ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತುಂಬಿದ ಕೆರೆಯನ್ನು ಖಾಲಿ ಮಾಡಿದರು!

ಕೆರೆಗೆ ಬಿದ್ದು ವ್ಯಕ್ತಿ ಮೃತಪಟ್ಟಿದ್ದರಿಂದ ನೀರು ಬಳಸಲು ಗ್ರಾಮಸ್ಥರ ಹಿಂದೇಟು
Last Updated 22 ಜೂನ್ 2018, 16:08 IST
ಅಕ್ಷರ ಗಾತ್ರ

ಅಣ್ಣಿಗೇರಿ: ತಾಲ್ಲೂಕಿನ ನಾವಳ್ಳಿ ಗ್ರಾಮದ ಕೆರೆಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದರಿಂದ ಗ್ರಾಮಸ್ಥರು ಕೆರೆಯ ನೀರು ಬಳಸಲು ಹಿಂದೇಟು ಹಾಕಿದ್ದು, ಇದೀಗ 13 ಪಂಪ್‌ಸೆಟ್‌ಗಳಿಂದ ಕೆರೆಯ ನೀರನ್ನು ಹೊರಹಾಕುತ್ತಿದ್ದಾರೆ.

ಶಲವಡಿ ಗ್ರಾಮದ ಪರಶುರಾಮ ತಳವಾರ ಎಂಬುವವರು ಜೂನ್‌ 15ರಂದು ಕೆರೆಗೆ ಬಿದ್ದು ಮೃತಪಟ್ಟಿದ್ದರು. ಆ ವ್ಯಕ್ತಿಯ ಶವವನ್ನು ಹೊರ ತೆಗೆಯುವ ದೃಶ್ಯವನ್ನು ಗ್ರಾಮಸ್ಥರು ನೋಡಿದ್ದರು. ಆ ವೇಳೆ, ಶವದ ಬಾಯಿ ಹಾಗೂ ಕಿವಿಯಿಂದ ರಕ್ತ ಬರುತ್ತಿತ್ತು; ಅದು ನೀರಿನಲ್ಲಿ ಸೇರಿದೆ. ಹೀಗಾಗಿ ಕೆರೆ ಖಾಲಿ ಮಾಡದ ಹೊರತು, ಆ ನೀರನ್ನು ಕುಡಿಯುವುದಿಲ್ಲ ಎಂದು ಗ್ರಾಮಸ್ಥರು ಹೇಳಿದ್ದರು.

5 ಎಕರೆ ವಿಸ್ತೀರ್ಣದ ಈ ಕೆರೆಯಲ್ಲಿ ಮುಂದಿನ ಆರು ತಿಂಗಳಿಗಾಗುವಷ್ಟು ನೀರು ಇತ್ತು. ಆರು ತಿಂಗಳ ಹಿಂದೆಯಷ್ಟೇ ಈ ಕೆರೆಗೆ ಮಲಪ್ರಭಾ ನೀರನ್ನು ತುಂಬಿಸಿದ್ದರಿಂದ ಈ ನೀರನ್ನೇ ಗ್ರಾಮಸ್ಥರು ಬಳಸುತ್ತಿದ್ದರು.

ಖಾಲಿ ಮಾಡಿದರೆ ಮತ್ತೆ ತುಂಬಿಸುವುದು ಕಷ್ಟ ಎಂಬ ಸಂಗತಿಯನ್ನು ಗ್ರಾಮಸ್ಥರಿಗೆ ಮನವರಿಕೆ ಮಾಡಿಕೊಡಲು ಎರಡು ಸಭೆಗಳನ್ನು ನಡೆಸಲಾಯಿತು.ಆದರೆ ಇದಕ್ಕೆ ಒಪ್ಪದ ಗ್ರಾಮಸ್ಥರು ಕೆರೆ ಖಾಲಿ ಮಾಡಲು ಪಟ್ಟು ಹಿಡಿದರು. ಹೀಗಾಗಿ, ಕಳೆದ ಮೂರು ದಿನಗಳಿಂದ 13 ಪಂಪ್‌ಸೆಟ್‌ ಇಟ್ಟು ಕೆರೆಯ ನೀರನ್ನು ಮಲಪ್ರಭಾ ಬಲದಂಡೆ ಕಾಲುವೆಗೆ ಹರಿಯಬಿಡಲಾಗುತ್ತಿದೆ ಎಂದು ಗ್ರಾಮ ಪಂಚಾಯ್ತಿಯ ಸಿಬ್ಬಂದಿಯೊಬ್ಬರು ತಿಳಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ತಾಲ್ಲೂಕು ಪಂಚಾಯ್ತಿ ಇಒ ಪವಿತ್ರಾ ಪಾಟೀಲ, ‘ಕೆರೆಯ ನೀರನ್ನು ಹೊರಹಾಕದಂತೆ ಗ್ರಾಮ ಪಂಚಾಯ್ತಿಗೆ ಸೂಚನೆ ನೀಡಿದ್ದೆವು. ಆದರೆ, ಗ್ರಾಮಸ್ಥರು ಕೆರೆ ಖಾಲಿ ಮಾಡಲು ನಿರ್ಧರಿಸಿದ್ದಾರೆ. ಗ್ರಾಮದಲ್ಲಿ ಕುಡಿಯುವ ನೀರಿಗೆ ಯಾವುದೇ ತೊಂದರೆ ಇಲ್ಲ. ಶುದ್ಧ ಕುಡಿಯುವ ನೀರಿನ ಘಟಕ ಇದ್ದು, ಅದಕ್ಕೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT