ಶನಿವಾರ, ಜುಲೈ 24, 2021
20 °C
ಕೋವಿಡ್ ಲಸಿಕೆ ಮಹಾಮೇಳಕ್ಕೆ ಚಾಲನೆ

ಲಸಿಕೆ ಪಡೆಯಲು ಹಿಂಜರಿಕೆಗೆ ಬೇಡ; ಸಚಿವ ಜಗದೀಶ ಶೆಟ್ಟರ್ ಕರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ‘ಕೋವಿಡ್‌ನಿಂದ ರಕ್ಷಣೆ ಪಡೆಯಲು ಲಸಿಕೆಯೊಂದೇ ದಾರಿ. ಹಾಗಾಗಿ, ದೇಶದಾದ್ಯಂತ ಉಚಿತವಾಗಿ ಲಸಿಕೆ ನೀಡುವ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಜನ ಲಸಿಕೆಗೆ ಪಡೆಯಲು ಹಿಂಜರಿಯಬಾರದು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ನಗರದ ಕಾರವಾರ ರಸ್ತೆಯಲ್ಲಿರುವ ಸಿ.ಎ.ಆರ್ ಮೈದಾನದಲ್ಲಿ ಸೋಮವಾರ ಕೋವಿಡ್ ಲಸಿಕೆ ಮಹಾಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಆರಂಭದಲ್ಲಿ ಲಸಿಕೆ ಪಡೆಯಲು ಜನ ಹಿಂದೇಟ ಹಾಕಿದರು. ಲಸಿಕೆ ವಿರುದ್ಧ ನಡೆದ ಅಪಪ್ರಚಾರವೂ ಇದಕ್ಕೆ ಕಾರಣ. ಆದರೆ, ಎರಡನೇ ಅಲೆಯಿಂದ ಸಂಭವಿಸಿದ ಅನಾಹುತದಿಂದ ಎಲ್ಲರಿಗೂ ಲಸಿಕೆಯ ಮಹತ್ವ ಗೊತ್ತಾಗಿದೆ’ ಎಂದರು.

‘ಜಿಲ್ಲೆಯಲ್ಲಿ ಆರಂಭದಲ್ಲಿ ಕೋವಿಡ್ ಪಾಸಿಟಿವಿಟಿ ಶೇ 30ಕ್ಕಿಂತ ಹೆಚ್ಚು ಇತ್ತು. ಈಗ ಶೇ 5ಕ್ಕಿಂತಲೂ ಕಮ್ಮಿ ಇದೆ. ಹಾಗಾಗಿ, ಸರ್ಕಾರ ಲಾಕ್‌ಡೌನ್ ಸಡಿಲಿಕೆ ಮಾಡಿದೆ. ಆದರೂ, ಜನ ಮೈಮರೆಯದೆ ಕೋವಿಡ್ ನಿಯಮಗಳನ್ನು ಪಾಲಿಸಬೇಕು. ಮಾಸ್ಕ್‌ ಧರಿಸಿ, ಅಂತರ ಪಾಲಿಸಬೇಕು’ ಎಂದು ಸಲಹೆ ನೀಡಿದರು.

ಜಿಲ್ಲಾಧಿಕಾರಿ ನಿತೇಶ ಪಾಟೀಲ ಮಾತನಾಡಿ, ‘ಜಿಲ್ಲೆಯಾದ್ಯಂತ 201 ಕೇಂದ್ರಗಳಲ್ಲಿ ಲಸಿಕೆ ಅಭಿಯಾನ ಕೈಗೊಳ್ಳಲಾಗಿದೆ. 18ರಿಂದ 45 ವರ್ಷದೊಳಗಿನ ಮುಂಚೂಣಿ  ಕಾರ್ಯಕರ್ತರು ಹಾಗೂ ಅವರ ಕುಟುಂಬದವರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡಲಾಗುತ್ತಿದೆ. ಇಂದು 25 ಸಾವಿರಕ್ಕೂ ಹೆಚ್ಚು ಮಂದಿಗೆ ಲಸಿಕೆ ಹಾಕುವ ಗುರಿ ಇದ್ದು, ಎರಡು ದಿನದೊಳಗೆ ಜಿಲ್ಲೆಯಲ್ಲಿ 50 ಸಾವಿರ ಲಸಿಕೆ ನೀಡಲಾಗುವುದು’ ಎಂದು ಹೇಳಿದರು.

3ನೇ ಅಲೆ ಎದುರಿಸಲು ಸಿದ್ಧತೆ: ‘ಮೂರನೇ ಅಲೆ ಎದುರಿಸಲು ಜಿಲ್ಲೆಯ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿರುವ ವೆಂಟಿಲೇಟರ್, ಐಸಿಯು, ಆಕ್ಸಿಜನ್ ಬೆಡ್ ಸೇರಿದಂತೆ ವಿವಿಧ ಚಿಕಿತ್ಸಾ ಸೌಲಭ್ಯಗಳ ಪಟ್ಟಿ ಮಾಡಿಕೊಂಡು ಸಿದ್ಧತೆ ಮಾಡಿಕೊಳ್ಳಲಾಗಿದೆ. ಧಾರವಾಡದ ಜಿಲ್ಲಾಸ್ಪತ್ರೆಯಲ್ಲಿರುವಂತೆ ಹುಬ್ಬಳ್ಳಿಯ ಕಿಮ್ಸ್‌ನಲ್ಲೂ ಎಂಸಿಎಚ್ ಆಸ್ಪತ್ರೆ ಆರಂಭಕ್ಕೆ ಸಿದ್ಧತೆ ನಡೆದಿದೆ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

500ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿ ಕುಟುಂಬದ ಸದಸ್ಯರಿಗೆ ಲಸಿಕೆ ನೀಡಲಾಯಿತು. 

ವಿಧಾನ ಪರಿಷತ್ ಸದಸ್ಯ ಪ್ರದೀಪ ಶೆಟ್ಟರ್, ಪೊಲೀಸ್ ಕಮಿಷನರ್ ಲಾಬೂರಾಮ್, ಧಾರವಾಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ. ಕೃಷ್ಣಕಾಂತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಶವಂತ ಮದೀನಕರ, ಜಿಲ್ಲಾ ಆರ್.ಸಿ.ಎಚ್.ಒ ಡಾ.ಎಸ್.ಎಂ. ಹೊನಕೇರಿ‌ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು