ಮಂಗಳವಾರ, 23 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಹುಬ್ಬಳ್ಳಿ | ಸಾರ್ವಜನಿಕ ಸೌಕರ್ಯಕ್ಕೆ ನಿರ್ಲಕ್ಷ್ಯ

ಜನರ ದೂರುಗಳಿಗಿಲ್ಲ ಸ್ಪಂದನೆ: ಸಮಸ್ಯೆ ತೆರೆದಿಡಲು ಹಿಂಜರಿಕೆ
Published 26 ಜೂನ್ 2024, 4:33 IST
Last Updated 26 ಜೂನ್ 2024, 4:33 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಎಂಟು ದಿನಗಳಿಗೊಮ್ಮೆ ಬರುವ ಕುಡಿಯುವ ನೀರು, ಚರಂಡಿ ತುಂಬಿ ರಸ್ತೆ ಮೇಲೆ ಹರಿಯುವ ಕೊಳಚೆ, ಗಿಡ–ಕಂಟಿ ಬೆಳೆದು ಕಸದಿಂದ ತುಂಬಿ ತಿಪ್ಪೆಗಳಾದ ಖಾಲಿ ನಿವೇಶನಗಳು, ಕಿರಿದಾದ ರಸ್ತೆಗಳು, ರಸ್ತೆಯನ್ನು ಆಕ್ರಮಿಸಿಕೊಳ್ಳುವ ಬೀದಿ ನಾಯಿಗಳು...

ಹೀಗೆ ಸಾಲು ಸಾಲು ಸಮಸ್ಯೆಗಳನ್ನು ತೆರೆದಿಡುತ್ತವೆ ಉಣಕಲ್‌ನ ಸಾಯಿನಗರ ರಸ್ತೆ ಮಗ್ಗುಲಿಗಿರುವ ಚಲವಾದಿ ಓಣಿ, ಕುರುಬರ ಓಣಿ, ಬಾದಾಮಿ ಓಣಿ. ಸ್ಮಾರ್ಟ್ ಸಿಟಿ ಒಡಲಾಳದಲ್ಲಿ ಅಭಿವೃದ್ಧಿ ಕುಂಠಿತವಾಗಿರುವ ಈ ಓಣಿಗಳನ್ನು ಹೊಕ್ಕರೆ ಕೊಳಚೆ ಪ್ರದೇಶಕ್ಕೆ ಬಂದಂತೆ ಭಾಸವಾಗುತ್ತದೆ.

‘ನಾಲ್ಕು ದಿನಗಳಿಗಿಂತ ಹೆಚ್ಚು ಅವಧಿಗೆ ನೀರು ಹಿಡಿದಿಟ್ಟರೆ ಡೆಂಗಿ ಹರಡುವ ಸೊಳ್ಳೆ ಉತ್ಪತ್ತಿ ಆಗುತ್ತವೆ ಎಂದು ಜಾಗೃತಿ ಮೂಡಿಸಲಾಗುತ್ತಿದೆ. ಆದರೆ ಮಹಾನಗರ ಪಾಲಿಕೆಯು ಎಂಟು ದಿನಗಳಿಗೊಮ್ಮೆ ನೀರು ಬಿಡುವುದರಿಂದ ನೀರು ಹಿಡಿದಿಟ್ಟುಕೊಳ್ಳುವುದು ನಮಗೆ ಅನಿವಾರ್ಯ’ ಎನ್ನುತ್ತಾರೆ ವಾರ್ಡ್ ಸಂಖ್ಯೆ 37ರ ಚಲವಾದಿ ಓಣಿ ನಿವಾಸಿ, ಕರ್ನಾಟಕ ರಕ್ಷಣಾ ವೇದಿಕೆ ಸಂಚಾಲಕ ಅಶೋಕ ಹಾದಿಮನಿ.

‘ಖಾಲಿ ನಿವೇಶನಗಳೆಲ್ಲ ಕಸದ ಗುಪ್ಪೆಗಳಾಗಿ ಮಾರ್ಪಟ್ಟಿವೆ. ಆ ಜಾಗದಲ್ಲಿ ಹಂದಿಗಳೂ ವಾಸಿಸುತ್ತವೆ. ಮಾಲೀಕರೂ ಸ್ವಚ್ಛಗೊಳಿಸುತ್ತಿಲ್ಲ, ಪಾಲಿಕೆಯಿಂದಲೇ ಸ್ವಚ್ಛ ಮಾಡುತ್ತೇವೆ ಎನ್ನುತ್ತಾರೆ, ಆದರೆ ಅದೂ ಆಗುತ್ತಿಲ್ಲ. ದೂರು ನೀಡಿದರೂ ಸ್ವೀಕರಿಸುತ್ತಿಲ್ಲ. ಬೀದಿ ನಾಯಿಗಳನ್ನು ಸ್ಥಳಾಂತರಿಸುವ, ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಯನ್ನೂ ಮಾಡುತ್ತಿಲ್ಲ. ರಸ್ತೆಗಳೆಲ್ಲ ಚಿಕ್ಕದಾಗಿದ್ದು, ಎರಡು ವಾಹನಗಳು ಎದುರು–ಬದುರು ಬಂದರೆ ದಾಟಿ ಹೋಗುವುದು ಕಷ್ಟ’ ಎಂದು ಅವರು ತಿಳಿಸಿದರು.

ಕಿಮ್ಸ್ ಆಸ್ಪತ್ರೆಯ 3 ಕಿ.ಮೀ. ವ್ಯಾಪ್ತಿಯಲ್ಲಿ ಮತ್ತೆ ಸರ್ಕಾರಿ ಆಸ್ಪತ್ರೆ ಸ್ಥಾಪಿಸಲು ಸರ್ಕಾರದ ನಿಯಮದಲ್ಲಿ ಅವಕಾಶವಿಲ್ಲ. ಈ ಸಂಬಂಧ ಈಗಾಗಲೇ ಪ್ರಯತ್ನ ನಡೆಸಿ ಕೈಚೆಲ್ಲಿದ್ದೇವೆ.
ಉಮೇಶಗೌಡ ಕೌಜಗೇರಿ, ಕಾರ್ಪೊರೇಟರ್ ವಾರ್ಡ್ 37

ಅಧಿಕಾರಿಗಳು, ಜನಪ್ರತಿನಿಧಿಗಳು ನಮ್ಮ ಸಮಸ್ಯೆಯನ್ನು ಪರಿಹರಿಸುತ್ತಿಲ್ಲ ಎಂದು ಅವರು ಅಸಮಾಧಾನ ಹೊರಹಾಕಿದರು. ಕೆಲವರು, ಇವೆಲ್ಲ ಸೂಕ್ಷ್ಮ ವಿಚಾರ; ಬಾಯಿಬಿಟ್ಟರೆ ತೊಂದರೆ ಆಗುತ್ತದೆ ಎಂದು ಸಮಸ್ಯೆಯನ್ನು ತೆರೆದಿಡಲೂ ಹಿಂಜರಿದರು.

‘ನಿರಂತರ ನೀರು ಯೋಜನೆ ಕಾಮಗಾರಿ ಪ್ರಗತಿಯಲ್ಲಿದೆ. ಸಾಯಿನಗರ ರಸ್ತೆ ವಿಸ್ತರಣೆಗೆ ಭೂಮಿ ವಶಪಡಿಸಿಕೊಳ್ಳುವ ಕಾರ್ಯ ಸ್ವಲ್ಪ ನಿಧಾನಗತಿಯಲ್ಲಿದೆ. ಶೀಘ್ರವೇ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ವಾರ್ಡ್ 37ರ ಕಾರ್ಪೊರೇಟರ್ ಉಮೇಶಗೌಡ ಕೌಜಗೇರಿ ತಿಳಿಸಿದರು.

ಹುಬ್ಬಳ್ಳಿಯ ಉಣಕಲ್‌ನ ಚಲವಾದಿ ಓಣಿಯ ಖಾಲಿ ನಿವೇಶನವೊಂದರಲ್ಲಿ ಗಿಡ ಬೆಳೆದಿದೆ –ಪ್ರಜಾವಾಣಿ ಚಿತ್ರ: ಗುರು ಹಬೀಬ

ಹುಬ್ಬಳ್ಳಿಯ ಉಣಕಲ್‌ನ ಚಲವಾದಿ ಓಣಿಯ ಖಾಲಿ ನಿವೇಶನವೊಂದರಲ್ಲಿ ಗಿಡ ಬೆಳೆದಿದೆ –ಪ್ರಜಾವಾಣಿ ಚಿತ್ರ: ಗುರು ಹಬೀಬ

ಹುಬ್ಬಳ್ಳಿಯ ಉಣಕಲ್‌ನ ಸಾಯಿನಗರ ರಸ್ತೆಯ ಒಂದು ಭಾಗ ಕುಸಿದಿದ್ದು ವಾಹನ ಸಂಚಾರಕ್ಕೆ ಆತಂಕ ಉಂಟಾಗಿದೆ –ಪ್ರಜಾವಾಣಿ ಚಿತ್ರ: ಗುರು ಹಬೀಬ

ಹುಬ್ಬಳ್ಳಿಯ ಉಣಕಲ್‌ನ ಸಾಯಿನಗರ ರಸ್ತೆಯ ಒಂದು ಭಾಗ ಕುಸಿದಿದ್ದು ವಾಹನ ಸಂಚಾರಕ್ಕೆ ಆತಂಕ ಉಂಟಾಗಿದೆ –ಪ್ರಜಾವಾಣಿ ಚಿತ್ರ: ಗುರು ಹಬೀಬ

‘ನೀರು ಬಿಡಲು ಸಮಯ ನಿಗದಿಯಿಲ್ಲ’

ಕುರುಬರ ಓಣಿಯಲ್ಲಿ 4–5 ದಿನಕ್ಕೊಮ್ಮೆ ಕುಡಿಯುವ ನೀರು ಪೂರೈಕೆ ಆಗುತ್ತದೆ. ಆದರೆ ಅದಕ್ಕೊಂದು ನಿಗದಿತ ಸಮಯ ಇಲ್ಲದಿರುವುದರಿಂದ ಸಾರ್ವಜನಿಕರಿಗೆ ಸಮಸ್ಯೆ ಉಂಟಾಗಿದೆ. ‘ಮನೆಯ ಹೆಂಗಸರು ಹಾಗೂ ನಾವು ಕೆಲಸಕ್ಕಾಗಿ ಹೊರಗಡೆ ಹೋಗುತ್ತೇವೆ. ಯಾವ ಯಾವುದೋ ಸಮಯಕ್ಕೆ ನೀರು ಬರುತ್ತದೆ. ಅದೂ ಹೆಚ್ಚು ಹೊತ್ತು ಬಿಡುವುದಿಲ್ಲ. ಒಂದು ಸಮಯ ನಿಗದಿ ಮಾಡಿ ನೀರು ಪೂರೈಕೆ ಮಾಡಿದರೆ ನಾವೂ ಆ ಸಮಯಕ್ಕೆ ಸರಿಯಾಗಿ ಮನೆಯಲ್ಲಿದ್ದು ತುಂಬಿಸಿಕೊಳ್ಳಬಹುದು. ನೀರು ಬರುವುದನ್ನೇ ಕಾಯುತ್ತ ಮನೆಯಲ್ಲಿ ಕೂರುವುದು ಸಾಧ್ಯವಿಲ್ಲ’ ಎಂದು ಚಲವಾದಿ ಓಣಿಯ ಮಂಜುನಾಥ ಹೇಳಿದರು.

‘ಒಳ್ಳೆಯ ಸಿಮೆಂಟ್ ರಸ್ತೆ ಮಾಡಿದ್ದಾರೆ. ಆದರೆ ನೀರಿನ ಪೈಪ್ ಹಾಕಲು ಆಗಾಗ ಅಗೆಯುತ್ತಲೇ ಇರುತ್ತಾರೆ. ಸಾಯಿನಗರ ರಸ್ತೆಯು ಹೆಚ್ಚು ಜನಸಂಚಾರ ಇರುವ ರಸ್ತೆ. ಆದರೆ ಬೀದಿದೀಪಗಳೇ ಸರಿಯಾಗಿಲ್ಲ. ನಮ್ಮ ಭಾಗಕ್ಕೆ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವೂ ಇಲ್ಲ. ಜನಪ್ರತಿನಿಧಿಗಳು ನಮ್ಮ ಬಗೆಗೆ ಏನು ಯೋಚಿಸುತ್ತಿದ್ದಾರೆ ಎಂಬುದೇ ಅರ್ಥವಾಗುತ್ತಿಲ್ಲ’ ಎಂದು ಅಸಮಾಧಾನ ಹೊರಹಾಕಿದರು ಅವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT