ಶನಿವಾರ, ಜೂನ್ 12, 2021
22 °C
ಬೆಳಿಗ್ಗೆ 6ರಿಂದ 8ರ ತನಕ ಮಾತ್ರ ಹಾಲು, ಹಣ್ಣು ಖರೀದಿಗೆ ಅವಕಾಶ

ಸೋಂಕು ಪ್ರಮಾಣ ಹೆಚ್ಚಳ: 22ರಿಂದ ಎರಡು ದಿನ ಪೂರ್ಣ ಬಂದ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಕೋವಿಡ್‌ ಸೋಂಕಿತರ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮೇ 22ರಿಂದ ಎರಡು ದಿನ ಸಂಪೂರ್ಣ ಲಾಕ್‌ಡೌನ್‌ ಘೋಷಣೆ ಮಾಡಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಗುರುವಾರ ಆದೇಶ ಹೊರಡಿಸಿದ್ದಾರೆ.

22ರಂದು ಬೆಳಿಗ್ಗೆ 6 ಗಂಟೆಯಿಂದ 24ರ ಬೆಳಿಗ್ಗೆ 6 ಗಂಟೆ ತನಕ ಈ ಆದೇಶ ಜಾರಿಯಲ್ಲಿರಲಿದೆ. ಈ ಅವಧಿಯಲ್ಲಿ ವೈದ್ಯಕೀಯ ತುರ್ತು ಸೌಲಭ್ಯ ಹೊರತುಪಡಿಸಿ ಉಳಿದ ಎಲ್ಲವನ್ನೂ ಬಂದ್‌ ಮಾಡಬೇಕು. ಹಣ್ಣು–ತರಕಾರಿ ಮತ್ತು ಹಾಲು ಮಾರಾಟ ಕೇಂದ್ರಗಳಿಗೆ ಬೆಳಿಗ್ಗೆ 6ರಿಂದ 8 ಗಂಟೆ ತನಕ ಮಾತ್ರ ಅವಕಾಶ ಕಲ್ಪಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ವಿಸ್ತರಣೆ ಸಾಧ್ಯತೆ: ಎರಡು ದಿನಗಳ ಪರಿಸ್ಥಿತಿ ನೋಡಿಕೊಂಡ ಬಳಿಕ ಲಾಕ್‌ಡೌನ್‌ ವಿಸ್ತರಿಸುವ ಕುರಿತು ಮುಂದಿನ ತೀರ್ಮಾನ ಕೈಗೊಳ್ಳಲಾಗುತ್ತದೆ. 

ಈ  ಕುರಿತು ಚರ್ಚಿಸಲು ಗುರುವಾರ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಅವರ ಅಧ್ಯಕ್ಷತೆಯಲ್ಲಿ ಎಪಿಎಂಸಿ ಪ್ರತಿನಿಧಿಗಳು, ಉದ್ದಿಮೆದಾದರು, ವಿವಿಧ ವಾಣಿಜ್ಯ ಸಂಘಟನೆಗಳ ಪ್ರಮುಖರ ಸಭೆ ಕರೆಯಲಾಗಿತ್ತು. ಈ ವೇಳೆ ಅನೇಕರು ಲಾಕ್‌ಡೌನ್‌ ವಿಸ್ತರಣೆ ಸುರಕ್ಷಿತ ಮಾರ್ಗ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು.

ಸಭೆಯ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಪ್ರಲ್ಹಾದ ಜೋಶಿ ‘ಸಭೆಯಲ್ಲಿ ಬಹುತೇಕರು ಕಠಿಣ ಲಾಕ್‌ಡೌನ್‌ಗೆ ಒಲವು ತೋರಿದ್ದಾರೆ. ಸೋಂಕು ಹರಡುವ ಸರಪಳಿ ಕಳಚಲು ಲಾಕ್‌ಡೌನ್‌ ಅಗತ್ಯ ಎಂದಿದ್ದಾರೆ. ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವ್ ದರ ಹೆಚ್ಚಾಗುತ್ತಿದೆ. ಉದ್ದಿಮೆ ಹಾಗೂ ವ್ಯಾಪಾರದ ಸ್ಥಳಗಳಲ್ಲಿ ಕೋವಿಡ್ ವೇಗವಾಗಿ ಹರಡುತ್ತಿರುವ ಕಾರಣ ಬಹಳಷ್ಟು ಜನ ಆತಂಕಕ್ಕೆ ಒಳಗಾಗಿದ್ದಾರೆ. ಕಪ್ಪು ಶಿಲೀಂಧ್ರ ಬಹಳ ದೊಡ್ಡ ಪ್ರಮಾಣದಲ್ಲಿ ಕಂಡು ಬರುತ್ತಿರುವುದು ಆತಂಕಕಾರಿ. ಇದನ್ನು ಹೇಗೆ ನಿರ್ವಹಿಸಬೇಕು ಎಂಬುದರ ಕುರಿತು ಚರ್ಚಿಸಲಾಗಿದೆ’ ಎಂದು ಹೇಳಿದರು.

‘ಕಪ್ಪು ಶಿಲೀಂಧ್ರ ರೋಗ ಮೊದಲು ಸಣ್ಣ ಪ್ರಮಾಣದಲ್ಲಿ ಇತ್ತು‌. ಈಗ ಈ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಔಷಧಗಳ ಕೊರತೆಯಾಗಿದೆ. ಔಷಧ ತಯಾರಿಕಾ ಕಂಪನಿಗಳು ಇಷ್ಟು ಪ್ರಮಾಣದಲ್ಲಿ ರೋಗ ಕಂಡು ಬರುಬಹುದು ಎಂದು ಅಂದಾಜು ಸಹ ಮಾಡಿರಲಿಲ್ಲ. ಅಗತ್ಯ ಔಷಧಗಳನ್ನು ತ್ವರಿತವಾಗಿ ಉತ್ಪಾದಿಸಲು, ಆಮದು ಮಾಡಿಕೊಳ್ಳಲು ಪ್ರಯತ್ನ ಮಾಡಲಾಗುತ್ತಿದೆ. ಹಂತ ಹಂತವಾಗಿ ಔಷಧ ಒದಗಿಸಲಾಗುವುದು’ ಎಂದರು.

ಶಾಸಕರಾದ ಶಂಕರಪಾಟೀಲ ಮುನೇನಕೊಪ್ಪ, ಅರವಿಂದ ಬೆಲ್ಲದ, ಪ್ರದೀಪ ಶೆಟ್ಟರ್, ಹುಡಾ ಅಧ್ಯಕ್ಷ ನಾಗೇಶ್ ಕಲಬುರ್ಗಿ, ಜಿಲ್ಲಾಧಿಕಾರಿ ನಿತೇಶ್ ಪಾಟೀಲ, ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಲಾಬೂರಾಮ್, ಜಿಲ್ಲಾ ಪಂಚಾಯ್ತಿ ಸಿಇಒ ಬಿ.ಸುಶೀಲಾ, ಪಾಲಿಕೆ ಆಯುಕ್ತ ಸುರೇಶ ಇಟ್ನಾಳ, ಉಪವಿಭಾಗಾಧಿಕಾರಿ ಗೋಪಾಲಕೃಷ್ಣ, ಹುಬ್ಬಳ್ಳಿ ತಹಶೀಲ್ದಾರ್ ಶಶಿಧರ ಮಾಡ್ಯಾಳ ಪಾಲ್ಗೊಂಡಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು