ಸೋಮವಾರ, ಏಪ್ರಿಲ್ 19, 2021
32 °C
ವಿದ್ಯಾರ್ಥಿಗಳಿಗೆ ಸಾಂಕ್ರಾಮಿಕ ರೋಗಗಳ ಭೀತಿ; ಮನವಿಗೆ ಸ್ಪಂದಿಸದ ಪಾಲಿಕೆ

ಶಾಲೆ ಆವರಣದ ತುಂಬಾ ಗಟಾರ ನೀರು!

ಓದೇಶ ಸಕಲೇಶಪುರ Updated:

ಅಕ್ಷರ ಗಾತ್ರ : | |

Prajavani

ಹುಬ್ಬಳ್ಳಿ: ಆ ಶಾಲೆಯ ಎದುರು ವಿಶಾಲವಾದ ಮೈದಾನವಿದ್ದರೂ ಅಲ್ಲಿ ಖುಷಿಯಿಂದ ಆಟವಾಡುವ ಭಾಗ್ಯ ವಿದ್ಯಾರ್ಥಿಗಳಿಗಿಲ್ಲ. ಯಾಕೆಂದರೆ, ಶಾಲೆಯ ಬಹುತೇಕ ಆವರಣವನ್ನು ಗಟಾರದ ನೀರು ಆವರಿಸಿಕೊಂಡು ಗಬ್ಬು ನಾರುತ್ತಿದೆ. ಇದರಿಂದ ಶಾಲೆಗೆ ವಿದ್ಯಾರ್ಥಿಗಳ ಗೈರು ಹಾಜರಿ ಹೆಚ್ಚುತ್ತಿದ್ದು, ಸಾಂಕ್ರಾಮಿಕ ರೋಗಗಳ ಭೀತಿ ಕಾಡುತ್ತಿದೆ.

ಹಳೇ ಹುಬ್ಬಳ್ಳಿಯ ಮಂಟೂರು ರಸ್ತೆಯಲ್ಲಿರುವ ಕೃಪಾದಾನಂ ಅನುದಾನಿತ ಪ್ರೌಢಶಾಲೆ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ದುಃಸ್ಥಿತಿ ಇದು. ನಾಲ್ಕೈದು ತಿಂಗಳಿಂದ ಕಾಡುತ್ತಿರುವ ಈ ಸಮಸ್ಯೆಗೆ ಪಾಲಿಕೆಯವರು ಇದುವರೆಗೂ ಕಿವಿಗೊಟ್ಟಿಲ್ಲ!

ಒಡೆದಿರುವ ಗಟಾರ: ಮಂಟೂರು ರಸ್ತೆಗೆ ಹೊಂದಿಕೊಂಡಂತಿರುವ ಗಟಾರದ ಸ್ವಲ್ಪ ಭಾಗ ಒಡೆದಿದೆ. ಅಲ್ಲಿಂದ ಹೊರಹೊಮ್ಮುವ ಕೊಳಚೆ ನೀರು ನೇರವಾಗಿ ಪಕ್ಕದಲ್ಲಿರುವ ಶಾಲೆಯ ಮೈದಾನದಲ್ಲಿ ಸಂಗ್ರಹಗೊಳ್ಳುತ್ತಿದೆ. ಮಳೆ ನೀರಿನ ಹರಿವು ಹೆಚ್ಚಾದಾಗ ಮತ್ತು ಕಸ–ಕಡ್ಡಿಯಿಂದ ಗಟಾರ ಕಟ್ಟಿಕೊಂಡಾಗ ಶಾಲೆಯ ಆವರಣ ಕೊಳಚೆ ತುಂಬಿದ ಕೆರೆಯಂತಾಗುತ್ತದೆ.

‘ನಿತ್ಯ ದುರ್ವಾಸನೆ ಸಹಿಸಿಕೊಂಡೇ ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ಶಾಲೆಗೆ ಬರುವ ಮಕ್ಕಳಲ್ಲಿ ಜ್ವರದಂತಹ ಕಾಯಿಲೆ ಸಾಮಾನ್ಯವಾಗಿದೆ. ಇತ್ತೀಚೆಗೆ ಆರೋಗ್ಯ ಸರಿ ಇಲ್ಲದ ಕಾರಣಕ್ಕಾಗಿಯೇ ಗೈರು ಹಾಜರಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದೆ’ ಎಂದು ಕೃಪಾದಾನಂ ಕನ್ನಡ ಮತ್ತು ತೆಲುಗು ಮಾಧ್ಯಮ ಶಾಲೆಯ ಮುಖ್ಯ ಶಿಕ್ಷಕಿ ಸರಳ ಕುಮಾರಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.‌

‘ತಬೀಬಲ್ಯಾಂಡ್, ಗೂಡ್‌ಶೆಡ್‌ ರಸ್ತೆ, ಮೌಲಾ ಅಲಿ ಬ್ಲಾಕ್ ಸೇರಿದಂತೆ ಮಂಟೂರು ರಸ್ತೆಯ ಮೇಲ್ಭಾಗದ ಪ್ರದೇಶಗಳ ಕೊಳಚೆ ನೀರು ಗಟಾರದಲ್ಲಿ ಹರಿಯುತ್ತದೆ. ಈ ನೀರು ಶಾಲೆ ಆವರಣದಲ್ಲಿ ಸಂಗ್ರಹಗೊಂಡು ಹುಲ್ಲು ಬೆಳೆದು ನಿಂತಿದೆ. ಇದರಿಂದ ಸೊಳ್ಳೆ  ಕಾಟ ವಿಪರೀತವಾಗಿದೆ’ ಎಂದು ಕೃಪಾದಾನಂ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಬಸವರಾಜ ಗೌಡರ್ ಹೇಳಿದರು.

ಜನರನ್ನು ಸ್ಥಳಾಂತರಿಸಿದ್ದರು: ‘ಕೆಲ ದಿನಗಳ ಹಿಂದೆ ಸುರಿದ ಭಾರಿ ಮಳೆಯಿಂದಾಗಿ ಇಲ್ಲಿನ ಗಟಾರ ಕಟ್ಟಿಕೊಂಡಿತ್ತು. ಆಗ ರಸ್ತೆ ಬದಿ ಹಾಗೂ ಅರಳಿಕಟ್ಟಿ ಪ್ರದೇಶದ ಮನೆಗಳಿಗೆ ರಾತ್ರಿ ನೀರು ನುಗ್ಗಿತ್ತು. ನಂತರ, ನಮ್ಮನ್ನು ಬೇರೆಡೆಗೆ ಸ್ಥಳಾಂತರಿಸಿದ್ದರು. ಇಷ್ಟಾದರೂ ಇಲ್ಲಿನ ಸಮಸ್ಯೆಗೆ ಶಾಶ್ವತ ಪರಿಹಾರ ಹುಡುಕಲು ಯಾರೂ ಮುಂದಾಗಿಲ್ಲ’ ಎಂದು ಸ್ಥಳೀಯರಾದ ಕಾವೇರಿ ಬೇಸರ ವ್ಯಕ್ತಪಡಿಸಿದರು.

‘ಗಟಾರದಲ್ಲಿ ಶೌಚಾಲಯದ ನೀರು ಕೂಡ ಹರಿಯುತ್ತದೆ. ಹಾಗಾಗಿ, ವಿಪರೀತ ದುರ್ವಾಸನೆ ಬರುತ್ತದೆ. ಶಾಲೆಗೆ ಹೋಗುವಾಗ ಮಕ್ಕಳು ಕೊಳಚೆ ನೀರನ್ನು ಹಾದು ಹೋಗಬೇಕಾಗಿದೆ. ಇನ್ನಾದರೂ, ಪಾಲಿಕೆಯವರು ಗಟಾರದ ನೀರು ಶಾಲೆ ಆವರಣ ಹಾಗೂ ಮನೆಗಳತ್ತ ಹರಿಯದಂತೆ ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದರು.

‘ಬಡಜೀವಗಳಿಗೆ ಹೊಣೆ ಯಾರು?’
‘ನಮ್ಮ ಬದುಕು ಅರಣ್ಯರೋದನವಾಗಿದೆ. ಮನೆ ಎದುರಿಗೆ ಹರಿಯುವ ಕೊಳಚೆ ನೀರು ಯಾವಾಗ ಒಳಕ್ಕೆ ನುಗ್ಗುತ್ತದೋ ಎಂಬ ಆತಂಕದಲ್ಲಿ ಬದುಕು ದೂಡುತ್ತಿದ್ದೇವೆ. ಎಲ್ಲೆಂದರಲ್ಲಿ ಹರಿಯುವ ಕೊಳಚೆಯಿಂದಾಗಿ ಸಾಂಕ್ರಾಮಿಕ ರೋಗಗಳಿಂದ ಬಳಲುವವರ ಸಂಖ್ಯೆ ಹೆಚ್ಚಾಗಿದೆ. ಕಳೆದ ವರ್ಷ ಇಬ್ಬರು ಮಕ್ಕಳು ಡೆಂಗಿಯಿಂದ ತೀರಿಕೊಂಡಿದ್ದರು. ಎಷ್ಟೋ ಮಂದಿ ಆಸ್ಪತ್ರೆ ಸೇರಿಕೊಂಡಿದ್ದರು. ಬಡ ಜೀವಗಳಿಗೆ ಹೊಣೆಗಾರರೇ ಇಲ್ಲವಾಗಿದೆ’ ಎಂದು ಸ್ಥಳೀಯರಾದ ಫಾತೀಮಾ ಶೇಕ್ ಅಳಲು ತೋಡಿಕೊಂಡರು.

‘ಕೃಪಾದಾನಂ ಶಾಲೆಗೆ ಹೋಗುತ್ತಿರುವ ಮಗ ಆರೇಳು ತಿಂಗಳಿಂದ ಜ್ವರದಿಂದ ಬಳಲುತ್ತಿದ್ದಾನೆ. ಇತ್ತೀಚೆಗೆ ನಾಲ್ಕೈದು ದಿನ ಆಸ್ಪತ್ರೆಗೆ ದಾಖಲಿಸಿದರೂ ಹುಷಾರಾಗಿಲ್ಲ. ಇನ್ನು ಮಕ್ಕಳು ಕೊಳಚೆಯ ದುರ್ವಾಸನೆಯಲ್ಲೇ ದಿನ ಕಳೆದರೆ ಸಾಂಕ್ರಾಮಿಕ ರೋಗಗಳು ಬಾರದೆ ಇರುತ್ತವೆಯೇ? ಬಡವರು ಇರುವ ಪ್ರದೇಶಗಳ ಸಮಸ್ಯೆಗಳು ಅಧಿಕಾರಿ ಹಾಗೂ ಜನಪ್ರತಿನಿಧಿಗಳಿಗೆ ಕಾಣುವುದಿಲ್ಲ. ಚುನಾವಣೆ ಬಂದಾಗಷ್ಟೇ ಅವರಿಗೆ ನಮ್ಮ ಪ್ರದೇಶಗಳು ನೆನಪಾಗುತ್ತದೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

*
ಇಲ್ಲಿನ ಸಮಸ್ಯೆ ಕುರಿತು ಪಾಲಿಕೆಯ ಆಯುಕ್ತರಿಗೆ ಎರಡು ಸಲ ದೂರು ಕೊಟ್ಟಿದ್ದೇವೆ. ಮೊನ್ನೆ ಆರೋಗ್ಯ ನಿರೀಕ್ಷಕಿಯೊಬ್ಬರು ಶಾಲೆಗೆ ಭೇಟಿ ನೀಡಿದ್ದು, ಬಿಟ್ಟರೆ ಮತ್ಯಾರೂ ಬಂದಿಲ್ಲ.
– ಸರಳಕುಮಾರಿ, ಮುಖ್ಯ ಶಿಕ್ಷಕಿ, ಕೃಪಾದಾನಂ ಹಿರಿಯ ಪ್ರಾಥಮಿಕ ಶಾಲೆ

*
ಶಾಲೆ ಮೈದಾನ ಇದ್ದೂ ಇಲ್ಲದ ಪರಿಸ್ಥಿತಿ ನಿರ್ಮಾನವಾಗಿದೆ. ವಿದ್ಯಾರ್ಥಿಗಳು ದುರ್ವಾಸನೆಯಲ್ಲೇ ಪಾಠ ಕೇಳಬೇಕಾದ ಸ್ಥಿತಿ ಎದುರಾಗಿದೆ. ಸಂಬಂಧಪಟ್ಟವರು ಕೂಡಲೇ ಸಮಸ್ಯೆ ಬಗೆಹರಿಸಬೇಕು
– ಬಸವರಾಜ ಗೌಡರ್, ಮುಖ್ಯ ಶಿಕ್ಷಕ, ಕೃಪಾದಾನಂ ಪ್ರೌಢಶಾಲೆ

*
ಗಟಾರದ ಕೊಳಕು ನೀರು ಶಾಲೆ ಬಳಿ ನಿಂತಿರುವುದರಿಂದ ಸಾಂಕ್ರಾಮಿಕ ರೋಗಗಳ ಭೀತಿ ಹೆಚ್ಚಾಗಿದೆ. ಹಾಗಾಗಿ, ಶಾಲೆಗೆ ಮಕ್ಕಳನ್ನು ಕಳುಹಿಸಲು ಭಯವಾಗುತ್ತಿದೆ
– ಅಯ್ಯಮ್ಮ, ಪೋಷಕಿ

*
ಶಾಲೆ ಆವರಣದಲ್ಲಿ ಗಟಾರದ ನೀರು ಸಂಗ್ರಹಗೊಂಡಿರುವ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಸ್ಥಳಕ್ಕೆ ಕೂಡಲೇ ಭೇಟಿ ನೀಡಿ ಪರಿಶೀಲಿಸುತ್ತೇನೆ
– ಸುದರ್ಶನ್‌, ಕಿರಿಯ ಎಂಜಿನಿಯರ್, ವಾರ್ಡ್ 49

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು