ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಕಲಿ ಖಾತೆಗೆ ಶಿಷ್ಯವೇತನ; ಇಬ್ಬರ ಬಂಧನ

Last Updated 2 ಆಗಸ್ಟ್ 2021, 2:53 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿಯ ಹೆಗ್ಗೇರಿ ಆಯುರ್ವೇದ ಮಹಾವಿದ್ಯಾಲಯದ ಹೆಸರಲ್ಲಿ ನಕಲಿ ಬ್ಯಾಂಕ್‌ ಖಾತೆ ತೆರೆದು, ಅದಕ್ಕೆ ₹ 24 ಲಕ್ಷ ವಿದ್ಯಾರ್ಥಿ ವೇತನ ಜಮಾ ಮಾಡಿ ವಂಚಿಸಿರುವ ಆರೋಪಿಗಳನ್ನು ಹಳೇಹುಬ್ಬಳ್ಳಿ ಪೊಲೀಸರು ಬಂಧಿಸಿದ್ದಾರೆ.

ಧಾರವಾಡದ ಸಾಧನಕೇರಿ ನಿವಾಸಿ, ಕಾಲೇಜಿನ ಕ್ಲರ್ಕ್‌ ಜಗದೀಶ ಮೈತ್ರಿ ಮತ್ತು ಕಾಲೇಜಿನ ಹಳೆಯ ವಿದ್ಯಾರ್ಥಿ, ಹಳೇಹುಬ್ಬಳ್ಳಿ ಸಹದೇವನಗರದ ರಾಚಪ್ಪ ನಗರಕರ ಬಂಧಿತ ಆರೋಪಿಗಳು. ಅವರಿಂದ ನಗದು ₹ 2.95 ಲಕ್ಷ ವಸೂಲಿ ಮಾಡಲಾಗಿದೆ.

ಕಂಪ್ಯೂಟರ್‌ ಆಪರೇಟ್‌ ಆಗಿರುವ ರಾಚಪ್ಪ, ಕಾಲೇಜು ಹೆಸರಲ್ಲಿ ಕೆಲವು ನಕಲಿ ದಾಖಲೆ ಸೃಷ್ಟಿಸಿದ್ದ. ಜಗದೀಶ ಜೊತೆ ಸೇರಿ ದೇಶಪಾಂಡೆ ನಗರದಲ್ಲಿರುವ ಬ್ಯಾಂಕಿನಲ್ಲಿ ಕಾಲೇಜು ಹೆಸರಲ್ಲಿ ನಕಲಿ ಖಾತೆ ತೆರೆದಿದ್ದ. ನಂತರ ಇಬ್ಬರೂ ಸೇರಿ 2017ರ ಅವಧಿಯಲ್ಲಿ ಶಿಷ್ಯವೇತನವನ್ನು ಆ ಖಾತೆಗೆ ಜಮಾ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕಾಲೇಜಿನ ಕಡತದಲ್ಲಿ 2017ರ ಅವಧಿಯ ಶಿಷ್ಯವೇತನದ ಮಾಹಿತಿಯಿಲ್ಲದ ಕಾರಣ ಪ್ರಕರಣ ಬೆಳಕಿಗೆ ಬಂದಿತ್ತು. ಕಾಲೇಜು ಪ್ರಾಚಾರ್ಯ ಡಾ. ಪ್ರಶಾಂತ ಎ.ಎಸ್‌. ಅವರು ಪ್ರಕರಣ ದಾಖಲಿಸಿದ್ದರು.

ಚಿನ್ನಾಭರಣ ಜೊತೆ ಇಬ್ಬರ ಬಂಧನ: ನಗರದ ವಿವಿಧ ಪೊಲೀಸ್‌ ಠಾಣೆ ವ್ಯಾಪ್ತಿಯ ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದ ಇಬ್ಬರು ಆರೋಪಿಗಳನ್ನು ಕೇಶ್ವಾಪುರ ಠಾಣೆ ಪೊಲೀಸರು ಬಂಧಿಸಿ, ಎರಡು ಬೈಕ್‌, ಚಿನ್ನಾಭರಣ ಮತ್ತು ಮೊಬೈಲ್‌ ಸೇರಿ ಒಟ್ಟು ₹ 2.38 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಚಾಲುಕ್ಯನಗರದ ನೆಹಮಿಯಾ ದಾರ್ಲಾ ಮತ್ತು ಗದಗ ರಸ್ತೆಯ ಸಿಮೆಂಟ್‌ ಚಾಳದ ಪ್ರಭುರಾಜ ಕಲ್ಲೂರು ಬಂಧಿತರು. ಇವರು ಗದಗ ರಸ್ತೆಯಲ್ಲಿ ಅನುಮಾನಾಸ್ಪದವಾಗಿ ತಿರುಗಾಡುತ್ತಿದ್ದಾಗ ಇನ್‌ಸ್ಪೆಕ್ಟರ್‌ ಜಗದೀಶ ಹಂಚಿನಾಳ ನೇತೃತ್ವದ ತಂಡ ವಿಚಾರಿಸಿದಾಗ, ಕಳವು ಪ್ರಕರಣದಲ್ಲಿ ಭಾಗಿಯಾಗಿದ್ದು ಬೆಳಕಿಗೆ ಬಂದಿದೆ.

ಆನ್‌ಲೈನ್‌ನಲ್ಲಿ ₹ 62 ಸಾವಿರ ವಂಚನೆ: ಕ್ರೆಡಿಟ್‌ ಕಾರ್ಡ್‌ನಿಂದ ಕಡಿತವಾದ ಹಣ ಮರಳಿಸುವುದಾಗಿ ಅಕ್ಷಯ ಕಾಲೊನಿಯ ವಿ.ಬಿ. ಗುಣಾರಿ ಅವರ ಮೊಬೈಲ್‌ಗೆ ಕರೆ ಮಾಡಿದ ವಂಚಕಿ, ಅವರಿಂದ ಮಾಹಿತಿ ಪಡೆದು ₹62 ಸಾವಿರ ಆನ್‌ಲೈನ್‌ನಲ್ಲಿ ವರ್ಗಾಯಿಸಿಕೊಂಡಿದ್ದಾಳೆ.

ಗುಣಾರಿ ಅವರ ಕಾರ್ಡ್‌ನಿಂದ ₹ 2,499 ಕಡಿತವಾಗಿತ್ತು. ಕ್ರೆಡಿಟ್‌ ಕಾರ್ಡ್‌ ಕಚೇರಿ ಸಿಬ್ಬಂದಿ ಎಂದು ಪರಿಚಯಿಸಿಕೊಂಡ ಮಹಿಳೆ, ಹಣ ಮರಳಿಸುವುದಾಗಿ ನಂಬಿಸಿ ಅವರಿಂದ ಕಾರ್ಡ್‌ ಹಾಗೂ ಬ್ಯಾಂಕ್‌ ಖಾತೆ ವಿವರ ಪಡೆದಿದ್ದಾಳೆ. ನಂತರ ಮೊಬೈಲ್‌ಗೆ ಬಂದ ಒಟಿಪಿ ಪಡೆದು ಹಣ ವರ್ಗಾಯಿಸಿಕೊಂಡಿದ್ದಾಳೆ. ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜೂಜು; ₹ 49,500 ವಶ: ಕೇಶ್ವಾಪುರ ಉದಯನಗರ ಮುಖ್ಯ ರಸ್ತೆಯ ಎರಡನೇ ಕ್ರಾಸ್‌ನ ಕಲಬುರ್ಗಿ ಅಪಾರ್ಟ್‌ಮೆಂಟ್‌ ಹಿಂಭಾಗ ಜೂಜಾಡುತ್ತಿದ್ದ ವ್ಯಕ್ತಿಯನ್ನು ಕೇಶ್ವಾಪುರ ಠಾಣೆ ಪೊಲೀಸರು ಬಂಧಿಸಿ, ಮೊಬೈಲ್‌ ಹಾಗೂ ₹ 49,500 ನಗದು ವಶಪಡಿಸಿಕೊಂಡಿದ್ದಾರೆ. ಮಯೂರ್‌ ಎಸ್ಟೇಟ್‌ ನಿವಾಸಿ ಕಿರಣ ಗುಜ್ಜರ ಬಂಧಿತ ಆರೋಪಿ. ಪ್ರಕರಣ ದಾಖಲಾಗಿದೆ.

ಅರ್ಚಕರ ಮನೆಯಿಂದ ಚಿನ್ನಾಭರಣ ಕಳವು: ಹುಬ್ಬಳ್ಳಿಯ ಕಿಲ್ಲಾದ ಅರ್ಚಕ ಪ್ರಶಾಂತ ಬಂದಿಸ್ತ ಅವರ ಮನೆ ಬಾಗಿಲು ಮುರಿದು ₹ 7.81 ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ನಗದು ಕಳವು ಮಾಡಲಾಗಿದೆ.

ಪ್ರಶಾಂತ ಅವರ ಮನೆ ಟೆರೆಸ್‌ ಹತ್ತಿ, ತಗಡಿನ ಬಾಗಿಲನ್ನು ಮುರಿದ ಕಳ್ಳರು ಒಂದನೇ ಮಹಡಿಯಲ್ಲಿರುವ ಕೊಠಡಿ ಬಾಗಿಲು ಮುರಿದಿದ್ದಾರೆ. ಅಲ್ಮೇರದಲ್ಲಿದ್ದ 21 ಗ್ರಾಂ ಚಿನ್ನಾಭರಣ ಹಾಗೂ ₹ 15 ಸಾವಿರ ನಗದು ಸೇರಿ ಒಟ್ಟು ₹ 7.81 ಲಕ್ಷ ಮೌಲ್ಯದ ನಗದು, ಆಭರಣ ದೋಚಿದ್ದಾರೆ. ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರೈಲ್ವೆ ಉದ್ಯೋಗಿಗೆ ವಂಚನೆ: ಹುಬ್ಬಳ್ಳಿಯ ಮೃತ್ಯುಂಜಯ ಕಾಲೊನಿಯ ರೈಲ್ವೆ ಉದ್ಯೋಗಿ ಮಹಾವೀರ ತಿಗಡೊಳ್ಳಿ ಅವರಿಗೆ ಕ್ರೆಡಿಟ್‌ ಕಾರ್ಡ್‌ ಮಿತಿ ಹೆಚ್ಚಳ ಮಾಡುವುದಾಗಿ ಕರೆ ಮಾಡಿದ ವಂಚಕಿ, ಅವರಿಂದ ಬ್ಯಾಂಕ್‌ ಮಾಹಿತಿ ಪಡೆದು ₹81 ಸಾವಿರ ಆನ್‌ಲೈನ್‌ನಲ್ಲಿ ವರ್ಗಾಯಿಸಿಕೊಂಡಿದ್ದಾಳೆ. ಹುಬ್ಬಳ್ಳಿ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಡಿಕ್ಕಿ: ಪಾದಾಚಾರಿ ಸಾವು: ನವನಗರದ ವೀರಶೈವ ಸಮುದಾಯದ ಬಳಿ ರಸ್ತೆ ದಾಡುತ್ತಿದ್ದ ಕೆಎಚ್‌ಬಿ ಕಾಲೊನಿಯ ರವಿ ಕಮತಗರ ಅವರಿಗೆ ಕ್ಯಾಂಟರ್‌ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ನವನಗರದ ಗುಜರಿ ಅಂಗಡಿಯಿಂದ ವೀರಶೈವ ಸಮುದಾಯ ಭವನದ ಕಡೆಗೆ ರವಿ ನಡೆದುಕೊಂಡು ಹೋಗುತ್ತಿದ್ದಾಗ, ಕರ್ನಾಟಕ ವೃತ್ತದಿಂದ ಬಂದ ಕ್ಯಾಂಟರ್‌ ಡಿಕ್ಕಿ ಹೊಡೆದಿದೆ. ನವನಗರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿನ್ನಾಭರಣ ಕಳವು: ಹಳೇಹುಬ್ಬಳ್ಳಿ ಗೌಸಿಯಾ ನಗರದ ಕಮಲವ್ವ ಬಾವರ ಅವರ ಮನೆ ಬಾಗಿಲು ಮುರಿದು, ಅಲ್ಮೇರಾದಲ್ಲಿದ್ದ ₹ 34 ಸಾವಿರ ಮೌಲ್ಯದ ಚಿನ್ನಾಭರಣ ಕಳವು ಮಾಡಲಾಗಿದೆ. ಕಸಬಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT