ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಚ್ಯಾಣ–ಹೂಟಗಿ ಜೋಡಿ ರೈಲು ಮಾರ್ಗ ಪೂರ್ಣ

33 ಕಿ.ಮೀ. ಅಂತರ; ವಾಣಿಜ್ಯ ಚಟುವಟಿಕೆ, ಪ್ರವಾಸೋದ್ಯಮಕ್ಕೆ ಉತ್ತೇಜನ
Last Updated 30 ಜುಲೈ 2020, 15:44 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರೈಲು ಮಾರ್ಗವಾದ ವಿಜಯಪುರ ಜಿಲ್ಲೆಯ ಲಚ್ಯಾಣ ಹಾಗೂ ಸೊಲ್ಲಾಪುರ ಜಿಲ್ಲೆಯ ಹೂಟಗಿ ನಡುವಿನ 33 ಕಿ.ಮೀ. ಅಂತರದ ಜೋಡಿ ರೈಲು ಮಾರ್ಗ ಕಾರ್ಯ ಪೂರ್ಣಗೊಂಡಿದೆ. ಈ ಮಾರ್ಗವನ್ನು ರೈಲ್ವೆ ಸುರಕ್ಷತಾ ತಂಡದ ಅಧಿಕಾರಿಗಳು ಮೇ 18ರಂದು ಪರಿಶೀಲಿಸಿ ಹಸಿರು ನಿಶಾನೆ ತೋರಿದ್ದಾರೆ.

ಹೂಟಗಿಯಿಂದ 134 ಕಿ.ಮೀ. ದೂರದ ಬಸವನಬಾಗೇವಾಡಿ ತಾಲ್ಲೂಕಿನ ಕೂಡಗಿಯ ಸೂಪರ್‌ ಥರ್ಮಲ್ ಪವರ್‌, ವಾಣಿಜ್ಯ ಚಟುವಟಿಕೆಯ ಉದ್ದೇಶದಿಂದ ಈ ರೈಲ್ವೆ ಯೋಜನೆಗಾಗಿ ₹946 ಕೋಟಿ ವೆಚ್ಚ ಮಾಡಿದೆ. ಕೂಡಗಿಯಿಂದ ಗದಗವರೆಗಿನ 150 ಕಿ.ಮೀ. ಅಂತರದ ಜೋಡಿ ಮಾರ್ಗದ ಕಾಮಗಾರಿಗೆ ರೈಲ್ವೆ ಇಲಾಖೆ ಹಣ ವಿನಿಯೋಗಿಸಿದೆ.

ಲಚ್ಯಾಣ–ಹೂಟಗಿ ನಡುವಿನ ಮಾರ್ಗದಲ್ಲಿ ಬರುವ ಭೀಮಾ ನದಿಯ ಮೇಲೆ 670 ಮೀಟರ್‌ ಉದ್ದದ ಸೇತುವೆ ನಿರ್ಮಿಸಲಾಗಿದೆ. ಈ ಸೇತುವೆಯನ್ನು 25 ಟಿ ಆ್ಯಕ್ಸಲ್‌ ಲೋಡಿಂಗ್‌ಗೆ ಹೊಂದುವಂತೆ ವಿನ್ಯಾಸಗೊಳಿಸಲಾಗಿದ್ದು, ಪ್ರಸ್ತುತ ಸೇತುವೆ ಮೇಲೆ ವೇಗ ನಿರ್ಬಂಧ ಅಳವಡಿಸಲಾಗಿದೆ. ಸೇತುವೆಯು ಎರಡು ರೈಲು ಮಾರ್ಗಗಳನ್ನು ಒಳಗೊಂಡಿದ್ದು, ಮೊದಲ ಒಂದು ಮಾರ್ಗ ಸಂಚಾರಕ್ಕೆ ಸಜ್ಜಾಗಿದೆ. ಎರಡನೇ ಮಾರ್ಗ ಅಕ್ಟೋಬರ್‌ ವೇಳೆಗೆ ಸಿದ್ಧಗೊಳ್ಳಲಿದೆ.

ಹೂಟಗಿಯಿಂದ ಕೂಡಗಿ ಮಾರ್ಗವಾಗಿ ಗದುಗಿಗೆ ಸಂಪರ್ಕ ಕಲ್ಪಿಸುವ ಒಟ್ಟು 284 ಕಿ.ಮೀ. ದೂರದ ಜೋಡಿ ಮಾರ್ಗದ ಕಾರ್ಯಕ್ಕೆ 2014–15ರಲ್ಲಿ ರೈಲ್ವೆ ಮಂಡಳಿ ಅನುಮತಿ ನೀಡಿತ್ತು. ಇದಕ್ಕಾಗಿ ₹1,870 ಕೋಟಿ ಮಂಜೂರು ಮಾಡಿದೆ.

ಕೋವಿಡ್‌ ಸಂಕಷ್ಟದ ಕಾಲದಲ್ಲಿಯೂ ಕಾರ್ಮಿಕರು ಹಾಗೂ ರೈಲ್ವೆ ಅಧಿಕಾರಿಗಳು ಕಠಿಣ ಪರಿಶ್ರಮದಿಂದ ಕೆಲಸ ಮಾಡಿದ್ದರಿಂದ ಜೋಡಿ ಮಾರ್ಗ ಕಾಮಗಾರಿ ಪೂರ್ಣಗೊಂಡಿದೆ. 33 ಕಿ.ಮೀ. ಮಧ್ಯದಲ್ಲಿ ಮೂರು ನಿಲ್ದಾಣಗಳು ಬರುತ್ತವೆ ಎಂದು ನೈರುತ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಈ. ವಿಜಯಾ ತಿಳಿಸಿದ್ದಾರೆ.

ಜೋಡಿ ಮಾರ್ಗ ಪೂರ್ಣಗೊಂಡ ಕಾರಣ ವಾಣಿಜ್ಯ ವಹಿವಾಟಿಗೆ ಹೆಚ್ಚು ಅನುಕೂಲವಾಗಲಿದೆ. ರೈಲುಗಳ ಸಂಚಾರ ದಟ್ಟಣೆ ಹಾಗೂ ಕ್ರಾಸಿಂಗ್ ಸಲುವಾಗಿ ಹೆಚ್ಚು ಸಮಯ ಕಾಯುವುದು ತಪ್ಪಲಿದೆ. ಹೊಸ ರೈಲುಗಳನ್ನು ಪರಿಚಯಿಸಲು ಸಹಾಯಕವಾಗುತ್ತದೆ. ಆರ್ಥಿಕ ಚಟುವಟಿಕೆಗಳನ್ನು ಹೆಚ್ಚಿಸಲು ನೆರವಾಗುತ್ತದೆ. ಬೆಂಗಳೂರು ಹಾಗೂ ಮುಂಬೈ ಮಾರ್ಗಕ್ಕೆ ಸಂಪರ್ಕ ಕೊಂಡಿಯಾಗಲಿದೆ. ಬಾಗಲಕೋಟೆ ಹಾಗೂ ವಿಜಯಪುರ ಜಿಲ್ಲೆಗಳ ಪ್ರವಾಸೋದ್ಯಮ ಉತ್ತೇಜನಕ್ಕೂ ಜೋಡಿ ಮಾರ್ಗ ಉತ್ತಮವಾಗಿದೆ. ಒಟ್ಟು 284 ಕಿ.ಮೀ. ದೂರದ ಜೋಡಿ ಮಾರ್ಗದ ಕಾಮಗಾರಿ 2022ರ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT