ಶುಕ್ರವಾರ, ನವೆಂಬರ್ 27, 2020
20 °C

ಶಿಕ್ಷಕರಿಂದಲೇ ಶಿಕ್ಷಣ ವ್ಯವಸ್ಥೆ ಹಾಳು: ಶಿಕ್ಷಣ ತಜ್ಞ ತೇಜಸ್ವಿ ಕಟ್ಟಿಮನಿ ಬೇಸರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹುಬ್ಬಳ್ಳಿ: ರಾಜಕಾರಣಿಗಳು ಹಾಗೂ ಪೋಷಕರಿಂದ ದೇಶದ ಶಿಕ್ಷಣ ವ್ಯವಸ್ಥೆ ಹಾಳಾಗಿದೆ ಎಂದು ಎಲ್ಲರೂ ದೂರುತ್ತಾರೆ. ವಾಸ್ತವದಲ್ಲಿ ಶಿಕ್ಷಕರಿಂದಲೇ ಶಿಕ್ಷಣ ವ್ಯವಸ್ಥೆ ಹಾಳಾಗಿದೆ ಎಂದು ಹೊಸ ರಾಷ್ಟ್ರೀಯ ಶಿಕ್ಷಣ ನೀತಿ ಕರಡು ಸಮಿತಿಯ ಸದಸ್ಯ ಡಾ. ತೇಜಸ್ವಿ ವಿ. ಕಟ್ಟೀಮನಿ ಹೇಳಿದರು.

ನಗರದಲ್ಲಿ ಗುರುವಾರ ಮಾಧ್ಯಮದವರ ಜೊತೆ ಸಂವಾದ ನಡೆಸಿದ ಅವರು ‘ರಾಜ್ಯ ಹಾಗೂ ಕೇಂದ್ರದಲ್ಲಿ ಯಾವುದೇ ಸರ್ಕಾರಗಳು ಅಧಿಕಾರಕ್ಕೆ ಬಂದರೂ ಶೈಕ್ಷಣಿಕ ಪ್ರಗತಿಗಾಗಿ ಸಾಕಷ್ಟು ಹಣ ವ್ಯಯ ಮಾಡುತ್ತಿವೆ. ಶಿಕ್ಷಕರ ಅರ್ಪಣೆ ಮತ್ತು ತ್ಯಾಗ ಮನೋಭಾವದ ಕೊರತೆಯಿಂದ ಈ ಕ್ಷೇತ್ರದಲ್ಲಿ ನಿರೀಕ್ಷೆಗೆ ತಕ್ಕಷ್ಟು ಯಶಸ್ಸು ಸಾಧಿಸಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಮಧ್ಯಪ್ರದೇಶದ ಅಮರಕಂಟಕದ ಇಂದಿರಾಗಾಂಧಿ ರಾಷ್ಟ್ರೀಯ ಬುಡಕಟ್ಟು ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿಯೂ ಆದ ಕೊಪ್ಪಳ ಜಿಲ್ಲೆ ಅಳವಂಡಿಯ ತೇಜಸ್ವಿ ಕಟ್ಟೀಮನಿ ಅವರು ಸದ್ಯ ಧಾರವಾಡದಲ್ಲಿ ನೆಲೆಸಿದ್ದಾರೆ.

‘ಪ್ರಾಥಮಿಕ ಹಂತದಲ್ಲಿ ಭಾರತೀಯ ಮೌಲ್ಯಗಳು ಮತ್ತು ಸಂಸ್ಕೃತಿಯನ್ನು ಹೆಚ್ಚು ಪರಿಚಯ ಮಾಡದ ಹೊರತು ಗ್ರಾಮೀಣ ಭಾರತ ಸೃಷ್ಟಿ ಸಾಧ್ಯವಿಲ್ಲ. ಪ್ರಾಥಮಿಕ ಶಿಕ್ಷಣ ಬಲಗೊಳ್ಳದಿದ್ದರೆ ಪ್ರೌಢಶಾಲೆ ಮತ್ತು ಉನ್ನತ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ಆಗುವುದಿಲ್ಲ. ಇವು ಪರಸ್ಪರ ಸರಪಳಿ ಹೊಂದಿವೆ. ಈ ಕೊರತೆಯಿಂದಲೇ ದೇಶದ ಶಿಕ್ಷಣ ಕ್ಷೇತ್ರದಲ್ಲಿ ನಿರೀಕ್ಷೆಯಷ್ಟು ಹೊಸ ಅನ್ವೇಷಣೆಗಳು ಮತ್ತು ಸಂಶೋಧನೆಗಳು ಆಗುತ್ತಿಲ್ಲ. ಆದ್ದರಿಂದ ಸಾಂಪ್ರದಾಯಿಕ ಜ್ಞಾನ ಕೂಡ ವೈಜ್ಞಾನಿಕ ಶಿಕ್ಷಣಕ್ಕೆ ಪೂರಕವಾಗಿದೆ ಎನ್ನುವುದನ್ನು ನಾವೆಲ್ಲರೂ ಗಟ್ಟಿಯಾಗಿ ನಂಬಬೇಕಿದೆ’ ಎಂದು ಪ್ರತಿಪಾದಿಸಿದರು.

‘ಗ್ರಾಮೀಣ ಜನರ ಜೀವನ ಶೈಲಿ, ಆಹಾರ ಪದ್ಧತಿ‌ ಹಾಗೂ ಸಂಸ್ಕೃತಿಯನ್ನು ಬದುಕಿನಲ್ಲಿ ಅಳವಡಿಸಿಕೊಳ್ಳುವ ಮತ್ತು ವಿನಯವಂತಿಕೆಯನ್ನು ಕಲಿಸಿಕೊಡುವ ಶಿಕ್ಷಣ ಪದ್ಧತಿ ನಮಗಿನ್ನೂ ಸಿಕ್ಕಿಲ್ಲ. ಬ್ರಿಟಿಷರು ಹೇಳಿಕೊಟ್ಟಿದ್ದನ್ನೇ ಶಿಕ್ಷಣ ಎಂದುಕೊಂಡು ನಂಬಿದ್ದೇವೆ. ಆದ್ದರಿಂದ ಶಿಕ್ಷಣ ಪಡೆದವರು ಈಗ ಪೂರ್ಣ ಮನಸ್ಸಿನಿಂದ ಒಕ್ಕಲುತನ ಮಾಡಲು ಒಪ್ಪುತ್ತಿಲ್ಲ. ದೈಹಿಕ ಶ್ರಮದ ಕೌಶಲವನ್ನು ಶಿಕ್ಷಣ ಎಂದು ನಾವು ಒಪ್ಪಿಕೊಂಡಿಲ್ಲ. ಈ ಎಲ್ಲ ಕೊರತೆಗಳನ್ನು ನೀಗಿಸಿ ಈಗಿನ ಅಗತ್ಯ ಶಿಕ್ಷಣದ ಅಂಶಗಳನ್ನು ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಪ್ರತಿಯಲ್ಲಿ ಹೇಳಲಾಗಿದೆ’ ಎಂದರು.

‘ಗ್ರಾಮೀಣ ಜೀವನದ ಅಂಶಗಳನ್ನು ಶಿಕ್ಷಣ ಪದ್ಧತಿಯಲ್ಲಿ ಅಳವಡಿಸಿ ಕ್ಲಸ್ಟರ್‌ ಹಂತದಿಂದಲೇ ಶಾಲೆಗಳನ್ನು ಬಲಗೊಳಿಸುವುದು, ಶಿಕ್ಷಕರನ್ನು ಸಂಪೂರ್ಣವಾಗಿ ಶೈಕ್ಷಣಿಕ ಜವಾಬ್ದಾರಿಗಳಿಗಷ್ಟೇ ಮೀಸಲಿಡುವಂತೆ ಮಾಡುವುದು, ಅಂಗನವಾಡಿಗಳನ್ನು ಶಾಲೆಯ ಭಾಗಗಳನ್ನಾಗಿ ಬದಲಾಯಿಸುವುದು, ದೈಹಿಕ ಶಿಕ್ಷಣ ಹಾಗೂ ಕ್ರೀಡಾ ಸಂಸ್ಕೃತಿ ಪಠ್ಯದ ಪ್ರಮುಖ ಭಾಗ ಮಾಡುವುದು ಅತ್ಯಗತ್ಯವಾಗಿದೆ’ ಎಂದು ತಿಳಿಸಿದರು. ದೇಶದಲ್ಲಿ ಸರ್ಕಾರಿ ಶಾಲೆಗಳ ಬಗ್ಗೆ ತಪ್ಪು ಅಭಿಪ್ರಾಯಗಳನ್ನು ಮೂಡಿಸಲು ವ್ಯವಸ್ಥಿತವಾಗಿ ಕುತಂತ್ರ ನಡೆಯುತ್ತಿದೆ ಎಂದೂ ಅವರು ಆರೋಪಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು