ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾರ್ ಮಾಲೀಕನ ಮೇಲೆ ‘ಅಬಕಾರಿ’ ದರ್ಪ

₹2 ಲಕ್ಷ ಲಂಚ ಕೊಡದಿದ್ದಕ್ಕೆ ಎಳೆದೊಯ್ಯಲು ಯತ್ನಿಸಿದರು: ಆರೋಪ
Last Updated 7 ಫೆಬ್ರುವರಿ 2020, 9:59 IST
ಅಕ್ಷರ ಗಾತ್ರ

ಹುಬ್ಬಳ್ಳಿ: ಇಲ್ಲಿನ ಕಾರವಾರ ರಸ್ತೆಯಲ್ಲಿರುವ ಪ್ರಿನ್ಸ್‌ ಪಾಯಿಂಟ್ (ಗೋಲ್ಡನ್ ವೈನ್ಸ್‌) ಬಾರ್‌ ಮೇಲೆ ದಾಳಿ ನಡೆಸಿದ ಬೆಳಗಾವಿಯಿಂದ ಬಂದಿದ್ದ ಅಬಕಾರಿ ಅಧಿಕಾರಿಗಳು, ಬಾರ್ ಮಾಲೀಕನನ್ನು ನೆಲದ ಮೇಲೆ ಎಳೆದಾಡಿದ್ದಾರೆ. ಘಟನೆಯ ವಿಡಿಯೊ ದೃಶ್ಯಾವಳಿ ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿದ್ದು ವೈರಲ್ ಆಗಿವೆ.

ಮಧ್ಯಾಹ್ನ ಬಂದ ಮೂವರು ಅಧಿಕಾರಿಗಳು ಬಾರ್‌ನೊಳಗೆ ತಪಾಸಣೆ ನಡೆಸಿದ್ದಾರೆ. ಈ ವೇಳೆ, ತೆರೆದ ಬಾಟಲಿಗಳಲ್ಲಿ ಇಟ್ಟಿದ್ದ ಮದ್ಯವನ್ನು ನೋಡಿ, ನಕಲಿ ಮದ್ಯ ಮಾರಾಟ ಮಾಡುತ್ತಿದ್ದೀರಾ ಎಂದು ಮಾಲೀಕ ಶ್ರೀನಿವಾಸ ಜಿತೂರಿ ಅವರನ್ನು ಪ್ರಶ್ನಿಸಿದ್ದಾರೆ. ಅಸಲಿ ಮದ್ಯವನ್ನೇ ಮಾರಾಟ ಮಾಡುತ್ತಿರುವುದಾಗಿ ಜಿತೂರಿ ಹೇಳಿದ್ದಾರೆ.

ಸ್ಥಳದಿಂದ ಹೊರಟ ಅಧಿಕಾರಿಗಳು, ಮದ್ಯದ ಬಾಟಲಿಗಳನ್ನು ತೆಗೆದುಕೊಂಡು ಸಮೀಪದ ಶೀತಲ್‌ ಬಾರ್‌ಗೆ ತೆರಳಿದರು. ಅವರನ್ನು ಹಿಂಬಾಲಿಸಿದ ಜಿತೂರಿ, ಬಾಟಲಿಗಳನ್ನು ವಾಪಸ್ ಕೊಡುವಂತೆ ಕೇಳಿದ್ದಾರೆ. ಆಗ ಪರಸ್ಪರ ಮಾತಿನ ಚಕಮಕಿ ನಡೆದಿದೆ. ಈ ವೇಳೆ ಅಧಿಕಾರಿಗಳು ಜಿತೂರಿ ಅವರನ್ನು ಬಂಧಿಸಿ ಕರೆದೊಯ್ಯಲು ಯತ್ನಿಸಿದಾಗ, ಇಷ್ಟೆಲ್ಲಾ ರಾದ್ಧಾಂತವಾಗಿದೆ ಎಂದು ಸಿಬ್ಬಂದಿ ತಿಳಿಸಿದರು.

₹2 ಲಕ್ಷ ಕೇಳಿದರು

‘ಅಧಿಕಾರಿಗಳು ಬಾರ್‌ ತಪಾಸಣೆ ನಡೆಸಿ ಎಲ್ಲವೂ ಸರಿ ಇದೆ ಎಂದರು. ಬಳಿಕ, ಒಂದಿಷ್ಟು ಬಾಟಲಿಗಳನ್ನು ತೆಗೆದುಕೊಂಡು ಶೀತಲ್ ಬಾರ್‌ಗೆ ಹೋದರು. ಅವುಗಳನ್ನು ವಾಪಸ್ ಪಡೆಯುಲು ಹೋದಾಗ, ₹2 ಲಕ್ಷ ಕೊಡು ಎಂದು ಬೇಡಿಕೆ ಇಟ್ಟರು. ನಾನು ನಿರಾಕರಿಸಿದೆ. ನಿಂದು ಅತಿಯಾಯ್ತು, ಹಣ ಕೊಡದಿದ್ದರೆ ಮೇಲಿನವರಿಗೆ ಹೇಳಿ ಬಾರ್ ಪರವಾನಗಿ ರದ್ದುಪಡಿಸುತ್ತೇವೆ ಎಂದು ಬೆದರಿಕೆ ಹಾಕಿದರು. ಬಳಿಕ, ನನ್ನ ಮೇಲೆ ಹಲ್ಲೆ ನಡೆಸಿ ಕರೆದೊಯ್ಯಲು ಯತ್ನಿಸಿದರು. ನಾನು ಎಷ್ಟೇ ಬೇಡಿಕೊಂಡರೂ ಬಿಡದೆ, ಬಾರ್ ಆಚೆಗೆ ಎಳೆದುಕೊಂಡು ಹೋದರು’ ಎಂದು ಶ್ರೀನಿವಾಸ ಜಿತೂರಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ಘಟನೆಯನ್ನು ಬಾರ್ ಅಂಡ್ ರೆಸ್ಟೊರೆಂಟ್ ಸಂಘದ ಗಮನಕ್ಕೆ ತಂದಿದ್ದೇನೆ. ಈ ಕುರಿತು ರಾಜ್ಯಮಟ್ಟದಲ್ಲಿ ಪ್ರತಿಭಟಿಸುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಅಧಿಕಾರಿಗಳ ಲಂಚ ದಾಹದಿಂದ ನಾವು ವಹಿವಾಟು ನಡೆಸುವುದೇ ಕಷ್ಟವಾಗಿದೆ. ಇವರು ಕೇಳಿದಷ್ಟು ಹಣವನ್ನು ನಾವು ಎಲ್ಲಿಂದ ತರಬೇಕು? ಹೀಗಾದರೆ, ನಾವು ಬದುಕುವುದು ಹೇಗೆ?’ ಎಂದು ಪ್ರಶ್ನಿಸಿದರು.

ಏನಾಯ್ತೆಂದು ಗೊತ್ತಿಲ್ಲ

ಈ ಕುರಿತು ಪ್ರತಿಕ್ರಿಯಿಸಿದ ಧಾರವಾಡ ಜಿಲ್ಲಾ ಅಬಕಾರಿ ಉಪ ಆಯುಕ್ತ, ‘ಬೆಳಗಾವಿಯಿಂದ ಬಂದಿದ್ದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಲ್ಲಿ ಏನು ನಡೆಯಿತು ಎಂದು ನಮಗೆ ತಿಳಿದಿಲ್ಲ. ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುತ್ತಿರುವ ವಿಡಿಯೊ ಮತ್ತು ಚಿತ್ರಗಳನ್ನು ನೋಡಿದಾಗ ನನಗೆ ವಿಷಯ ಗೊತ್ತಾಯಿತು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT