲಿ ಲಿಂಗಾಯತರನ್ನು ನಿಲ್ಲಿಸಿ ಆರಿಸಿ ತರಬೇಕು. ಒಂದು ವೇಳೆ ಲಿಂಗಾಯತರು ಅಲ್ಲಿ ಸೋತರೆ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಬೇಕು’ ಎಂದು ಆಗ್ರಹಿಸಿದರು.

ಯಡಿಯೂರಪ್ಪ ಕೆಳಗಿಳಿಸಲು ಜೋಶಿ ಕಾರಣ:

‘ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಇಳಿಸಿದವರು ಯಾರು ಎಂಬುದು ಇಡೀ ರಾಜ್ಯಕ್ಕೆ ಗೊತ್ತು. ಅವರನ್ನು ಕೆಳಗಿಳಿಸಿ, ಆ ಜಾಗದಲ್ಲಿ ಕೂರಲು ಜಾಕೆಟ್ ಹೊಲಿಸಿಕೊಂಡು ಪ್ರಲ್ಹಾದ ಜೋಶಿ ಸಿದ್ಧರಾಗಿದ್ದರು. ನಮ್ಮ ಹೋರಾಟದಿಂದ ಅವರ ಜಾಕೆಟ್ ಮೂಲೆ ಸೇರಿತು’ ಎಂದು ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

‘ಪಕ್ಷ ಸಂಘಟನೆ ಸೇರಿ ಯಾವುದರಲ್ಲೂ ಅವರ ಪಾತ್ರ ಇಲ್ಲ. ಆದರೆ, ಸಮಾಜದ ಹಿರಿಯ ನಾಯಕ ಆಡಳಿತ ನಡೆಸುವಾಗ ಅವರನ್ನು ಕೆಳಗಿಳಿಸಲು ತಮ್ಮ ಶಕ್ತಿ, ಯುಕ್ತಿ ಪ್ರಯೋಗ ಮಾಡಿ, ಜಾತೀಯತೆ ಮೆರೆದರು’ ಎಂದು ದೂರಿದರು.

ಹುಬ್ಬಳ್ಳಿಯಲ್ಲಿ ಬುಧವಾರ ಮಠಾದೀಶರ ಚಿಂತನ–ಮಂಥನ ಸಭೆಯ ಬಳಿಕ ಸುದ್ದಿಗಾರರ ಜೊತೆ ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿದರು
–ಪ್ರಜಾವಾಣಿ ಚಿತ್ರ
ಹುಬ್ಬಳ್ಳಿಯಲ್ಲಿ ಬುಧವಾರ ಮಠಾದೀಶರ ಚಿಂತನ–ಮಂಥನ ಸಭೆಯ ಬಳಿಕ ಸುದ್ದಿಗಾರರ ಜೊತೆ ಶಿರಹಟ್ಟಿಯ ಫಕೀರ ದಿಂಗಾಲೇಶ್ವರ ಸ್ವಾಮೀಜಿ ಮಾತನಾಡಿದರು –ಪ್ರಜಾವಾಣಿ ಚಿತ್ರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT