ಧಾರವಾಡ: ‘ರಾಜ್ಯದ 62 ತಾಲ್ಲೂಕುಗಳಲ್ಲಿ ಬರ ಪರಿಸ್ಥಿತಿ ಇದೆ. ಮುಂದಿನ ವಾರ ಸಂಪುಟ ಸಭೆಯಲ್ಲಿ ಬರಗಾಲ ಘೋಷಣೆ ಮಾಡುತ್ತೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಧಾರವಾಡ ಕೃಷಿ ವಿಶ್ವವಿದ್ಯಾಲಯದಲ್ಲಿ ಶನಿವಾರ ಕೃಷಿ ಮೇಳ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು. 'ಬರಗಾಲ ಘೋಷಣೆ ಮಾಡಿ, ರೈತರಿಗೆ ಸಹಾಯ ಮಾಡಬೇಕು. ಕೇಂದ್ರ ಸರ್ಕಾರದ ನೆರವು ಪಡೆದು ಸಹಾಯ ಮಾಡುತ್ತೇವೆ. ದೇಶದಲ್ಲಿ ರೈತರು, ಶಿಕ್ಷಕರು ಮತ್ತು ಸೈನಿಕರು ಬಹಳ ಮುಖ್ಯ" ಎಂದರು.
'ಬರಗಾಲ ಘೋಷಣೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರವು ಮಾರ್ಗಸೂಚಿ ರೂಪಿಸಿದೆ. ಕೆಲವು ಮಾರ್ಗಸೂಚಿಗಳನ್ನು ಬದಲಾವಣೆ ಮಾಡಬೇಕು ಎಂದು ಪತ್ರ ಬರೆದಿದ್ದೇವೆ. ಕೇಂದ್ರ ಸರ್ಕಾರ ಈವರೆಗೆ ಉತ್ತರ ನೀಡಿಲ್ಲ" ಎಂದು ತಿಳಿಸಿದರು.
'ಹಿಂದಿನ ಬಿಜೆಪಿ ಸರ್ಕಾರ ಕೃಷಿ ಭಾಗ್ಯ ಯೋಜನೆಯನ್ನು ಸ್ಥಗಿತಗೊಳಿಸಿತ್ತು. ಈ ಯೋಜನೆಯನ್ನು ಮತ್ತೆ ಪ್ರಾರಂಭಿಸುತ್ತೇವೆ. ಒಣ ಬೇಸಾಯ ಮಾಡುವವರಿಗೆ ಈ ಯೋಜನೆ ಅವಶ್ಯ’ ಎಂದರು.
‘ರಾಜ್ಯದಲ್ಲಿ ಬರಗಾಲ ಇದೆ. ಇಂಥ ಸನ್ನಿವೇಶದಲ್ಲಿ ಬೆಳೆ ನಾಶವಾದಾಗ ಪರ್ಯಾಯ ಬೆಳೆ ಬಗ್ಗೆ ರೈತರಿಗೆ ಕೃಷಿ ವಿಶ್ವವಿದ್ಯಾಲಯಗಳು ಮಾಹಿತಿ ನೀಡಬೇಕು’ ಎಂದು ಸಲಹೆ ನೀಡಿದರು.
‘ಸಿರಿಧಾನ್ಯಗಳಲ್ಲಿ ನಾರಿನ ಅಂಶ, ಪೌಷ್ಟಿಕಾಂಶ ಹೆಚ್ಚು ಇದೆ. ಈ ಧಾನ್ಯಗಳ ಬಳಕೆ ಜಾಸ್ತಿಯಾಗಿದೆ. ರೈತರಿಗೆ ಈ ಬಗ್ಗೆ ತಿಳಿವಳಿಕೆ ನೀಡಬೇಕು. ಸಿರಿಧಾನ್ಯಗಳ ಬಗ್ಗೆ ಜನರು ಪ್ರಭಾವಿತರಾಗಬೇಕು, ಕೃಷಿಯಲ್ಲಿ ಅಳವಡಿಸಿಕೊಳ್ಳಬೇಕು’ ಎಂದು ಹೇಳಿದರು.
194 ತಾಲ್ಲೂಕುಗಳಲ್ಲಿ ಬರ ಛಾಯೆ: ಎನ್.ಚಲುವರಾಯಸ್ವಾಮಿ
ಕೃಷಿ ಸಚಿವ ಎನ್.ಚಲುವರಾಯ ಸ್ವಾಮಿ ಮಾತನಾಡಿ, ‘ಮುಂಗಾರು ಮಳೆ ಕೈಕೊಟ್ಟಿರುವುದರಿಂದ ಬರಗಾಲ ಘೋಷಣೆ ಮಾಡಬೇಕು ಎಂಬ ಕೂಗು ಇದೆ. ಬರಪರಿಸ್ಥಿತಿಗೆ ಸಂಬಂಧಿಸಿದಂತೆ ಸಂಪುಟ ಉಪಸಮಿತಿಯು ಪ್ರತಿಯಿಂದ ಜಿಲ್ಲೆಯಿಂದ ವರದಿ ಪಡೆದುಕೊಂಡಿದೆ. 194 ತಾಲ್ಲೂಕುಗಳಲ್ಲಿ ಬರದ ಛಾಯೆ ಇದೆ ಎಂಬ ಮಾಹಿತಿ ಇದೆ. ಉಪಸಮಿತಿಯು ಪರಿಶೀಲಿಸಿ ಅಖೈರುಗೊಳಿಸಿ ಸರ್ಕಾರಕ್ಕೆ ವರದಿ ನೀಡಲಿದೆ’ ಎಂದು ತಿಳಿಸಿದರು.
‘ಕೃಷಿ ವಿಶ್ವವಿದ್ಯಾಲಯಗಳು ಮತ್ತು ಕೃಷಿ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಹಂತಹಂತವಾಗಿ ಭರ್ತಿ ಮಾಡಲು ಮುಖ್ಯಮಂತ್ರಿ ಸೂಚನೆ ನೀಡಿದ್ದಾರೆ’ ಎಂದು ಅವರು ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.