ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭವಿಷ್ಯದೊಂದಿಗೆ ಚೆಲ್ಲಾಟವಾಡಬೇಡಿ: ಪ್ರತಿಭಟನಾನಿರತ ವಿದ್ಯಾರ್ಥಿಗಳ ಆಕ್ರೋಶ

ಕಾನೂನು ವಿಶ್ವವಿದ್ಯಾಲಯ: ಪ್ರತಿಭಟನಾನಿರತ ವಿದ್ಯಾರ್ಥಿಗಳ ಆಕ್ರೋಶ
Last Updated 10 ಡಿಸೆಂಬರ್ 2021, 3:01 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ನಮ್ಮ ಭವಿಷ್ಯದೊಂದಿಗೆ ದಯವಿಟ್ಟು ಚೆಲ್ಲಾಟವಾಡಬೇಡಿ...’

–ಪ್ರಸಕ್ತ ಶೈಕ್ಷಣಿಕ ವರ್ಷದ 3 ಮತ್ತು 5ನೇ ಸೆಮಿಸ್ಟರ್‌ ಕಾನೂನು ತರಗತಿಗಳನ್ನು ಕೂಡಲೇ ಆರಂಭಿಸಬೇಕು ಹಾಗೂ ಭೌತಿಕ ಪರೀಕ್ಷೆ ಬದಲು ಅಸೈನ್ಮೆಂಟ್ ಮಾದರಿಯಲ್ಲಿ ಪರೀಕ್ಷೆ ನಡೆಸಬೇಕು ಎಂದು ಆಗ್ರಹಿಸಿ, ಪ್ರತಿಭಟನೆ ನಡೆಸುತ್ತಿರುವ ಕಾನೂನು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಅಳಲು ಇದು.

ತಮ್ಮ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ವಿದ್ಯಾರ್ಥಿಗಳು ಕೈಗೊಂಡಿರುವ ಪ್ರತಿಭಟನೆ ಗುರುವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟದ (ಎನ್‌ಎಸ್‌ಯುಐ) ನೇತೃತ್ವದಲ್ಲಿ ಅಹೋರಾತ್ರಿ ಪ್ರತಿಭಟನೆ ಆರಂಭವಾಗಿದೆ. ಬೆಂಗಳೂರು, ಮೈಸೂರು, ತುಮಕೂರು, ಚಿತ್ರದುರ್ಗ ಸೇರಿದಂತೆ ವಿವಿಧ ಜಿಲ್ಲೆಗಳಿಂದಲೂ ವಿದ್ಯಾರ್ಥಿಗಳ ಬಂದು ಪ್ರತಿಭಟನೆಯಲ್ಲಿ ಸೇರಿಸಿಕೊಂಡಿದ್ದಾರೆ. ಇದೀಗ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಬೆಂಬಲ ನೀಡಿದೆ.

ಪೊಲೀಸರ ಹರಸಾಹಸ: ವಿದ್ಯಾರ್ಥಿಗಳು ಗುರುವಾರ ವಿ.ವಿ.ಗೆ ಮುತ್ತಿಗೆ ಹಾಕಲು ಯತ್ನಿಸಿದಾಗ, ಅವರನ್ನು ತಡೆಯಲು ಪೊಲೀಸರ ಹರಸಾಹಸಪಟ್ಟರು. ಬ್ಯಾರಿಕೇಡ್‌ಗಳನ್ನು ತಳ್ಳಿ ಮುನ್ನುಗ್ಗಿದ್ದ ವಿದ್ಯಾರ್ಥಿಗಳು ಕಡೆಗೂ ವಿ.ವಿ ಪ್ರವೇಶದ್ವಾರ ದಾಟಿದರು. ಈ ವೇಳೆ, ಪೊಲೀಸರ ಜೊತೆ ವಾಗ್ವಾದ ಹಾಗೂ ತಳ್ಳಾಟ ನಡೆಯಿತು. ಪರಿಸ್ಥಿತಿ ವಿಕೋಪಕ್ಕೆ ಹೋಗುವುದನ್ನು ಗಮನಿಸಿದ ಎಸಿಪಿ ವಿನೋದ ಮುಕ್ತೇದಾರ ಅವರು, ಕುಲಪತಿ ಪ್ರೊ.ಪಿ. ಈಶ್ವರ ಭಟ್ ಅವರನ್ನು ಸ್ಥಳಕ್ಕೆ ಕರೆಯಿಸಿದರು.

ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಸಂಬಂಧಪಟ್ಟವರ ಜೊತೆ ಚರ್ಚಿಸಿ ಒಂದು ಗಂಟೆಯ ಬಳಿಕ ನಿಮ್ಮೊಂದಿಗೆ ಮಾತನಾಡುತ್ತೇನೆ’ ಎಂದು ತೆರಳಿದರು. ನಂತರ ವಿದ್ಯಾರ್ಥಿ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ‘ತಜ್ಞರೊಂದಿಗೆ ಮಾತುಕತೆ ನಡೆಸಿ, ಎರಡು ದಿನದೊಳಗೆ ಅಂತಿಮ ನಿರ್ಧಾರ ತಿಳಿಸಲಾಗುವುದು. ಅದಕ್ಕಾಗಿ ಇಂದೇ ಬೆಂಗಳೂರಿಗೆ ಹೋಗುವೆ. ಅಲ್ಲಿಯವರೆಗೆ ತಾಳ್ಮೆಯಿಂದ ಕಾಯಿರಿ’ ಎಂದರು.

ಇದಕ್ಕೆ ಎಬಿವಿಪಿ ಪ್ರತಿನಿಧಿಗಳು ಸಮ್ಮತಿಸಿದರೆ, ಅಂತಿಮ ನಿರ್ಧಾರ ತಿಳಿಸುವವರೆಗೆ ಪ್ರತಿಭಟನೆ ಮುಂದುವರಿಸಲಾಗುವುದು ಎನ್‌ಎಸ್‌ಯುಐ ಪ್ರತಿನಿಧಿಗಳು ತಿಳಿಸಿದರು.

***

ಹೈಕೋರ್ಟ್‌ ನಿರ್ದೇಶನದ ಮೇರೆಗೆ ಫೆ. 15ರಂದು ಪರೀಕ್ಷೆ ನಿಗದಿಪಡಿಸಲಾಗಿದೆ. ನ್ಯಾಯಾಂಗ ನಿಂದನೆಯಾಗದಂತೆ, ಯಾವ ಮಾದರಿಯ ಪರೀಕ್ಷೆ ನಡೆಸಬೇಕು ಎಂದು ತೀರ್ಮಾನಿಸಲಾಗುವುದು
– ಪ್ರೊ.ಪಿ. ಈಶ್ವರ ಭಟ್, ಕುಲಪತಿ, ಕಾನೂನು ವಿಶ್ವವಿದ್ಯಾಲಯ

‘ವಿ.ವಿ ವಿದ್ಯಾರ್ಥಿಗಳ ಪರವಾಗಿರಬೇಕು’

ಆಫ್‌ಲೈನ್ ಪರೀಕ್ಷೆಗೆ ಸದ್ಯ ವಿ.ವಿ ತಯಾರಾಗಿದೆ. ಇದು ದೀರ್ಘವಾದ ಪ್ರಕ್ರಿಯೆಯಾಗಿದ್ದು, ಫೆಬ್ರುವರಿ ಅಥವಾ ಮಾರ್ಚ್‌ ತಿಂಗಳವರೆಗೂ ಮುಗಿಯುವುದಿಲ್ಲ. ಇದರಿಂದಾಗಿ ಮುಂದಿನ ಸೆಮಿಸ್ಟರ್ ಪ್ರವೇಶಾವಕಾಶ, ಬಡ ವಿದ್ಯಾರ್ಥಿಗಳ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಕೆ ಸೇರಿದಂತೆ ಹಲವು ಸಮಸ್ಯೆಗಳು ಉದ್ಭವವಾಗಲಿವೆ. ನೆಟ್‌ವರ್ಕ್ ಸಮಸ್ಯೆ ಜೊತೆಗೆ, ಹಲವು ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್ ಇಲ್ಲದಿರುವುದರಿಂದ ಆನ್‌ಲೈನ್ ಪರೀಕ್ಷೆಗೂ ವಿದ್ಯಾರ್ಥಿಗಳ ವಿರೋಧವಿದೆ. ಹಾಗಾಗಿ, ಅಸೈನ್‌ಮೆಂಟ್ ಮಾದರಿಯಲ್ಲಿ ಮೌಲ್ಯಮಾಪನ ಮಾಡಿ ಅಂಕ ನೀಡಿ ಪಾಸ್‌ ಮಾಡಬೇಕು. ಯಾವುದೇ ಕಾರಣಕ್ಕೂ ಪ್ರಮೋಟ್ ಮಾಡಬಾರದು. ಹಾಗೆ ಮಾಡಿದರೆ, ಹಿಂದಿನ ವರ್ಷ ಫೇಲ್ ಆದವರೂ ಈ ಬಾರಿಯೂ ಫೇಲ್ ಆಗುತ್ತಾರೆ. ಜೊತೆಗೆ, ತರಗತಿಗಳನ್ನು ಸಹ ತಕ್ಷಣ ಆರಂಭಿಸಬೇಕು.

– ಪ್ರತೀಕ್ ಮಾಳಿ, ರಾಜ್ಯ ಕಾರ್ಯದರ್ಶಿ, ಎಬಿವಿಪಿ

‘ಒಂದು ಸೆಮಿಸ್ಟರ್‌ ಹಿಂದುಳಿದಿದ್ದೇವೆ‘

ಬೇರೆ ವಿಶ್ವವಿದ್ಯಾಲಯಗಳಿಗೆ ಹೋಲಿಸಿದರೆ, ಕಾನೂನು ವಿ.ವಿ ವಿದ್ಯಾರ್ಥಿಗಳು ಒಂದು ಸೆಮಿಸ್ಟರ್ ಹಿಂದುಳಿದಿದ್ದೇವೆ. ಹಾಗಾಗಿ, ಎಲ್ಲಾ ಸೆಮಿಸ್ಟರ್‌ ತರಗತಿಯನ್ನು ತಕ್ಷಣ ಆರಂಭಿಸಬೇಕು ಹಾಗೂ ಪರೀಕ್ಷೆ ನಡೆಸಬೇಕು. ಆನ್‌ಲೈನ್, ಆಫ್‌ಲೈನ್, ಅಸೈನ್‌ಮೆಂಟ್ ಅಥವಾ ಬಹುಆಯ್ಕೆ ಮಾದರಿ ಸೇರಿದಂತೆ ಯಾವ ಮಾದರಿಯಲ್ಲಾದರು ಪರೀಕ್ಷೆ ನಡೆಸಲಿ.

–ವರುಣ್ ಗೌಡ, ಸಂಚಾಲಕ, ಎನ್‌ಎಸ್‌ಯುಐ, ಕಾನೂನು ವಿ.ವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT